ಜ್ಞಾನವ್ಯಾಪಿ ಪ್ರಕರಣದಲ್ಲಿ ಮಸೀದಿ ಪರ ವಾದಿಸುತ್ತಿದ್ದ ವಕೀಲರ ನಿಧನ

Social Share

ವಾರಣಾಸಿ, ಆ.1- ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಪ್ರಕರಣದಲ್ಲಿ ಮಸೀದಿ ಸಮಿತಿಯ ಪರ ವಕೀಲ ಅಭಯ್‍ನಾಥ್ ಯಾದವ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 62 ವರ್ಷದ ಅಭಯ್‍ನಾಥ್ ನಿನ್ನೆ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದು ಇಂದು ಬೆಳಗ್ಗೆ ಅಂತ್ಯ ಸಂಸ್ಕಾರ ನಡೆಸುವುದಾಗಿ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಜ್ಞಾನವಾಪಿ ಮಸೀದಿಯಲ್ಲಿ ಹಿಂದು ದೇವರ ವಿಗ್ರಹಗಳು ಮತ್ತು ದೇವಸ್ಥಾನದ ಕುರುಹುಗಳಿವೆ ಎಂದು ಪ್ರತಿಪಾದಿಸಲಾಗಿದೆ. ಸೆಷನ್ಸ್ ಕೋರ್ಟ್ ಮಸೀದಿಯಲ್ಲಿ ಜಂಟಿ ಸಮೀಕ್ಷೆ ನಡೆಸಲು ಸೂಚಿಸಿತ್ತು. ಕೋರ್ಟ್‍ನಿಂದ ನೇಮಕವಾದ ಸಮಿತಿ ಸಮೀಕ್ಷೆ ನಡೆಸುವಾಗ ನೀರಿನ ಕಾರಂಜಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ವರದಿಯಾಗಿತ್ತು.

ಮಸೀದಿಯ ಪೂರ್ವ ಭಾಗದ ಗೋಡೆಯಲ್ಲಿ ದೇವರ ವಿಗ್ರಹಗಳಿರುವುದರಿಂದ ಪ್ರಾರ್ಥನೆ ಪೂಜೆಗೆ ಅವಕಾಶ ನೀಡಬೇಕು ಎಂದು ಹಲವು ಹಿಂದು ಮಹಿಳೆಯರು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. ಮಸೀದಿಯಲ್ಲಿ ಪತ್ತೆಯಾಗಿರುವ ಕುರುಹು ದೈವಸ್ವರೂಪಿ ಲಿಂಗವಲ್ಲ. ಬದಲಾಗಿ ನೀರಿನ ಕಾರಂಜಿಯ ನಿರ್ಮಾಣ ಎಂದು ಮಸೀದಿ ವಾದಿಸಿತ್ತು.

ಅಂಜುಮಾನ್ ಇಂತೇಝಮಿಯಾ ಮಸೀದಿ ಸಮಿತಿ ಪರವಾಗಿ ಹಿರಿಯ ವಕೀಲರಾದ ಅಭಯ್ ನಾಥ್ ವಾದಿಸುತ್ತಿದ್ದರು. ಅಲಹದಾಬಾದ್ ಹೈಕೋರ್ಟ್ ಕಳೆದ ವಾರ ಪ್ರಕರಣದ ವಿಚಾರಣೆ ನಡೆಸಿ, ಮುಂದಿನ ವಿಚಾರಣೆಯನ್ನು ಆಗಸ್ಟ್ 3ರಂದು ನಿಗದಿ ಮಾಡಿದೆ. ನಾಡಿದ್ದು ಪ್ರಕರಣದ ವಿಚಾರಣೆಗೆ ಬರುವ ಸಂದರ್ಭದಲ್ಲಿ ವಕೀಲರು ನಿಧನರಾಗಿದ್ದಾರೆ.

Articles You Might Like

Share This Article