90 ವರ್ಷಗಳ ಇತಿಹಾಸವುಳ್ಳ ರೈಲ್ವೆ ಬಜೆಟ್ ಇನ್ನು ನೆನಪು ಮಾತ್ರ
ನವದೆಹಲಿ, ಆ.13-ತೊಂಬತ್ತು ವರ್ಷಗಳ ಇತಿಹಾಸವುಳ್ಳ ಹಾಗೂ ಕೋಟ್ಯಂತರ ಜನರು ಎದುರು ನೋಡುತ್ತಿದ್ದ ರೈಲ್ವೆ ಬಜೆಟ್ ಇನ್ನು ನೆನಪು ಮಾತ್ರ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಇನ್ನು ಮುಂದೆ ಅಂದರೆ ಮುಂಬರುವ ವರ್ಷದಿಂದಲೇ ಪ್ರತ್ಯೇಕವಾದ ರೈಲ್ವೆ ಬಜೆಟ್ ಮಂಡಿಸುವ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಲಿದೆ. ಇನ್ನು ರೈಲ್ವೆ ಬಜೆಟ್ ಕೇಂದ್ರ ಬಜೆಟ್ನಲ್ಲೇ ಸೇರ್ಪಡೆಯಾಗಲಿದ್ದು, ಪ್ರತ್ಯೇಕ ಬಜೆಟ್ ಮಂಡನೆ ಸಂಪ್ರದಾಯ ಅಂತ್ಯವಾಗಲಿದೆ. ಪ್ರತ್ಯೇಕ ರೈಲ್ವೆ ಬಜೆಟ್ ಮಂಡನೆ ಮಾಡುವುದು ಸೂಕ್ತವಲ್ಲ. ಇದನ್ನು ಕೊನೆಗಾಣಿಸುವಂತೆ ಸಚಿವ ಸುರೇಶ್ಪ್ರಭು ಪ್ರಧಾನಿಯವರಿಗೆ ಮನವಿ ಮಾಡಿದ್ದರು. ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ವರದಿ ನೀಡುವಂತೆ 5 ಮಂದಿ ಉನ್ನತಾಧಿಕಾರಿಗಳ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿ ನೀಡಿರುವ ವರದಿಯಂತೆ ಇನ್ನು ಮುಂದೆ ಪ್ರತ್ಯೇಕ ರೈಲ್ವೆ ಬಜೆಟ್ ಮಂಡನೆ ಮಾಡುವ ಅಗತ್ಯವಿಲ್ಲ. ಬದಲಿಗೆ ಸಾಮಾನ್ಯ ಬಜೆಟ್ನಲ್ಲೇ ಸೇರ್ಪಡೆ ಮಾಡುವಂತೆ ಸಲಹೆ ಮಾಡಿದೆ. ಇದನ್ನು ಪರಿಗಣಿಸಿರುವ ಸರ್ಕಾರ ರೈಲ್ವೆ ಬಜೆಟ್ ಮಂಡನೆಗೆ ಇತಿಶ್ರೀ ಹಾಡಿದೆ ಎಂದು ತಿಳಿದುಬಂದಿದೆ.
1924ರಲ್ಲಿ ಮೊಟ್ಟ ಮೊದಲ ಬಾರಿಗೆ ರೈಲ್ವೆ ಬಜೆಟ್ ಮಂಡನೆಗೆ ಅಂದಿನ ಬ್ರಿಟಿಷ್ ಸರ್ಕಾರ ಸಮ್ಮತಿ ನೀಡಿತ್ತು. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮುನ್ನವೂ ಬ್ರಿಟಿಷ್ ಸರ್ಕಾರದ ಆಧಿಪತ್ಯದಲ್ಲೇ ರೈಲ್ವೆ ಬಜೆಟ್ ಮಂಡನೆಯಾಗುತ್ತಿತ್ತು. ತದನಂತರ ಭಾರತ ಸಾರ್ವಭೌಮ ರಾಷ್ಟ್ರವಾಗಿ ತನ್ನದೇ ಆದ ಸಂವಿಧಾನವನ್ನು ರಚನೆ ಮಾಡಿಕೊಂಡ ನಂತರ ಮೊದಲು ರೈಲ್ವೆ ಬಜೆಟ್ ನಂತರ ಸಾಮಾನ್ಯ ಬಜೆಟ್ ಮಂಡನೆ ಮಾಡುತ್ತಿತ್ತು. ಇದು ಕಳೆದ 70 ವರ್ಷಗಳಿಂದಲೂ ಸಂಪ್ರದಾಯದಂತೆ ನಡೆದುಕೊಂಡು ಬಂದಿತ್ತು. ಉನ್ನತಾಧಿಕಾರಿಗಳ ಸಮಿತಿ ನೀಡಿರುವ ವರದಿಯನ್ನು ಮುಂದಿನ ಅಧಿವೇಶನದಲ್ಲಿ ಸರ್ಕಾರ ಮಂಡನೆ ಮಾಡುವ ಸಾಧ್ಯತೆ ಇದೆ. ಲೋಕಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿರುವುದರಿಂದ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಮನವೊಲಿಸಿ ಉಭಯ ಸದನಗಳಲ್ಲೂ ವರದಿ ಮಂಡಿಸಿ ರೈಲ್ವೆ ಬಜೆಟ್ನ್ನು ಇತಿಹಾಸದ ಪುಟಕ್ಕೆ ಸೇರ್ಪಡೆ ಮಾಡಲು ಸಜ್ಜಾಗಿದೆ.
► Follow us on – Facebook / Twitter / Google+