Friday, September 20, 2024
Homeರಾಜ್ಯಕಾಲಕಾಲಕ್ಕೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಕಾಲಕಾಲಕ್ಕೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಬೆಂಗಳೂರು,ಆ.10- ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ನಿಧನ, ನಿವೃತ್ತಿ ಮತ್ತಿತರ ಕಾರಣಗಳಿಂದ ಖಾಲಿಯಾಗುವ ಹುದ್ದೆಗಳನ್ನು ಕಾಲಕಾಲಕ್ಕೆ ಭರ್ತಿ ಮಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಹೈಕೋರ್ಟ್‌ ನಿರ್ದೇಶನ ನೀಡಿದೆ.ಕೇಂದ್ರ ಸರ್ಕಾರದ ಅಧೀನದ ಎಲ್‌ಐಸಿ ಸಂಸ್ಥೆಯ ನೇಮಕಾತಿಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌‍.ದೀಕ್ಷಿತ್‌ ಹಾಗೂ ನ್ಯಾಯಮೂರ್ತಿ ವಿಜಯಕುಮಾರ್‌ ಎ. ಪಾಟೀಲ್‌ ಅವರಿದ್ದ ಧಾರವಾಡ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಸಿಬ್ಬಂದಿಗಳ ನಿಧನ, ನಿವೃತ್ತಿ ಅಥವಾ ವಜಾಗೊಳಿಸಿದ ಪ್ರಕರಣಗಳಲ್ಲಿ ಹುದ್ದೆಗಳು ಖಾಲಿಯಾಗುತ್ತಿರುತ್ತವೆ. ಅವುಗಳನ್ನು ಅನಿರ್ಧಿಷ್ಟಾವಧಿಗೆ ಹಾಗೆಯೇ ಬಿಟ್ಟರೆ ಅದು ಸಾರ್ವಜನಿಕ ಆಡಳಿತದ ಮೇಲೆ ಪರಿಣಾಮ ಬೀರುವುದರ ಜೊತೆಗೆ ಹಲವು ಅರ್ಹರು ಅನರ್ಹರಾಗಬೇಕಾಗುತ್ತದೆ. ಅವರ ವಯೋಮಿತಿ ಮೀರುತ್ತದೆ.

ಕಾಲಕಾಲಕ್ಕೆ ನೇಮಕಾತಿ ಪ್ರಕ್ರಿಯೆ ನಡೆಯದ ಹಿನ್ನೆಲೆಯಲ್ಲಿ ಉದ್ಯೋಗಕ್ಕೆ ಅರ್ಹರಾಗಿರುವ ಯುವಜನಾಂಗ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ. ನೇಮಕಾತಿ ಪ್ರಕ್ರಿಯೆ ಮಾಡದಿರುವುದರಿಂದ ಸಂವಿಧಾನ ಖಾತ್ರಿ ಪಡಿಸಿರುವ ಸಾರ್ವಜನಿಕ ಉದ್ಯೋಗದ ಅವಕಾಶದಿಂದ ಬಹುದೊಡ್ಡ ಸಂಖ್ಯೆಯ ಯುವಜನತೆ ವಂಚಿತವಾಗಬೇಕಾಗುತ್ತದೆ ಎಂದು ತನ್ನ ಆದೇಶದಲ್ಲಿ ಹೇಳಿದೆ.
ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇಡೀ ವ್ಯವಸ್ಥೆಯನ್ನು ಕಾಡುತ್ತಿದೆ. ಈ ಕಾಲಘಟ್ಟದಲ್ಲಿ ಖಾಲಿ ಹುದ್ದೆಗಳಿಗೆ ನಿಯಮಿತವಾಗಿ ಭರ್ತಿ ಮಾಡುವಂತಹ ಕೆಲಸ ಆಗಬೇಕು.

ಎಲ್‌ಐಸಿ ಸರ್ಕಾರಿ ಒಡೆತನದ ಸಂಸ್ಥೆಯಾಗಿದೆ. ಅದು ಮಾದರಿ ಉದ್ಯೋಗದಾತರಂತೆ ನಡೆದುಕೊಳ್ಳಬೇಕು. ಖಾಸಗಿ ಸಂಸ್ಥೆಗಳಂತೆ ನಿರ್ಲಕ್ಷದಿಂದ ವರ್ತಿಸಬಾರದು. ನಿಗದಿಯಂತೆ ನೇಮಕ ಪ್ರಕ್ರಿಯೆ ನಡೆಸಬೇಕೆಂದು ನ್ಯಾಯಾಲಯ ತಿಳಿಸಿದೆ.

ಪ್ರಕರಣದ ಹಿನ್ನೆಲೆ :
ಎಲ್‌ಐಸಿಯಲ್ಲಿ 2020 ರ ಜ.14 ರಿಂದ 2022 ರ ಜ.14 ರ ಅವಧಿಯಲ್ಲಿ ಖಾಲಿಯಾಗಿದ್ದ ಹುದ್ದೆಗೆ ಧಾರವಾಡದ ಮಾಳಮಡ್ಡಿಯ ಸೌರಭ್‌ ಅವರನ್ನು ನೇಮಕ ಮಾಡುವಂತೆ ಹೈಕೋರ್ಟ್‌ ಏಕಸದಸ್ಯ ಪೀಠ 2024 ರ ಫೆ.14 ರಂದು ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲನವಿಯನ್ನು ಆಲಿಸಿದ್ದ ನ್ಯಾಯಪೀಠ ಏಕಸದಸ್ಯ ಪೀಠದ ಆದೇಶವನ್ನು ಎತ್ತಿಹಿಡಿದಿದೆ.

RELATED ARTICLES

Latest News