ಬೆಂಗಳೂರು ಅಭಿವೃದ್ಧಿಗೆ 8 ಸಾವಿರ ಕೋಟಿ

Social Share

ಬೆಂಗಳೂರು,ಫೆ.14- ರಾಜಧಾನಿ ಬೆಂಗಳೂರಿನಲ್ಲಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕಾಗಿ 8 ಸಾವಿರದ 15 ಕೋಟಿ ರೂ. ವೆಚ್ಚದ ಅನುಮೋದನೆ ನೀಡಲಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ತಿಳಿಸಿದರು. ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅನಿಯಮವನ್ನು ವ್ಯವಸ್ಥಿತ ಮತ್ತು ಪಾರದರ್ಶಕವಾಗಿ ರಚಿಸಿದೆ. ನಗರದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ಹೇಳಿದರು.
ನಗರದಲ್ಲಿ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸಿಕೊಡಲು ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ 7.5 ಕಿ.ಮೀ. ಉದ್ದದ ಮೆಟ್ರೊ ರೈಲನ್ನು ಸಾರ್ವಜನಿಕರಿಗೆ ಕಳೆದ ಆಗಸ್ಟ್‍ನಲ್ಲಿ ಮುಕ್ತಗೊಳಿಸಲಾಗಿದೆ. ಮೆಟ್ರೋ ರೈಲು ಯೋಜನೆ ಹಂತ-2ರಲ್ಲಿ 32.54 ಕಿ.ಮೀ ಉದ್ದದ ಮಾರ್ಗವನ್ನು 2022-23ರಲ್ಲಿ ಮುಕ್ತಾಯಗೊಳಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸುವುದಾಗಿ ಭರವಸೆ ನೀಡಿದರು. ಬೆಳ್ಳಂದೂರು ಮತ್ತು ವರ್ತೂರು ಕೆರೆಯ ಮಾಲಿನ್ಯ ತಡೆಗಟ್ಟಲು ಕೋರಮಂಗಲ ಹಾಗೂ ಚಳ್ಳಘಟ್ಟ ಕಣಿವೆಯಲ್ಲಿರುವ ಹಳೆಯ ತ್ಯಾಜ್ಯ ನೀರಿನ ಶುದ್ದೀಕರಣ ಘಟಕವನ್ನು ಉನ್ನತೀಕರಣ ಮಾಡಲು ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
5550 ಕೋಟಿ ಮೊತ್ತದ ಕಾವೇರಿ ನೀರು ಸರಬರಾಜಿನ 5ನೇ ಹಂತದ ಯೋಜನೆಯಿಂದ ಬೆಂಗಳೂರು ನಗರಕ್ಕೆ ಪ್ರತಿ ದಿನ 775 ದಶಲಕ್ಷ ಲೀಟರ್ ಹೆಚ್ಚುವರಿ ನೀರು ದೊರೆಯಲಿದೆ. ನಗರಕ್ಕೆ ಶುದ್ದ ನೀರು ಪೂರೈಸಲು ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಪುನಶ್ಚೇತನಗೊಳಿಸುವ ಶುದ್ದೀಕರಣ ಕಾಮಗಾರಿಗೆ ಅನುಮೋದನೆ ನೀಡಿದೆ. ಜೊತೆಗೆ ಎತ್ತಿನಹೊಳೆ ಯೋಜನೆಯಡಿ ಎರಡೂವರೆ ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದೆ ಎಂದು ವಿವರಿಸಿದರು.
ಕೊಳಚೆ ಪ್ರದೇಶಗಳಲ್ಲಿ ಎಸ್ಸಿ-ಎಸ್ಟಿ ಪಂಗಡದ ಕಾಲೋನಿಗಳಲ್ಲಿ ವಾಸಿಸುವ ಸುಮಾರು 1.3 ಲಕ್ಷ ಕುಟುಂಬಗಳಿಗೆ 10 ಸಾವಿರ ಲೀಟರ್ ಕಾವೇರಿ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಪ್ರತಿ ತಿಂಗಳು ಮೂರನೇ ಶನಿವಾರದಂದು ಜಲಮಂಡಳಿ ಬೆಂಗಳೂರು ನಗರದ 16 ವಿವಿಧ ಸ್ಥಳಗಳಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಳುತ್ತಿದೆ ಎಂದು ಹೇಳಿದರು.
ಬಿಬಿಎಂಪಿಯು 158.27 ಕಿಮೀ ಉದ್ದದ 77 ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಲು ಆಯ್ಕೆ ಮಾಡಿದೆ. 83.91 ಕಿ.ಮೀ ಉದ್ದದ ರಸ್ತೆಯನ್ನು ವೈಟ್ ಟಾಪಿಂಗ್ ರಸ್ತೆಯಾಗಿ ಪರಿವರ್ತಿಸಲಾಗಿದೆ. ಪಾದಚಾರಿ ಮಾರ್ಗವನ್ನು ಟೆಂಡರ್‍ಶೂರ್ ಮಾದರಿಯಲ್ಲಿ ಒದಗಿಸಲು 33 ಕಿ.ಮೀ ಉದ್ದದ 47 ರಸ್ತೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಕೆಎಸ್‍ಎನ್‍ಡಿಎಂಸಿ ಸಂಸ್ಥೆಯು ಪ್ರವಾಹ ಕುರಿತು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಬೃಹತ್ ಮಳೆ ನೀರುಗಾಲುವೆಯಲ್ಲಿ 28 ಸಂಖ್ಯೆ ವಾಟರ್ ಲೆವೆಲ್ ಸೆನ್ಸಾರ್‍ಗಳನ್ನು ಅಳವಡಿಸಿದೆ. ಕಳೆದ ಎರಡು ವರ್ಷಗಳ ಅವಯಲ್ಲಿ ಕರ್ನಾಟಕ ಸರ್ಕಾರವು ಮುಖ್ಯಮಂತ್ರಿಗಳ ನಗರೋತ್ಥಾನ ಕ್ರಿಯಾ ಯೋಜನೆಯಡಿ 33 ಕೆರೆಗಳ ಪುನಶ್ಚೇತನ ಹಾಗೂ ಸಮಗ್ರ ಅಭಿವೃದ್ದಿಗಾಗಿ 317.25 ಕೋಟಿ ಅನುದಾನ ಒದಗಿಸಿದೆ.
ಬಿಬಿಎಂಪಿಯು ಸುಲಭ ಸೇವಾ ವಿತರಣೆಯ ಅಂಗವಾಗಿ ಗಣಕೀಕೃತ ಕಟ್ಟಡ ನಕ್ಷೆ ಅನುಮೋದನೆ ಹಾಗೂ ಭೂ ಉಪಯೋಗ ಬದಲಾವಣೆಯನ್ನು(ಲ್ಯಾಂಡ್ ಅಂಡ್ ಬಿಲ್ಡಿಂಗ್ ಲ್ಯಾಂಡ್ ಅಪ್ರೂವಲ್ ಸಿಸ್ಟಮ್) ಆಟೋ ಪ್ಲಾನ್ ತಂತ್ರಾಂಶವನ್ನು ಉಪ ಯೋಗಿಸಿಕೊಂಡು ಆನ್‍ಲೈನ್ ಮೂಲಕ ಅನುಮೋದನೆ ನೀಡಲು ಕ್ರಮ ತೆಗೆದುಕೊಂಡಿದ್ದೇವೆ ಎಂದು ವಿವರಣೆ ನೀಡಿದರು.

Articles You Might Like

Share This Article