ಹನೂರು,ಜ.11- ಮಧ್ಯಾಹ್ನದ ಬಿಸಿಯೂಟ ಸೇವಿಸಿ 70ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ ಗೊಂಡಿರುವ ಘಟನೆ ವಡಕೆಹಳ್ಳ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾನ ಜರುಗಿದೆ. ತಾಲ್ಲೂಕಿನ ವಡಕೆಹಳ್ಳ ಶಾಲೆಯಲ್ಲಿ ಎಂದಿನಂತೆ ಮಧ್ಯಾಹ್ನದ ಬಿಸಿಯೂಟ ತಯಾರಾಗಿದೆ. ಅಡಿಗೆ ಸಹಾಯಕರ ನಿರ್ಲಕ್ಷ್ಯದಿಂದ ಸಾಂಬಾರಿಗೆ ಹಲ್ಲಿ ಬಿದ್ದಿದ್ದು ಅದನ್ನು ಗಮನಿಸದೆ ಮಕ್ಕಳಿಗೆ ಊಟ ಬಡಿಸಲಾಗಿತ್ತು, ಇದನ್ನು ಸೇವಿಸಿದ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ ಗೊಂಡಿದ್ದಾರೆ.
ಬಳಿಕ ಮಕ್ಕಳು ವಾಂತಿ ಮಾಡಿ ಕೊಂಡು ನಿತ್ರಾಣ ಗೊಳ್ಳುತ್ತಿದ್ದಂತೆ ಮಕ್ಕಳು ಮತ್ತು ಪೋಷಕರು ಸಾಂಬಾರಿನ ಪಾತ್ರೆ ಪರಿಶೀಲಿಸಿದಾಗ ಹಲ್ಲಿ ಬಿದ್ದಿರುವುದು ಕಂಡು ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಅಸ್ವಸ್ಥಗೊಂಡ ಮಕ್ಕಳನ್ನು ಕೂಡಲೇ ಕೌದಳ್ಳಿ ಮತ್ತು ರಾಮಾಪುರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಅಸ್ವಸ್ಥಗೊಂಡಿದ್ದರಿಂದ ಹನೂರಿನ ಆಸ್ಪತ್ರೆಗಳಿಗೂ ಮಕ್ಕಳನ್ನು ದಾಖಲಿಸಲಾಗಿದೆ.
ಆತಂಕಗೊಂಡ ಹಲವು ಪೋಷಕರು ತಾವೇ ಸ್ವತಃ ತಮ್ಮ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೂ ಕರೆದೊಯ್ದರು. ಶಾಲೆಯಲ್ಲಿ 95ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದು 70ಕ್ಕೂ ಹೆಚ್ಚು ಮಕ್ಕಳು ಬಿಸಿಯೂಟ ಸೇವಿಸಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಕಾರಿ ಟಿ.ಆರ್.ಸ್ವಾಮಿ ಭೇಟಿ ನೀಡಿ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾದರು. ವೈದ್ಯ ಡಾ.ರಾಜೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೋಷಕರು ಗಾಬರಿಯಾಗದಂತೆ ಧೈರ್ಯ ತುಂಬುವ ಕೆಲಸ ಮಾಡಿದರು. ಮಕ್ಕಳ ಪ್ರಥಮ ಚಿಕಿತ್ಸೆ ಕಡೆ ಹೆಚ್ಚು ಗಮನ ಹರಿಸಿ ಚಿಕಿತ್ಸೆ ನೀಡಿದರು.
ಈ ಶಾಲೆಯಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ಘಟನೆ ನಡೆದಿದ್ದು, ಪೋಷಕರ ನಿದ್ದೆ ಕೆಡಿಸಿದ ಶಾಲಾ ಆಡಳಿತ ಮಂಡಳಿ ಇನ್ನೂ ಬುದ್ದಿ ಕಲಿತಿಲ್ಲ. ಆಡುಗೆ ಸಹಾಯಕರು ಸಹ ನಿರ್ಲಕ್ಷ್ಯರಾಗಿದ್ದಾರೆ. ಇದಕ್ಕೆ ಮುಖ್ಯ ಶಿಕ್ಷಕರು ಶಿಕ್ಷಕರ ಬೇಜವಾಬ್ದಾರಿಯೇ ಘಟನೆಗೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದರು.
ಜನಾಶ್ರಯ ಟ್ರಸ್ಟ್ ಸೇವೆಗೆ ಶ್ಲಾಘನೆ : ಹಲ್ಲಿ ಬಿದ್ದ ಊಟ ಸೇವೆಯಿಂದ ಮಕ್ಕಳು ಅಸ್ವಸ್ಥಗೊಂಡ ವಿಷಯ ತಿಳಿಯುತ್ತಿದ್ದಂತೆ ಜನಧ್ವನಿ ಬಿ.ವೆಂಕಟೇಶ್ ರವರ ಆಪ್ತ ಕಾರ್ಯದರ್ಶಿ ಲೋಕೇಶ್ ಜತ್ತಿ ಸೇರಿದಂತೆ ಟ್ರಸ್ಟ್ ನ ಪಧಾಕಾರಿಗಳು ಮತ್ತು ಬೆಂಬಲಿತ ಬಿಜೆಪಿ ಮೋರ್ಚ್ ಅಧ್ಯಕ್ಷರುಗಳು ಆಗಮಿಸಿ ಮಕ್ಕಳನ್ನು ಆಸ್ಪತ್ರೆ ಸೇರಿಸಿ ಚಿಕಿತ್ಸೆ ಕೊಡಿಸುವಲ್ಲಿ ಮಾನವೀಯತೆ ಮೆರೆದರು.
