8000 ಲೀ. ಪೆಟ್ರೋಲ್, 4000 ಲೀ. ಲೀಟರ್ ಡೀಸೆಲ್ ಮಣ್ಣುಪಾಲು
ಚಾಮರಾಜನಗರ, ಅ.9- ಚಿಕ್ಕ ಸೇತುವೆಗೆ ಪೆಟ್ರೋಲ್ ತುಂಬಿದ ಟ್ಯಾಂಕರ್ವೊಂದು ಡಿಕ್ಕಿ ಹೊಡೆದು ಉರುಳಿ ಬಿದ್ದ ಪರಿಣಾಮ ಸುಮಾರು 8 ಸಾವಿರ ಲೀಟರ್ ಪೆಟ್ರೋಲ್ ರಸ್ತೆ ಪಾಲಾಗಿದ್ದು, ಭಾರೀ ಅವಘಡವೊಂದು ತಪ್ಪಿದಂತಾಗಿದೆ. ಹಾಸನದಿಂದ ಚಾಮರಾಜನಗರ ಕಡೆಗೆ ಬರುತ್ತಿದ್ದ ಟ್ಯಾಂಕರ್ ನಗರಕ್ಕೆ ಸಮೀಪ ಬ್ರಾಹ್ಮಣರ ರುದ್ರಭೂಮಿ ಮುಂಭಾಗ ಚಿಕ್ಕ ಸೇತುವೆಗೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ. ಈ ಸಮಯದಲ್ಲಿ ಕ್ಲೀನರ್ ಹಾಗೂ ಚಾಲಕ ವಾಹನದಿಂದ ನೆಗೆದು ಅಪಘಾತದಿಂದ ಪಾರಾಗಿದ್ದಾರೆ. ಮತ್ತೊಬ್ಬನಿಗೆ ತೀವ್ರ ಗಾಯವಾಗಿದೆ. ಟ್ಯಾಂಕರ್ನಲ್ಲಿದ್ದ ಸುಮಾರು 8 ಸಾವಿರ ಲೀಟರ್ ಪೆಟ್ರೋಲ್, 4 ಸಾವಿರ ಲೀಟರ್ ಡೀಸೆಲ್ ಹರಿದು ಹೋಗಿದೆ. ನಗರದ ವೆಂಕಟೇಶ್ವರ ಬಂಕ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಸವರಾಜು ಎಂಬಾತನಿಗೆ ಗಾಯವಾಗಿದ್ದು, ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಭಾರೀ ಅನಾಹುತ ತಪ್ಪಿಸಿದ್ದಾರೆ. ಟ್ಯಾಂಕರ್ ಉರುಳಿದ್ದರಿಂದ ಯಾವುದೇ ಅನಾಹುತ ನಡೆಯದಂತೆ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಇದರಿಂದಾಗಿ ಸುಮಾರು 5 ಗಂಟೆ ಕಾಲ ಸಂಚಾರ ಅಸ್ತವ್ಯಸ್ತವಾಗಿ ಪ್ರಯಾಣಿಕರು ಪರದಾಡಬೇಕಾಯಿತು.