ಆಧಾರ್‌ನಿಂದ ಪೋಷಕರ ಮಡಿಲು ಸೇರಿದ ಯುವಕ

ನಾಗಪುರ, ಜು.10- ಆಧಾರ್ ನೋಂದಣಿಯಿಂದ ಎಷ್ಟೇಲ್ಲಾ ಅನುಕೂಲಗಳಿವೆ ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ. ಸುಮಾರು ಎಂಟು ವರ್ಷಗಳ ಹಿಂದೆ ಕಳೆದು ಹೋಗಿದ್ದ 18 ವರ್ಷದ ವಿಶೇಷ ಚೇತನ ಯುವಕನ ಗುರುತು ಆಧಾರ್ ಕಾರ್ಡ್ ಮೂಲಕ ಪತ್ತೆಯಾಗಿ ತಂದೆ ತಾಯಿಯ ಮಡಿಲು ಸೇರಿದ್ದಾನೆ.

ಮಧ್ಯಪ್ರದೇಶದ ಜಬ್ಲಾಪುರದಿಂದ ನಾಪತ್ತೆಯಾಗಿದ್ದ ಬಾಲಕ ಮಹಾರಾಷ್ಟ್ರದ ನಾಗಪುರದಲ್ಲಿ ಪತ್ತೆಯಾಗಿದ್ದಾನೆ. 2011ರಲ್ಲಿ ಆತ ಕಳೆದು ಹೋಗುವ ಮುನ್ನಾ ಆತನ ಪೋಷಕರು ಆಧಾರ್ ನೋಂದಣಿ ಮಾಡಿಸಿದ್ದರು. ಅದರ ಮೂಲಕ ಕಳೆದು ಹೋಗಿದ್ದ ಮಗ ಪೋಷಕರ ಜೊತೆ ಸೇರಿಕೊಂಡಿದ್ದಾನೆ.

ನಾಗಪುರದ ಪಂಚಶೀಲನಗರದಲ್ಲಿ ದಾಮ್ಲೆ ಅನಾಥಾಶ್ರಮ ನಡೆಸುತ್ತಿದ್ದು, 2015ರಲ್ಲಿ ಅದನ್ನು ಮುಚ್ಚಿದ್ದರು. ರೈಲ್ವೆ ನಿಲ್ದಾಣದಲ್ಲಿ ಸುಮಾರು ಎಂಟು ವರ್ಷದ ಬಾಲಕ ಕಂಡು ಬಂದಿದ್ದ, ಪೋಲೀಸರು ಬಾಲಕನನ್ನು ಅನಾಥಾಶ್ರಮಕ್ಕೆ ತಂದು ಬಿಟ್ಟಿದ್ದರು. ಆತನಿಗೆ ಮಾನಸಿಕ ಸ್ಥಿಮಿತ ಇರಲಿಲ್ಲ.

ಆತ ಅಮ್ಮ ಅಮ್ಮ ಎಂದಷ್ಟೇ ಹೇಳುತ್ತಿದ್ದ, ನಾವು ಅಮನ್ ಎಂದು ಹೆಸರು ಇಟ್ಟಿದ್ದವು. ಅನಾಥಾಶ್ರಮ ಮುಚ್ಚಿದ ಬಳಿಕ ಅಮನ್‍ನನ್ನು ನಮ್ಮ ಕುಟುಂಬದ ಜೊತೆಯಲ್ಲೇ ಇಟ್ಟುಕೊಂಡಿದ್ದವು. ಆತನನ್ನು ಇತ್ತೀಚೆಗೆ ಎಸ್‍ಎಸ್‍ಎಲ್‍ಸಿಗೆ ದಾಖಲು ಮಾಡಲು ಆಧಾರ್ ನೋಂದಣಿ ಬೇಕಿತ್ತು. ಆದರೆ ಸಾಧ್ಯವಾಗಲಿಲ್ಲ. ದಾಮ್ಲೆ ಆಧಾರ್ ನೋಂದಣಿ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಈಗಾಗಲೇ ನೋಂದಣಿ ಆಗಿರುವುದು ಖಚಿತವಾಗಿತ್ತು.

ಅದರ ಮಾಹಿತಿ ಪರಿಶೀಲಿಸಿದಾಗ ಅಮನ್‍ನ ಮೂಲ ಹೆಸರು ಮೊಹಮದ್ ಅಮೀರ್ ಎಂದಾಗಿತ್ತು. ಅದರಲ್ಲಿನ ಮಾಹಿತಿ ಆಧಾರಿಸಿ ಜೈವಿಕ ತಂದೆ ತಾಯಿಯನ್ನು ಸಂಪರ್ಕಿಸಲಾಗಿದೆ.