ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ, ಕ್ರೂಸರ್-ಲಾರಿ ಡಿಕ್ಕಿ, 9 ಜನ ಸ್ಥಳದಲ್ಲೇ ಸಾವು..!

Social Share

ತುಮಕೂರು,ಆ.25- ತುತ್ತಿನ ಚೀಲ ತುಂಬಿಸಿ ಕೊಳ್ಳಲು ರಾಯಚೂರಿನಿಂದ ಕೂಲಿ ಕಾರ್ಮಿಕರು ಕೆಲಸ ಅರಸಿಕೊಂಡು ಕುಟುಂಬ ಸಮೇತ ಬೆಂಗಳೂರಿಗೆ ಕ್ರೂಸರ್ ವಾಹನದಲ್ಲಿ ಬರುತ್ತಿದ್ದಾಗ ಮುಂಜಾನೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂರು ವರ್ಷದ ಮಗು ಸೇರಿದಂತೆ 9 ಮಂದಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಮೃತಪಟ್ಟವರನ್ನು ಕ್ರೂಸರ್ ವಾಹನದ ಚಾಲಕ ಕೃಷ್ಣಪ್ಪ(28), ರಾಯಚೂರು ಜಿಲ್ಲೆ ಸಿರಿವಾರ ತಾಲ್ಲೂಕಿನ ಕುರಕುಂದ ಗ್ರಾಮದ ಒಂದೇ ಕುಟುಂಬದ ಸುಜಾತ(28), ಇವರ ಪತಿ ಪ್ರಭು(30), ಮಗು ವಿನೋದಪ್ರಭು(3) ಹಾಗೂ ಮಾನ್ವಿ ತಾಲ್ಲೂಕಿನ ಬಸಮ್ಮ ಶಿವಪ್ಪ(50) ಎಂದು ಗುರುತಿಸಲಾಗಿದ್ದು, ಇನ್ನು ಮೂವರ ಹೆಸರು ಸದ್ಯಕ್ಕೆ ತಿಳಿದುಬಂದಿಲ್ಲ.

BREAKING: ಶಿರಾ ಅಪಘಾತ : ಮೃತಪಟ್ಟವರ ಕುಟುಂಬಗಳಿಗೆ ತಲಾ 2ಲಕ್ಷ ರೂ. ಪರಿಹಾರ ಘೋಷಿಸಿದ ಪ್ರಧಾನಿ

14 ಮಂದಿಗೆ ಗಾಯ: ಅಪಘಾತದಲ್ಲಿ ಗಾಯಗೊಂಡಿರುವ ದುರ್ಗಮ್ಮ, ಬಾಲಾಜಿ, ಸಂದೀಪ, ಉಮೇಶ, ಯಲ್ಲಮ್ಮ, ಅನಿಲ್, ದೇವರಾಜ್, ಮೋನಿಕಾ, ನಾಗೇಶ್, ನಾಗಮ್ಮ, ವಸಂತ, ವೈಶಾಲಿ, ವಿರೂಪಾಕ್ಷ, ಲತಾ ಅವರಿಗೆ ಸಿರಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಲು 23 ಮಂದಿ ಕ್ರೂಸರ್ ವಾಹನದಲ್ಲಿ ರಾಯಚೂರಿನಿಂದ ರಾತ್ರಿ ಪ್ರಯಾಣ ಬೆಳೆಸಿದ್ದಾರೆ. ಕ್ರೂಸರ್ ವಾಹನ ಮುಂಜಾನೆ 4.30ರ ಸುಮಾರಿನಲ್ಲಿ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಹೆದ್ದಾರಿಯ ಬಾಲನೇಹಳ್ಳಿ ಗೇಟ್ ಬಳಿ ಲಾರಿಯನ್ನು ಓವರ್ ಟೇಕ್ ಮಾಡಲು ಮುನ್ನುಗ್ಗಿದಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್‍ಗೆ ಡಿಕ್ಕಿ ಹೊಡೆದಿದೆ.ಆ ಸಂದರ್ಭದಲ್ಲಿ ಇದೇ ಮಾರ್ಗದಲ್ಲಿ ಬರುತ್ತಿದ್ದ ಲಾರಿ ಈ ಕ್ರೂಸರ್ ವಾಹನಕ್ಕೆ ಅಪ್ಪಳಿಸಿದ ಪರಿಣಾಮ ಕ್ರೂಸರ್‍ನಲ್ಲಿದ್ದ 9 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೂಲಿಗೆ ಬಂದವರು ಮಸಣ ಸೇರಿದರು: ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸಬಹುದು ಎಂಬ ಆಸೆಯಿಂದ ರಾಯಚೂರು ಹಾಗೂ ಮಾನ್ವಿಯಿಂದ ಹೊರಟವರು ಕೊನೆಗೆ ಮಸಣಕ್ಕೆ ಸೇರಿದ್ದಾರೆ. 23 ಮಂದಿ ಒಂದೇ ವಾಹನದಲ್ಲಿ ಪ್ರಯಾಣಿಸುತ್ತಿದ್ದರು, ಇದರಲ್ಲಿ 9 ಮಂದಿ ಮಹಿಳೆಯರು, ಒಂದು ಮಗು ಹಾಗೂ 13 ಮಂದಿ ಪುರುಷರು ಇದ್ದರು.
ಕಡಿಮೆ ಹಣದಲ್ಲಿ ಬೆಂಗಳೂರಿಗೆ ಹೋಗಬಹುದೆಂಬ ಕಾರಣಕ್ಕೆ ಕ್ರೂಸರ್ ಹತ್ತಿದ್ದ ಈ ಮಂದಿ ಒಂದೆರೆಡು ಗಂಟೆಗಳಲ್ಲಿ ಬೆಂಗಳೂರು ಸೇರಿಕೊಳ್ಳುತ್ತಿದ್ದರು, ಆದರೆ ವಿ ಅವರನ್ನು ಸಾವಿನ ಮನೆಗೆ ಸೇರಿಸಿದ್ದು, ವಿಪರ್ಯಾಸ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್ಪಿ ರಾಹುಲ್‍ಕುಮಾರ್ ಶಹಪೂರವಾಡ್, ಎಎಸ್ಪಿ ಟಿ.ಜೆ.ಉದೇಶ್, ಡಿವೈಎಸ್ಪಿ ನವೀನ್, ಕಳ್ಳಂಬೆಳ್ಳ ಮತ್ತು ಸಿರಾ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಐಜಿಪಿ ಚಂದ್ರಶೇಖರ್ ಭೇಟಿ ನೀಡಿ ಪಡೆದುಕೊಂಡರು.

ಜಿಲ್ಲಾಸ್ಪತ್ರೆಗೆ ಡಿಸಿ ಭೇಟಿ: ಅಪಘಾತದಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ಅವರು ಭೇಟಿ ನೀಡಿ, ಗಾಯಾಳುಗಳಿಗೆ ಸಾಂತ್ವಾನ ಹೇಳಿದರು, ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕ ವೀರಭದ್ರಯ್ಯ ಅವರಿಗೆ ತಾಕೀತು ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಯಾಳುಗಳಲ್ಲಿ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಗೆ ರವಾನಿಸಲಾಗಿದ್ದು, ಕ್ರೂಸರ್ ನಲ್ಲಿದ್ದವರೆಲ್ಲ ಸಂಬಂಧಿಕರಾಗಿದ್ದು, ಸಾವನ್ನಪ್ಪಿರುವ 9 ಮಂದಿಯ ಮರಣೋತ್ತರ ಪರೀಕ್ಷೆಯನ್ನು ಶೀಘ್ರ ನಡೆಸಲು ಸೂಚಿಸಲಾಗಿದೆ ಎಂದರು.ಮೃತರ ಸಂಬಂಕರೊಂದಿಗೆ ಮಾತನಾಡಿ ನಂತರ ಶವಸಂಸ್ಕಾರದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

Articles You Might Like

Share This Article