8 ಸಿಮಿ ಉಗ್ರರ ಎನ್‍ಕೌಂಟರ್ : ಪೊಲೀಸ್‍, ಸರ್ಕಾರಕ್ಕೆ ಮಾನವ ಹಕ್ಕುಗಳ ಆಯೋಗ ನೋಟಿಸ್

SIMI-01

ಭೋಪಾಲ್, ನ.1-ಸೆಂಟ್ರಲ್ ಜೈಲಿನಿಂದ ತಪ್ಪಿಸಿಕೊಂಡು ಎನ್‍ಕೌಂಟರ್‍ನಲ್ಲಿ ನಿಷೇಧಿತ ಸಿಮಿ ಉಗ್ರಗಾಮಿ ಸಂಘಟನೆಯ ಎಂಟು ಉಗ್ರರು ಹತರಾದ ಘಟನೆ ಬಗ್ಗೆ ಮಧ್ಯಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‍ಎಚ್‍ಆರ್‍ಸಿ) ಈ ಬಗ್ಗೆ ಸವಿವರವಾದ ವರದಿ ನೀಡುವಂತೆ ಕೋರಿದೆ.  ಸಿಮಿ ಉಗ್ರರ ಎನ್‍ಕೌಂಟರ್ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮಾಧ್ಯಮಗಳಲ್ಲಿ ಬಂದಿರುವ ವರದಿಗಳನ್ನು ಗಂಭೀರವಾಗಿ ಪರಿಗಣಿಸಿರುವ ಎನ್‍ಎಚ್‍ಆರ್‍ಸಿ, ಜೈಲಿನಲ್ಲೇ ವಾರ್ಡನ್ ಹತ್ಯೆ, ಉಗ್ರರ ಪರಾರಿ ಮತ್ತು ನಂತರ ನಡೆದಿದೆ ಎನ್ನಲಾದ ಎನ್‍ಕೌಂಟರ್‍ಗಳ ಬಗ್ಗೆ ಸವಿವರ ನೀಡಬೇಕೆಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯದ ಪೊಲೀಸ್ ಮಹಾ ನಿರ್ದೇಶಕರು ಮತ್ತು ಮಹಾ ನಿರೀಕ್ಷಕರು ಹಾಗೂ ಬಂದೀಖಾನೆ ಇಲಾಖೆಯ ಮಹಾ ನಿರ್ದೇಶಕರಿಗೆ ನೋಟಿಸ್‍ಗಳನ್ನು ಜಾರಿಗೊಳಿಸಿದೆ.

ಸಿಮಿ ಉಗ್ರರು ಬಾರಕ್‍ನ ಬಾಗಿಲುಗಳನ್ನು ನಕಲಿ ಕೀ ಬಳಸಿ ತೆಗೆದು ನಂತರ ಜೈಲಿನ ವಾರ್ಡನ್ ರಾಮಶಂಕರ್ ಯಾದವ್‍ರ ಕುತ್ತಿಗೆಯನ್ನು ಸ್ಟೀಲ್ ತಟ್ಟೆ, ಚಮಚಗಳಿಂದ ಭಯಾನಕವಾಗಿ ಸೀಳಿ ಕೊಂದರು. ಮೊತ್ತೊಬ್ಬ ಸಿಬ್ಬಂದಿ ಚಂದನ್‍ಸಿಂಗ್‍ರನ್ನು ಕಟ್ಟಿ ಹಾಕಿದರು. ನಂತರ ಹೊದಿಕೆಯನ್ನೇ ಹಗ್ಗವನ್ನಾಗಿ ಮಾಡಿಕೊಂಡು ಭೋಪಾಲ್ ಸೆಂಟ್ರಲ್ ಜೈಲಿನ 25 ಅಡಿ ಎತ್ತರದ ಗೋಡೆಯನ್ನು ಏರಿ ಅಲ್ಲಿಂದ ಜಿಗಿದು ಪರಾರಿಯಾಗಿದ್ದರು. ಈ ಜೈಲಿನಲ್ಲಿ ಒಟ್ಟು 29 ಸಿಮಿ ವಿಚಾರಣಾಧೀನ ಕೈದಿಗಳಿದ್ದರು. ಇವರನ್ನು ಒಟ್ಟು ಎರಡು ಬಾರಕ್‍ಗಳಲ್ಲಿ ಇಡಲಾಗಿತ್ತು. ಇವರಲ್ಲಿ 9 ಮಂದಿ ತಪ್ಪಿಸಿಕೊಂಡಿದ್ದರು. ಅವರು ನಾಪತ್ತೆಯಾದ ಒಂಭತ್ತು ಗಂಟೆಗಳಲ್ಲೇ ಪೊಲೀಸರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ 8 ಸಿಮಿ ಉಗ್ರರು ಹತರಾದರು..

ಹತರಾದ ಎಂಟು ಮಂದಿಯಲ್ಲಿ ನಾಲ್ವರು ಬಾಂಬ್ ತಯಾರಿಕೆಯಲ್ಲಿ ಪರಿಣಿತಿ ಪಡೆದಿದ್ದರು. ಇವರೆಲ್ಲ ಬ್ಯಾಂಕ್ ದರೋಡೆ, ವಿಧ್ವಂಸಕ ಕೃತ್ಯ, ಭಯೋತ್ಪಾದನೆ ಪ್ರಚೋದನೆ ಸೇರಿದಂತೆ ಹತ್ತು ಹಲವು ಆರೋಪಗಳಲ್ಲಿ ಶಾಮೀಲಾಗಿದ್ದರು.  ಈ ಎನ್‍ಕೌಂಟರ್ ಬಗ್ಗೆ ರಾಜಕೀಯ ಕೆಸೆರೆಚಾಟ ನಡೆದಿದ್ದು. ಪರಸ್ಪರ ಆರೋಪ-ಪ್ರತ್ಯಾರೋಪಗಳು ಕೇಳಿಬಂದಿವೆ.

► Follow us on –  Facebook / Twitter  / Google+

Sri Raghav

Admin