ಬೆಂಗಳೂರು,ಜು.13- ನಂಬಿದರೆ ನಂಬಿ ಬಿಟ್ಟರೆ ಬಿಡಿ ಇಂತಹ ಕರಾಮತ್ತು ನಡೆಯಲು ಬಿಬಿಎಂಪಿಯಲ್ಲಿ ಮಾತ್ರ ಸಾಧ್ಯ. ಅದೇನಪ್ಪಾ ಅಂತಹ ಕರಾಮತ್ತು ಎಂದು ತಿಳಿದುಕೊಳ್ಳಬೇಕಾದರೆ ಈ ಸ್ಟೋರಿ ಓದಿ. 198 ವಾರ್ಡ್‍ಗಳನ್ನು ಒಳಗೊಂಡಿರುವ ಬಿಬಿಎಂಪಿಯ ಹಳೆ 41 ವಾರ್ಡ್‍ಗಳಲ್ಲಿ ಕಂದಾಯ ಪರಿವೀಕ್ಷಕರು ಹಾಗೂ 53 ವಾರ್ಡ್‍ಗಳಲ್ಲಿ ಕಂದಾಯ ವಸೂಲಿಗಾರರಿಲ್ಲ.
ಆದರೆ, ಹೊರ ವಲಯದ ಒಂದೇ ವಾರ್ಡ್‍ನಲ್ಲಿ 9 ಮಂದಿ ಆರ್‍ಐಗಳು ಹಾಗೂ 18 ಮಂದಿ ಟಿಐಗಳು ಕೆಲಸ ಮಾಡುತ್ತಿದ್ದಾರೆ ಎಂದರೆ ನೀವು ನಂಬುತ್ತಿರಾ.
ಯಾವುದಪ್ಪ ಆ ವಾರ್ಡ್ ಅಂತೀರಾ ಅದೇ 198ನೇ ವಾರ್ಡ್ ಆಗಿದ್ದ ಹೆಮ್ಮಿಗೆಪುರ ವಾರ್ಡ್. ಇಲ್ಲಿ 9 ಮಂದಿ ಆರ್‍ಐಗಳು ಹಾಗೂ 18 ಮಂದಿ ಟಿಐಗಳು ಕಾರ್ಯ ನಿರ್ವಹಿಸುತ್ತಿರುವ ಅಂಶ ಬೆಳಕಿಗೆ ಬಂದಿದೆ. ರೆವಿನ್ಯೂ ಪ್ರದೇಶಗಳು ಹಾಗೂ ರೆವಿನ್ಯೂ ಬಡಾವಣೆಗಳು ಮತ್ತು ಖಾಲಿ ಸ್ವತ್ತುಗಳು ಹೆಚ್ಚಿನ ಪ್ರಮಾಣದಲ್ಲಿರುವ ಹೊಸ ಐದು ವಲಯಗಳಲ್ಲಿ ಕಂದಾಯಾಕಾರಿಗಳು, ಸಹ ಕಂದಾಯಾಕಾರಿಗಳು, ಆರ್‍ಐಗಳು ಮತ್ತು ಟಿಐಗಳಿಗೆ ಕೈ ತುಂಬಾ ಹಣ ಸಿಗುತ್ತದೆ.
ಇಂತದೆ ಕಾರಣಕ್ಕೆ ಅತಿ ಹೆಚ್ಚು ವರಮಾನವಿರುವ ಹೆಮ್ಮಿಗೆಪುರ ವಾರ್ಡ್‍ನಲ್ಲಿ ಬರೊಬ್ಬರಿ 9 ಮಂದಿ ಆರ್‍ಐಗಳು ಹಾಗೂ 18 ಟಿಐಗಳು ಕೆಲಸ ಮಾಡುತ್ತಿರುವುದು ಬಹಿರಂಗಗೊಂಡಿದೆ. ವಾಸ್ತವವಾಗಿ ಒಂದು ವಾರ್ಡ್‍ಗೆ ಇಬ್ಬರು ಆರ್‍ಐಗಳು ಮತ್ತು ಇಬ್ಬರು ಟಿಐಗಳು ಸಾಕಾಗಿರುತ್ತದೆ. ಆದರೆ, ಹೆಮ್ಮಿಗೆಪುರ ವಾರ್ಡ್‍ನಲ್ಲಿ ಮಾತ್ರ ಇಷ್ಟೊಂದು ಅಕಾರಿಗಳು ಕರ್ತವ್ಯ ನಿರ್ವಹಿಸುತ್ತಿರುವುದನ್ನು ನೋಡಿದರೆ ಈ ವಾರ್ಡ್ ಅಕ್ರಮ ಹಣ ಸಂಪಾದನೆ ಮಾಡುವ ಹುಲ್ಲುಗಾವಲಿರಬಹುದು ಎಂಬ ಅನುಮಾನ ಕಾಡುವಂತಾಗಿದೆ.
ಹಳೆ ಬೆಂಗಳೂರಿನ ಮೂರು ವಲಯಗಳ 132 ವಾರ್ಡ್‍ಗಳ ಪೈಕಿ 41 ವಾರ್ಡ್‍ಗಳಲ್ಲಿ ಆರ್‍ಐಗಳಿಲ್ಲ ಹಾಗೂ 53 ವಾರ್ಡ್‍ಗಳಲ್ಲಿ ಕಂದಾಯ ವಸೂಲಿಗಾರರೇ ಇಲ್ಲ. ಇಷ್ಟೆಲ್ಲಾ ಸಿಬ್ಬಂದಿಗಳ ಕೊರತೆ ಇದ್ದರೂ ಹೆಮ್ಮಿಗೆಪುರ ವಾರ್ಡ್‍ನಲ್ಲಿ ಮಾತ್ರ 27 ಅಧಿಕಾರಿಗಳು ಕೆಲಸ ಮಾಡಲು ಯಾವ ಪುಣ್ಯಾತ್ಮ ಅವಕಾಶ ಮಾಡಿಕೊಟ್ಟರೋ ಆ ದೇವರೇ ಬಲ್ಲ.
ಹೆಮ್ಮಿಗೆ ಪುರ ವಾರ್ಡ್‍ನಲ್ಲಿ ಕಂದಾಯ ವಿಭಾಗದ 27 ಅಕಾರಿಗಳು ತಿಂದು ತೇಗುತ್ತಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಹೆಮ್ಮಿಗೆಪುರ ವಾರ್ಡ್‍ನಲ್ಲಿ ಬೀಡುಬಿಟ್ಟಿರುವ 9 ಮಂದಿ ಆರ್‍ಗಳು ಹಾಗೂ 18 ಟಿಐಗಳನ್ನು ಖಾಲಿ ಇರುವ ಹಳೆ ವಾರ್ಡ್‍ಗಳಿಗೆ ವರ್ಗಾವಣೆ ಮಾಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.