ನವದೆಹಲಿ, ಜ.17- ಪಂಜಾಬ್ ವಿಧಾನಸಭಾ ಚುನಾವಣೆಗೆ ತಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಮಂಗಳವಾರ ಘೋಷಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಸೋಮವಾರ ಹೇಳಿದ್ದಾರೆ.
ಅವರು ಜನವರಿ 13 ರಂದು ಪಂಜಾಬ್‌ನ ಜನರಿಗೆ ತಮ್ಮ ಆದ್ಯತೆಯ ಮುಖ್ಯಮಂತ್ರಿ ಅಭ್ಯರ್ಥಿಗಳ ಹೆಸರನ್ನು ಸೂಚಿಸುವಂತೆ ಕೇಳಿಕೊಂಡಿದ್ದರು.ಪಕ್ಷದ ಸಂಸದ ಭಗವಂತ್ ಮಾನ್ ಅವರ ಹೆಸರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಬೇಕೆಂದು ಕೇಜ್ರಿವಾಲ್ ಬಯಸಿದ್ದರೂ, ಕೊನೆಗೆ ಜನರೇ ತಮ್ಮ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಿ ಎಂದು ನಿರ್ಧರಿಸಿದ್ದರು.
ಜನರಿಂದ ಅಭಿಪ್ರಾಯ ಸಂಗ್ರಹವಾಗಿದ್ದು, ನಾಳೆ ಮಧ್ಯಾಹ್ನ 12 ಗಂಟೆಗೆ ನಿರ್ಧಾರ ಪ್ರಕಟಿಸಲಾಗುವುದು ತಿಳಿಸಲಾಗಿದೆ. ಪಂಜಾಬ್‌ನ 117 ವಿಧಾನಸಭಾ ಸ್ಥಾನಗಳಿಗೆ ಫೆಬ್ರವರಿ 14 ರಂದು ಚುನಾವಣೆ ನಡೆಯಲಿದೆ ಮತ್ತು ಮತಗಳ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ
