ಬೆಂಗಳೂರು, ಫೆ.17- ಮುಂಬರುವ ಬಜೆಟ್‍ನಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ ಏಳನೆ ವೇತನ ಆಯೋಗ ರಚನೆ ಮಾಡುವ ಸಾಧ್ಯತೆಯ ಸುಳಿವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ. ವಿಧಾನ ಪರಿಷತ್‍ನ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‍ನ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಉತ್ತರ ನೀಡಿದ ಮುಖ್ಯಮಂತ್ರಿಯವರು, ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರ ನಡುವೆ ವೇತನ ತಾರತಮ್ಯ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ.
ರಾಜ್ಯ ಸರ್ಕಾರ ಐದಾರು ವರ್ಷಗಳಿಗೊಮ್ಮೆ ವೇತನ ಆಯೋಗವನ್ನು ರಚನೆ ಮಾಡಿ ವೇತನ ಪರಿಷ್ಕರಣೆ ಮಾಡುತ್ತಿದೆ. 2018ರಲ್ಲಿ ಅನುಷ್ಠಾನಕ್ಕೆ ಬಂದು ಆರನೇ ವೇತನ ಆಯೋಗ ಪ್ರಸ್ತುತ ಜರಿಯಲ್ಲಿದೆ. ಕೇಂದ್ರ ಸರ್ಕಾರದಲ್ಲಿ ಏಳನೇ ವೇತನ ಆಯೋಗ ಜಾರಿಯಲ್ಲಿದೆ. ರಾಜ್ಯ ಸರ್ಕಾರ ತನ್ನ ಆರ್ಥಿಕ ಇತಿಮಿತಿಗಳಲ್ಲಿ ನೌಕರರ ಅನುಕೂಲಕ್ಕಾಗಿ ಏಳನೇ ವೇತನ ಆಯೋಗ ರಚನೆ ಮಾಡಲು ಬಜೆಟ್ ನಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ರಾಜ್ಯ ಸರ್ಕಾರಿ ನೌಕರರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ನಂತಹ ಸಂಕಷ್ಟ ಸಂದರ್ಭದಲ್ಲಿ ಅವರ ಕರ್ತವ್ಯ ನಿರ್ವಹಣೆ ಶ್ಲಾಘನೀಯ. ಒಬ್ಬೊಬ್ಬರು ಎರಡು ಮೂರು ಹುದ್ದಾಗಳನ್ನು ನಿಭಾಯಿಸಿದ್ದಾರೆ. ಸರ್ಕಾರದಲ್ಲಿ ಖಾಲಿ ಇರುವ ಹುದ್ದಾಗಳ ನೇಮಕಾತಿಗೆ ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ. ಕೋವಿಡ್ ನಿಂದಾಗಿ ನೇಮಕಾತಿಗೆ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಹಂತ ಹಂತವಾಗಿ ಅದನ್ನು ಸಡಿಲಗೊಳಿಸುತ್ತಿದ್ದೇವೆ. ಅಗತ್ಯ ಇರುವ ಕಡೆ ನೇಮಕಾತಿಗಳಿಗೆ ಅವಕಾಶ ನೀಡುತ್ತಿದ್ದು, ಹೊಸ ಹುದ್ದಾಗಳ ಸೃಷ್ಟಿಸುವ ಪ್ರಕ್ರಿಯೆಯೂ ನಡೆಯುತ್ತಿದೆ ಎಂದು ವಿವರಿಸಿದರು.
ಹಲವು ವರ್ಷಗಳ ಬಳಿಕ 15 ಸಾವಿರ ಶಿಕ್ಷಕರ ನೇಮಕಕ್ಕೆ ಚಾಲನೆ ನೀಡಲಾಗಿದೆ. 16 ಸಾವಿರ ಪೊಲೀಸ್ ಹುದ್ದಗಳ ನೇಮಕಾತಿ ನಡೆಯುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿಇರುವ 14 ಸಾವಿರ ಹುದ್ದಗಳ ನೇಮಕಾತಿಗೆ ಆದೇಶ ನೀಡಲಾಗಿದೆ ಎಂದು ವಿವರಿಸಿದರು.
ಇದಕ್ಕೂ ಮುನ್ನ ಶ್ರೀಕಂಠೇಗೌಡರು, ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರ ನಡುವೆ ಭಾರೀ ಪ್ರಮಾಣದ ವೇತನ ತಾರತಮ್ಯ ಇದೆ. ಜೀವನ ನಿರ್ವಹಣೆ ವೆಚ್ಚ ಮಾತ್ರ ಒಂದೇ ರೀತಿ ಇದೆ. ರಾಜ್ಯ ಸರ್ಕಾರದಲ್ಲಿ 2 ಲಕ್ಷದ 69 ಸಾವಿರ ಹುದ್ದಗಳು ಖಾಲಿ ಇದ್ದು, ಒಬ್ಬಬ್ಬರು ಹಲವು ಹುದ್ದಗಳನ್ನು ನಿಭಾಯಿಸುತ್ತಿದ್ದಾರೆ.
ಇದರಿಂದ ರಾಜ್ಯ ಸರ್ಕಾರಕ್ಕೆ 8853 ಕೋಟಿ ರೂಪಾಯಿಗಳ ಉಳಿತಾಯವಾಗುತ್ತಿದೆ. ದೇಶದ 25 ರಾಜ್ಯಗಳಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಸಮಾನಾಂತರವಾದ ವೇತನ ನೀಡಲಾಗುತ್ತಿದೆ. ನಮ್ಮ ಸರ್ಕಾರವೂ ವೇತನವನ್ನು ಹೆಚ್ಚಿಸಬೇಕು ಅಥವಾ ಏಳನೇ ವೇತನ ಆಯೋಗವನ್ನು ರಚಿಸಬೇಕು ಎಂದು ಒತ್ತಾಯಿಸಿದರು.
