ಶಾಕಿಂಗ್ ನ್ಯೂಸ್ : 24 ಗಂಟೆಯಲ್ಲಿ 72 ಸಾವಿರ ಮಂದಿಗೆ ಕೊರೋನಾ ಅಟ್ಯಾಕ್..!

ನವದೆಹಲಿ,ಏ.1- ದೇಶದಲ್ಲಿ ತೀವ್ರ ಆತಂಕಕಾರಿಯಾಗಿ ಹೆಚ್ಚುತ್ತಿರುವ ಕೋವಿಡ್ ಮತ್ತೊಮ್ಮೆ ಸ್ಪೋಟಿಸಿದ್ದು, ನಿನ್ನೆ ಒಂದೇ ದಿನ 72,330 ಮಂದಿಗೆ ಸೋಂಕು ತಗುಲಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಬೆಳಗ್ಗೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,22,21,665 ರಷ್ಟಾಗಿದೆ.

ನಿನ್ನೆ ಒಂದೇ ದಿನ 72ಸಾವಿರ ಮಂದಿಗೆ ಸೋಂಕು ತಗುಲಿದ್ದು, ತೀವ್ರ ಆತಂಕ ಸೃಷ್ಟಿಸಿದೆ. ಕಳೆದ ವರ್ಷ ಸೋಂಕಿನ ಭೀತಿ ಆವರಿಸಿದ ಸಂದರ್ಭದಲ್ಲಿ ಈ ಮಟ್ಟಿಗೆ ಸೋಂಕು ಹೆಚ್ಚಾಗಿತ್ತು. ಅಧಿಕೃತ ಮಾಹಿತಿ ಪ್ರಕಾರ 2020ರ ಅಕ್ಟೋಬರ್ 11ರಂದು ದಾಖಲಾಗಿದ್ದ ಅತಿ ಹೆಚ್ಚು ಸೋಂಕಿನ ಪ್ರಮಾಣ ಈಗ ಮತ್ತೆ ಮರುಕಳಿಸಿದೆ. ನಿನ್ನೆ 459 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು 1,62,922 ಮಂದಿ ಜೀವ ಕಳೆದುಕೊಂಡಂತಾಗಿದೆ. ಕಳೆದ 22 ದಿನಗಳಿಂದ ಸೋಂಕಿನ ಪ್ರಮಾಣ ನಿರಂತರವಾಗಿ ಏರಿಕೆಯಾಗುತ್ತಲೇ ಇದ್ದು, ಸಾವಿನ ಪ್ರಮಾಣವೂ ಹೆಚ್ಚಾಗುತ್ತಿದೆ.

ಕೋವಿಡ್‍ನ ಎರಡನೇ ಅಲೆ ನಿಯಂತ್ರಿಸಲು ಸರ್ಕಾರಗಳು ಸಾಕಷ್ಟು ಪ್ರಯತ್ನಪಡುತ್ತಿವೆ. ಆದರೂ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5,84,055 ಇದ್ದು, ಒಟ್ಟು ಸೋಂಕಿನ ಪ್ರಮಾಣದಲ್ಲಿ ಶೇ.4.78ರಷ್ಟಿದೆ. ಗುಣಮುಖರಾಗುತ್ತಿರುವವರ ಪ್ರಮಾಣ ಶೇ.93.89ರಷ್ಟಿದ್ದು, ಈವರೆಗೂ 1,14,74,683 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಕೇಂದ್ರದ ಐಸಿಎಂಆರ್ 24,47,98,621 ಮಂದಿಯನ್ನು ಈವರೆಗೂ ತಪಾಸಣೆಗೆ ಒಳಪಡಿಸಿದ್ದು, ನಿನ್ನೆ 11,25,681 ಮಂದಿಯ ಮಾದರಿ ಸಂಗ್ರಹಿಸಲಾಗಿತ್ತು. ಅದರಲ್ಲಿ 73ಸಾವಿರ ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.

ಜೀವ ಹಾನಿಯಲ್ಲಿ ಈಗಲೂ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ನಿನ್ನೆ ಇಲ್ಲಿ 227 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪಂಜಾಬ್‍ನಲ್ಲಿ 55, ಚತ್ತೀಸ್‍ಗಢದಲ್ಲಿ 39, ಕರ್ನಾಟಕದಲ್ಲಿ 26, ತಮಿಳುನಾಡಿನಲ್ಲಿ 19, ಕೇರಳದಲ್ಲಿ 15, ದೆಹಲಿ, ಉತ್ತರ ಪ್ರದೇಶದಲ್ಲಿ ತಲಾ 11 ಮಂದಿ ಸಾವನ್ನಪ್ಪಿದ್ದಾರೆ.

ಕರ್ನಾಟಕದಲ್ಲೂ ಕೂಡ ಕೋವಿಡ್ ಸೋಂಕು ಸ್ಪೋಟಿಸಿದ್ದು, ನಿನ್ನೆ ಸಂಜೆ ವೇಳೆಗೆ 4,225 ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ 9,97,004 ಮಂದಿಗೆ ಸೋಂಕು ತಗುಲಿದ್ದು, ಇದೇ ಪ್ರಮಾಣದಲ್ಲಿ ಸೋಂಕು ಹರಡಲಾರಂಭಿಸಿದರೆ ಇಂದು ಸಂಜೆ ವೇಳೆಗೆ ಸೋಂಕಿತರ ಸಂಖ್ಯೆ 10 ಲಕ್ಷ ದಾಟುವ ಸಾಧ್ಯತೆ ಇದೆ.