ಬೇಜವಾಬ್ದಾರಿ ಬಿಬಿಎಂಪಿಯ ಮತ್ತೊಂದು ಎಡವಟ್ಟು, ಸ್ವಲ್ಪದರಲ್ಲೇ ಬದುಕಿತು ಹಿರಿಜೀವ

ಬೆಂಗಳೂರು, ಮಾ.25-ಬಿಬಿಎಂಪಿಯ ಎಡವಟ್ಟಿನಿಂದ ಮತ್ತೊಂದು ಹಿರಿಯ ಜೀವ ಪ್ರಾಣಾಪಾಯದಿಂದ ಪಾರಾಗಿರುವ ವರದಿ ತಡವಾಗಿ ಬೆಳಕಿಗೆ ಬಂದಿದೆ.ರಸ್ತೆ ಬದಿ ಆಗೆದು ಹಾಗೆ ಬಿಟ್ಟಿದ್ದ ಗುಂಡಿಗೆ ಬಿದ್ದ 70 ವರ್ಷದ ವೃದ್ದರನ್ನು ಸ್ಥಳೀಯರು ಕಾಪಾಡಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ವೈದ್ಯ ಸಂತೋಷ್ ಅವರು ಬಿಬಿಎಂಪಿ ಕಾರ್ಯವೈಖರಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ನಡೆದದ್ದು ಇಷ್ಟು… ಇಂದಿರಾನಗರದ 100 ಅಡಿ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿನ್ನು ಬಿಬಿಎಂಪಿ ನಡೆಸುತ್ತಿದೆ.ಕಾಮಗಾರಿಯ ಮೊದಲ ಹಂತವಾಗಿ ರಸ್ತೆ ಬದಿಯ ಮೋರಿ ಅಗೆದು ಹಾಕಿ ಹಾಗೆ ಬಿಡಲಾಗಿದೆ.ಮೋರಿ ಸಮೀಪವೇ ಹಲವಾರು ವ್ಯಾಪಾರ ಮಳಿಗೆಗಳಿವೆ. ಆದರೂ ಮೋರಿ ದಾಟಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿಲ್ಲ.

ಮೋರಿ ದಾಟಿ ಮಳಿಗೆಗಳಿಗೆ ತೆರಳಲು ಅಲ್ಲೊಂದು ಇಲ್ಲೊಂದು ಸ್ಲಾಬ್ ಅಳವಡಿಸಲಾಗಿದೆ. ಕೆಲವು ಕಡೆ ಸ್ಲಾಬ್‍ಗಳು ಅಲುಗಾಡುತ್ತಿದ್ದರೂ ಸಂಬಂಧಪಟ್ಟವರು ನಿರ್ಲಕ್ಷ್ಯ ಧೋರಣೆ ತಳೆದಿದ್ದರು ಎನ್ನಲಾಗಿದೆ.ಕೆಲ ದಿನಗಳ ಹಿಂದೆ 100 ಅಡಿ ರಸ್ತೆಯಲ್ಲಿ ಬಟ್ಟೆ ಅಂಗಡಿಗೆ ಬಂದಿದ್ದ ಡಾ.ಸಂತೋಷ್ ಅವರು ವ್ಯಾಪಾರ ಮುಗಿಸಿ ವಾಪಸ್ಸಾಗುವಾಗ ಮೋರಿ ದಾಟಲು ಅಳವಡಿಸಿದ್ದ ಅಲುಗಾಡುವ ಸ್ಲಾಬ್ ಮೇಲೆ ಕಾಲಿಟ್ಟಿದ್ದರಿಂದ 70 ವರ್ಷದ ವೈದ್ಯರು ಆಯತಪ್ಪಿ ಮೋರಿಗೆ ಉರುಳಿಬಿದ್ದರು.

ತಕ್ಷಣ ಅಕ್ಕಪಕ್ಕದವರು ಮೋರಿಗೆ ಬಿದ್ದ ವೃದ್ದರನ್ನು ಕಾಪಾಡಿ ಆಸ್ಪತ್ರೆಗೆ ಸೇರಿಸಿದರು. ಬಿದ್ದ ರಭಸಕ್ಕೆ ವೈದ್ಯರ ತಲೆಗೆ ಗಾಯವಾಗಿದೆ. ಮೈ ಪೂರಾ ಪರಚಿ ಹೋಗಿದೆ.ವೃದ್ದರು ಮೋರಿಗೆ ಬೀಳುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಘಟನೆ ನಡೆದು 20 ದಿನಗಳೇ ಕಳೆದರೂ ಬಿಬಿಎಂಪಿ ವತಿಯಿಂದ ಯಾರೊಬ್ಬರೂ ಕೂಡ ವೃದ್ದರ ಆರೋಗ್ಯ ವಿಚಾರಿಸಿಲ್ಲ.

ವೃದ್ದರು ಬಿದ್ದ ವಿಚಾರ ಬಹಿರಂಗಗೊಂಡರೆ ಎಲ್ಲಿ ವಿಷಯ ದೊಡ್ಡದಾಗುವುದೋ ಎಂಬ ಭೀತಿಯಿಂದ ಬಿಬಿಎಂಪಿಯವರು ಅಲುಗಾಡುವ ಸ್ಲಾಬ್ ತೆಗೆದು ಹೊಸ ಸ್ಲಾಬ್ ಅಳವಡಿಸಿ ತಣ್ಣಗಾಗಿದ್ದಾರೆ.ಗುಂಡಿಗೆ ಬಿದ್ದು ಪ್ರಾಣಾಪಾಯದಿಂದ ಪಾರಾಗಿರುವ ವೈದ್ಯರು ಚೇತರಿಸಿಕೊಂಡ ನಂತರ ಬಿಬಿಎಂಪಿಯವರ ಬೇಜವಬ್ದಾರಿ ಕೆಲಸದ ಬಗ್ಗೆ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಗುಂಡಿಗೆ ಬಿದ್ದು ತಲೆಗೆ ಪೆಟ್ಟಾಗಿರುವುದರಿಂದ ನನಗೆ ಪದೆ ಪದೆ ತಲೆ ಸುತ್ತು ಬರುತ್ತದೆ, ಮಾತ್ರೆ ತೆಗೆದುಕೊಂಡರೆ ಮಾತ್ರ ಸರಿ ಹೋಗುತ್ತದೆ. ನನಗೆ ಆದ ಇಂತಹ ನೋವು ಮತ್ತೆ ಯಾರಿಗೂ ಆಗಬಾರದು, ಸಿಲಿಕಾನ್ ಸಿಟಯಲ್ಲಿ ಓಡಾಡುವ ಹಿರಿಯ ನಾಗರೀಕರಿಗೆ ಯಾವುದೆ ರೀತಿಯ ತೊಂದರೆ ಆಗಬಾರದು. ಹೀಗಾಗಿ ಇನ್ನು ಮುಂದಾದರೂ ಬೇಜವಬ್ದಾರಿ ಕೆಲಸ ಮಾಡುವುದನ್ನು ಬಿಡಿ ಎಂದು ಡಾ.ಸಂತೋಷ್ ಮನವಿ ಮಾಡಿಕೊಂಡಿದ್ದಾರೆ.

Sri Raghav

Admin