ಕೋವಿಡ್‍ ಪರಿಹಾರ ನಿರಾಕರಿಸಿದ 825 ಮೃತರ ಕುಟುಂಬಸ್ಥರು..!

Social Share

ಬೆಂಗಳೂರು,ಜ.5- ಕೊನೆಗೂ ಕೋವಿಡ್ ಮೃತರ ವಾರಸುದಾರರಿಗೆ ಪರಿಹಾರ ವಿತರಿಸುವ ಕೆಲಸ ಆರಂಭವಾಗಿದೆ. ಸಾವಿರಾರು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪರಿಹಾರ ಜಮೆಯಾಗಿದೆ. ಆದರೆ ಪರಿಹಾರಕ್ಕೆ ಅರ್ಹರಾದ ಹಲವು ಮಂದಿ ಪರಿಹಾರ ಮೊತ್ತವನ್ನು ನಿರಾಕರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕೋವಿಡ್ ನಿಂದ ದುಡಿಯುವ ವ್ಯಕ್ತಿಯನ್ನು ಕಳಕೊಂಡು ಅತಂತ್ರರಾದ ಬಿಪಿಎಲ್ ಕುಟುಂಬಕ್ಕೆ ರಾಜ್ಯ ಸರ್ಕಾರ 1 ಲಕ್ಷ ರೂ. ಪರಿಹಾರ ಘೋಷಿಸಿತ್ತು. ಕಳೆದ ವರ್ಷ ಜುಲೈ 8ಕ್ಕೆ ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿತ್ತು.ಬಳಿಕ ಕೇಂದ್ರ ಸರ್ಕಾರ 50,000 ರೂ. ಪರಿಹಾರವನ್ನು ಸೆಪ್ಟೆಂಬರ್ 22ಕ್ಕೆ ಘೋಷಣೆ ಮಾಡಿತ್ತು. ಆ ಮೂಲಕ ರಾಜ್ಯ ಸರ್ಕಾರದ 1 ಲಕ್ಷ ರೂ. ಹಾಗೂ ಕೇಂದ್ರ ಸರ್ಕಾರದ 50,000 ರೂ. ಸೇರಿ ಒಟ್ಟು 1.50 ಲಕ್ಷ ರೂ. ಪರಿಹಾರವನ್ನು ಮೃತ ಕೋವಿಡ್ ವಾರಸುದಾರರಿಗೆ ಕೊಡಲಾಗುತ್ತದೆ.
ಪರಿಹಾರ ಘೋಷಣೆ ಮಾಡಿದ ಆರು ತಿಂಗಳ ಬಳಿಕ ಇದೀಗ ರಾಜ್ಯ ಸರ್ಕಾರ ಪರಿಹಾರ ಮೊತ್ತವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಮಾಡುವ ಕಾರ್ಯ ಆರಂಭಿಸಿದೆ. ಡಿಸೆಂಬರ್ 27ರಂದು ಪರಿಹಾರ ವಿತರಿಸುವ ಕಾರ್ಯಕ್ಕೆ ಸಿಎಂ ಬೊಮ್ಮಾಯಿ ಚಾಲನೆ ನೀಡಿದ್ದಾರೆ.
ಕಂದಾಯ ಇಲಾಖೆ ನೀಡಿದ ಅಂಕಿಅಂಶದ ಪ್ರಕಾರ ಈವರೆಗೆ ಪರಿಹಾರ ಕೋರಿ ಸಲ್ಲಿಸಿದ್ದ 22,661 ಅರ್ಜಿಗಳನ್ನು ಅರ್ಜಿ ಸ್ವೀಕರಿಸಲಾಗಿದೆ. ಈ ಪೈಕಿ ಬಿಪಿಎಲ್ ಕುಟುಂಬದ ವಾರಸುದಾರರು 13,423 ಅರ್ಜಿ ಸಲ್ಲಿಸಿದ್ದಾರೆ.ಇನ್ನು ಎಪಿಎಲ್ ಕಾರ್ಡ್ ದಾರರು ಪರಿಹಾರ ಕೋರಿ 13,238 ಅರ್ಜಿ ಸಲ್ಲಿಸಿದ್ದಾರೆ. ಬಿಪಿಎಲ್ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಘೋಷಿಸಿರುವ 1 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ.
ಈವರೆಗೆ 25,281 ಫಲಾನುಭವಿಗಳಿಗೆ ಪರಿಹಾರ ನೀಡಲಾಗಿದೆ. ಈ ಪರಿಹಾರ ಪೈಕಿ ಕೇಂದ್ರ ಸರ್ಕಾರ ಘೋಷಿಸಿರುವ 50,000 ಪರಿಹಾರವೂ ಒಳಗೊಂಡಿದೆ ಎಂದು ಕಂದಾಯ ಇಲಾಖೆ ಸ್ಪಷ್ಟಪಡಿಸಿದೆ.ಒಟ್ಟು 4,000 ಅರ್ಜಿಗಳನ್ನು ಆಧಾರ್ ಕಾರ್ಡ್ ಇಲ್ಲದ ಕಾರಣ ಸದ್ಯಕ್ಕೆ ಪಾವತಿಯನ್ನು ತಡೆ ಹಿಡಿಯಲಾಗಿದೆ. ಅವರಿಗೆ ಆಧಾರ್ ಸಂಖ್ಯೆ ನೀಡಲು ಈಗಾಗಲೇ ಸೂಚಿಸಲಾಗಿದೆ. ಆಧಾರ್ ಕಾರ್ಡ್ ಮಾಹಿತಿ ನೀಡಿದ ತಕ್ಷಣ ಅವರ ಖಾತೆಗೂ ಪರಿಹಾರ ಹಣ ಜಮೆಯಾಗಲಿದೆ ಎಂದು ಅಕಾರಿಯೊಬ್ಬರು ತಿಳಿಸಿದ್ದಾರೆ.
# ಪರಿಹಾರ ನಿರಾಕರಿಸಿದ 825 ಮಂದಿ:
ಇತ್ತ ಸರ್ಕಾರ ವಿತರಿಸುವ ಈ ಪರಿಹಾರ ಮೊತ್ತವನ್ನು ಫಲಾನುಭವಿಗಳು ನಿರಾಕರಿಸಿರುವ ಸಂಖ್ಯೆಯೂ ಸಾಕಷ್ಟಿವೆ. ಕಂದಾಯ ಇಲಾಖೆ ನೀಡಿದ ಅಂಕಿಅಂಶದ ಪ್ರಕಾರ ಈವರೆಗೆ ಒಟ್ಟು 825 ಮಂದಿ ಫಲಾನುಭವಿಗಳು ಪರಿಹಾರ ಮೊತ್ತವನ್ನು ಪಡೆಯಲು ನಿರಾಕರಿಸಿದ್ದಾರೆ.
ಈ ಪೈಕಿ ಅತಿಹೆಚ್ಚು ಬೆಂಗಳೂರಿನ 481 ಮಂದಿ ಫಲಾನುಭವಿಗಳು ಪರಿಹಾರ ಮೊತ್ತವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.
ಉಳಿದಂತೆ ಕೋಲಾರ 55, ಬೆಂಗಳೂರು ನಗರ 37, ಧಾರವಾಡ 29, ಮೈಸೂರು 26, ಹಾಸನ 25, ದ.ಕನ್ನಡ 21 ಮಂದಿ ಫಲಾನುಭವಿಗಳು ಪರಿಹಾರವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.
ಸ್ಥಿತಿವಂತ ಕುಟುಂಬಸ್ಥ ಹಲವರು ಪರಿಹಾರ ಮೊತ್ತ ಸ್ವೀಕರಿಸಲು ನಿರಾಕರಿಸುತ್ತಿದ್ದಾರೆ ಎಂದು ಅಕಾರಿಗಳು ತಿಳಿಸಿದ್ದಾರೆ. ಇದರಲ್ಲಿ ಇತರೆ ರಾಜ್ಯಗಳ 476 ಫಲಾನುಭವಿಗಳಾಗಿದ್ದಾರೆ. ಅವರಿಗೆ ಪರಿಹಾರ ಹಣ ನೀಡಿಲ್ಲ. 1436 ಫಲಾನುಭವಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಈವರೆಗೆ ಒಟ್ಟು 3043 ಫಲಾನುಭವಿಗಳಿಗೆ ಪರಿಹಾರವನ್ನು ತಿರಸ್ಕರಿಸಲಾಗಿದೆ.

Articles You Might Like

Share This Article