ಬೆಂಗಳೂರು, ಏ.28– ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೂರು ಪಾಲಿಕೆಗಳಾಗಿ ವಿಭಜನೆಯಾಗುವ ಸಾಧ್ಯತೆಗಳಿವೆ. ಗ್ರೇಟರ್ ಬೆಂಗಳೂರು ವಿಧೇಯಕ ಕ್ಕೆ ರಾಜ್ಯಪಾಲರು ಅನುಮೋದನೆ ನೀಡುತ್ತಿದ್ದಂತೆ ಪಾಲಿಕೆ ವಿಭಜನೆಗೆ ಸರ್ಕಾರ ಮುಂದಾಗಿದೆ.
ಏಳು ಪಾಲಿಕೆಗಳಿಗೆ ಮೀರದಂತೆ ಬಿಬಿಎಂಪಿ ವಿಭಜನೆ ಮಾಡಲು ರಾಜ್ಯಪಾಲರು ಸಮತಿಸಿರುವ ಹಿನ್ನೆಲೆಯಲ್ಲಿ ಒಂದೂವರೆ ಕೋಟಿ ಜನಸಂಖ್ಯೆಯ ಬೆಂಗಳೂರು ನಗರವನ್ನು ಮೂರು ಪಾಲಿಕೆಗಳನ್ನಾಗಿ ವಿಭಜನೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ.
50 ಲಕ್ಷ ಜನ ಸಂಖ್ಯೆಗೊಂದು ಪಾಲಿಕೆ ಮಾಡಿ ಅವುಗಳನ್ನು ಕೇಂದ್ರ, ಉತ್ತರ ಮತ್ತು ದಕ್ಷಿಣ ಬೆಂಗಳೂರು ಪಾಲಿಕೆಗಳನ್ನಾಗಿ ವಿಭಜಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರತಿ ಪಾಲಿಕೆ ವ್ಯಾಪ್ತಿಯಲ್ಲಿ 150 ವಾರ್ಡಗಳನ್ನು ಮಾಡಿ ಎಲ್ಲ ಮೂರು ಪಾಲಿಕೆಗಳ ಮೇಲ್ವಿಚಾರಣೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ವಹಿಸಿಕೊಡಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.
ಇದರ ಜೊತೆಗೆ ಹೊಸ ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಕೆಲ ಹೊಸ ಪ್ರದೇಶಗಳು ಸೇರ್ಪಡೆ ಮಾಡುವುದು ಸರ್ಕಾರ ಉದ್ದೇಶವಾಗಿದೆ. ಈ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಿ 30 ದಿನಗಳ ಕಾಲ ಸಾರ್ವಜನಿಕ ಆಕ್ಷೇಪಣೆಗೆ ಅವಕಾಶ ನೀಡಿದ ನಂತರ ಅಂತಿಮ ಅಧಿಸೂಚನೆ ಹೊರಡಿಸಲು ಸರ್ಕಾರ ನಿರ್ಧರಿಸಿದೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಬರುವ ಕೆಲವು ಗ್ರಾಪಂಗಳು ಅಸ್ತಿತ್ವ ಕಳೆದುಕೊಳ್ಳಲಿವೆ ಎನ್ನಲಾಗಿದೆ. ಮೂರು ಪಾಲಿಕೆ ರಚನೆಯಾಗುವವರೆಗೆ ರಾಜ್ಯ ಸರ್ಕಾರ ಎಲ್ಲಾ ಹೊಣೆಗಾರಿಕೆ ನಿರ್ವಹಣೆ ಮಾಡಲಿದೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ, ಜಿಗಣಿ ಕೈಗಾರಿಕೆ ಪ್ರದೇಶ, ಬೊಮ್ಮಸಂದ್ರ,. ಬಾಗಲೂರು, ರಾಜಾನುಕುಂಟೆ, ಹೆಸರಘಟ್ಟ, ದಾಸನಪುರ, ಮಾಕಳಿ, ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ ಮತ್ತು ಹಾರೋಹಳ್ಳಿಗಳು ಸೇರ್ಪಡೆಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.