ನವದೆಹಲಿ, ಜ.26- ಭಾರತವು ಇಂದು ತನ್ನ 73ನೆ ಗಣರಾಜ್ಯೋತ್ಸವವನ್ನು ಆಚರಿಸಿಕೊಂಡಿದ್ದು ದೇಶದ ಮಿಲಿಟರಿ ಶಕ್ತಿ ಮತ್ತು ಸಾಂಸ್ಕøತಿಕ ವೈವಿಧ್ಯ ರಾಜಪಥದಲ್ಲಿ ನಡೆದ ಪಥ ಸಂಚಲನದಲ್ಲಿ ಅನಾವರಣಗೊಂಡಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡುವ ಮೂಲಕ ದೇಶದ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು.
ಬೆಳಗ್ಗೆ 10 ಗಂಟೆಗೆ ರಾಜಪಥದಲ್ಲಿ ನಿಗದಿಯಾಗಿದ್ದ ಪಥಸಂಚಲನ ಉತ್ತಮವಾಗಿ ಕಾಣಿಸಲಿ ಎಂಬ ಕಾರಣಕ್ಕೆ ಅರ್ಧ ಗಂಟೆ ತಡವಾಗಿ ಆರಂಭಗೊಂಡಿತು. ಈ ವರ್ಷದ ಪಥ ಸಂಚಲನವು ಭಾರತೀಯ ವಾಯು ಪಡೆಯ 75 ವಿಮಾನಗಳು ಮತ್ತು ಹೆಲಿಕಾಪ್ಟರ್‍ಗಳ ಪ್ರದರ್ಶನವನ್ನೊಳಗೊಂಡಿತ್ತು.
ರಾಷ್ಟ್ರವ್ಯಾಪಿ ವಂದೇ ಭಾರತಂ ನೃತ್ಯ ಸ್ಪರ್ಧೆ ಮೂಲಕ ಆಯ್ಕೆ ಮಾಡಲಾದ 400 ನೃತ್ಯಪಟುಗಳು ಸಾಂಸ್ಕøತಿಕ ಪ್ರದರ್ಶನ ನೀಡಿದರು. ನ್ಯಾಷನಲ್ ಕೆಡೆಟ್ ಕಾಪ್ರ್ಸ್(ಎನ್‍ಸಿಸಿ)ನ ಷಹೀದೋಂಕೋ ಶತ್‍ಶತ್ ನಮನ್ ಕಾರ್ಯಕ್ರಮ ಬೃಹತ್ ಎಲ್‍ಇಡಿ ಪರದೆಗಳ ಮೇಲೆ ಪ್ರದರ್ಶನಗೊಂಡಿತು.
ಜನತೆಗೆ ಎಂವೈಜಿಒವಿಪೋರ್ಟಲ್‍ನಲ್ಲಿ ನೋಂದಾಯಿಸಿ ಈ ಕಾರ್ಯಕ್ರಮವನ್ನು ಆನ್‍ಲೈನ್‍ನಲ್ಲಿ ವೀಕ್ಷಿಸುವಂತೆ ಸೂಚಿಸಲಾಗಿತ್ತು. ಅವರಿಗೆ ಅತ್ಯುತ್ತಮ ಕವಾಯತು ಪ್ರದರ್ಶಿಸುವ ತುಕಡಿ ಮತ್ತು ಸ್ತಬ್ಧ ಚಿತ್ರಗಳಿಗಾಗಿ ಜನಪ್ರಿಯ ಆಯ್ಕೆ ವರ್ಗದಲ್ಲಿ ಮತದಾನ ಮಾಡಲೂ ಅವಕಾಶ ನೀಡಲಾಗಿದೆ.
ಎರಡು ಲಸಿಕೆ ಪಡೆದ ವಯಸ್ಕರು ಮತ್ತು ಒಂದು ಲಸಿಕೆ ಪಡೆದ 15 ವರ್ಷಕ್ಕೆ ಮೇಲ್ಪಟ್ಟ ಮಕ್ಕಳಿಗೆ ಮಾತ್ರ ಪರೇಡ್‍ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಕೋವಿಡ್ ಪಿಡುಗಿನ ಕಾರಣ ಈ ಬಾರಿ ವಿದೇಶೀ ಗಣ್ಯ ಅತಿಥಿ ಮತ್ತು ವಿದೇಶೀ ಕವಾಯತು ತುಕಡಿಗಳು ಇರಲಿಲ್ಲ. ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಪಥ ಸಂಚಲನ ಆರಂಭಗೊಂಡಿತು. ಪ್ರಧಾನಿ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಪಥ ಸಂಚಲನ ನಡೆಯಿತು.
ರಾಷ್ಟ್ರ ರಾಜಧಾನಿ ಹೃದಯಭಾಗದಲ್ಲಿರುವ ರಾಜಪಥದಲ್ಲಿ ಸಾಗಿದ ಪಥಸಂಚಲನದಲ್ಲಿ ಹೊಸ ಸಮವಸ್ತ್ರಗಳು ಮತ್ತು ಶಸ್ತ್ರಾಸ್ತ್ರಗಳೊಂದಿಗೆ ಹೆಜ್ಜೆ ಹಾಕಿದ ಭಾರತೀಯ ಸೇನಾ ತುಕಡಿಗಳು ಗಮನಸೆಳೆದವು. ನೌಕಾ ಪಡೆಯ ತುಕಡಿಯಲ್ಲಿ ಒಟ್ಟು 96 ಯುವ ನಾವಿಕರು ಮತ್ತು ನಾಲ್ವರು ಅಧಿಕಾರಿಗಳು ಇದ್ದರು. ಭಾರತೀಯ ನೌಕಾ ಪಡೆಯ ಬಹುಮುಖಿ ಸಾಮಥ್ರ್ಯವನ್ನು ಬಿಂಬಿಸುವ ನೌಕಾಪಡೆಯ ಸ್ತಬ್ಧಚಿತ್ರ ಕಂಗೊಳಿಸಿತು.
96 ವಿಮಾನ ಚಾಲಕರು ಮತ್ತು ನಾಲ್ವರು ಅಧಿಕಾರಿಗಳು ವಾಯುಪಡೆ ತುಕಡಿಯಲ್ಲಿ ಇದ್ದರು. ಭಾರತೀಯ ವಾಯುಪಡೆ ಭವಿಷ್ಯವನ್ನು ಬದಲಾಯಿಸುತ್ತಿದೆ ಎಂಬುದು ಈ ಬಾರಿಯ ಸ್ತಬ್ಧಚಿತ್ರದ ಧ್ಯೇಯವಾಕ್ಯವಾಗಿತ್ತು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ದೇಶದ ರಕ್ಷಣಾ ತಾಂತ್ರಿಕ ಸಾಧನೆಗಳನ್ನು ಪ್ರತಿನಿಸುವ ಎರಡು ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಿತು.
ಭಾರತೀಯ ಕರಾವಳಿ ಕಾವಲುಪಡೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ, ದೆಹಲಿ ಪೊಲೀಸ್, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ , ಸಶಸ್ತ್ರ ಸೀಮಾಬಲ, ಗಡಿಭದ್ರತಾ ಪಡೆ, ನ್ಯಾಷನಲ್ ಕೆಡೆಟ್ ಕಾಪ್ರ್ಸ್‍ನ ಬಾಲಕರು ಮತ್ತು ಬಾಲಕಿಯರ ಕವಾಯತು ತುಕಡಿಗಳು ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ತುಕಡಿಗಳು ಪಥಸಂಚಲನದಲ್ಲಿ ಪಾಲ್ಗೊಂಡವು.
ರಫೇಲ್, ತೇಜಸ್ ಸೇರಿದಂತೆ ವಾಯುಪಡೆ ಪ್ರಮುಖ ಯುದ್ಧವಿಮಾನಗಳು, 1971ರಲ್ಲಿನ ಸಮರದಲ್ಲಿ ಪಾಲ್ಗೊಂಡ ಪಿಟಿ-76 ಫಿರಂಗಿ, 75/24 ಹೂವಿಟ್ಜರ್ ಫಿರಂಗಿ ಮತ್ತು ಒಟಿ-62, ಟಿಒಪಿಎಝೆಡ್ ಸಶಸ್ತ್ರ ಸಿಬ್ಬಂದಿ ವಾಹನಗಳು ಪರೇಡ್‍ನಲ್ಲಿ ಪ್ರದರ್ಶನಗೊಂಡವು. ಅರುಣಾಚಲಪ್ರದೇಶ, ಹರಿಯಾಣ ಛತ್ತೀಸ್‍ಗಢ, ಗೋವಾ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಹಾರಾಷ್ಟ್ರ ಮೇಘಾಲಯ, ಪಂಜಾಬ್ , ಉತ್ತರಪ್ರದೇಶ ಮತ್ತು ಉತ್ತರಾಖಂಡ್ ಈ ಹನ್ನೆರಡು ರಾಜ್ಯಗಳ ಸ್ತಬ್ಧಚಿತ್ರಗಳು ರಾಜಪಥದಲ್ಲಿ ಅತ್ಯಾಕರ್ಷಕವಾಗಿ ಚಲಿಸಿದವು. ಒಂಬತ್ತು ಸಚಿವಾಲಯಗಳು ಮತ್ತು ಇಲಾಖೆಗಳ ಸ್ತಬ್ಧಚಿತ್ರಗಳು ಆಕರ್ಷಿಸಿದವು.
ಬಳಿಕ ಸಾಂಸ್ಕøತಿಕ ಕಾರ್ಯಕ್ರಮಗಳು ಮತ್ತು ಮೈನವಿರೇಳಿಸುವ ಮೋಟಾರ್ ಬೈಕ್‍ಗಳ ಪ್ರದರ್ಶನ ಗಣ್ಯರನ್ನು ಮತ್ತು ಪ್ರೇಕ್ಷಕರನ್ನು ರಂಜಿಸಿದವು. ರಾಷ್ಟ್ರಗೀತೆ ಗಾಯನ ಮತ್ತು ತ್ರಿವರ್ಣ ಬಲೂನ್‍ಗಳನ್ನು ಹಾರಿಬಿಡುವುದರೊಂದಿಗೆ ಸಮಾರಂಭ ಸಮಾರೋಪಗೊಂಡಿತು.
