ಅಭಿಮಾನಿ ಪ್ರಕಾಶನಕ್ಕೆ ವಿಶ್ವಮಾನ್ಯತೆ : ಪಿ.ರಾಮಯ್ಯ ಪ್ರಶಂಸೆ

Social Share

ಬೆಂಗಳೂರು,ನ.5- ಅಭಿಮಾನಿ ಪ್ರಕಾಶನ ಮುದ್ರಿಸಿ ಪ್ರಕಟಿಸಿರುವ ನಾನು ಹಿಂದೂ ರಾಮಯ್ಯ ಕೃತಿಯು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಮುದ್ರಣವಾಗಿದೆ ಎಂಬ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ಕೃತಿಯ ಕರ್ತೃವಾದ ಹಿರಿಯ ಪತ್ರಕರ್ತರಾದ ಪಿ.ರಾಮಯ್ಯ ಅವರು ಅಭಿಪ್ರಾಯಪಟ್ಟರು.

ಅಭಿಮಾನಿ ಸಮೂಹದ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಹಿರಿಯ ಪತ್ರಕರ್ತರಾದ ಎನ್.ರಾಮು, ವಿಶ್ವೇಶ್ವರ ಭಟ್ ಅವರು ಪುಸ್ತಕದ ಗುಣಮಟ್ಟದ ವಿನ್ಯಾಸದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಎಂದರು.

ಇದೇ ರೀತಿ ಹಲವು ಪತ್ರಕರ್ತರು ಕೂಡ ಮೆಚ್ಚುಗೆಯ ಮಾತುಗಳನ್ನಾಡಿ ಇದರ ವಿನ್ಯಾಸವನ್ನು ವಿದೇಶದಲ್ಲಿ ಮಾಡಿಸಲಾಯಿತೇ ಎಂದು ಕೇಳಿದರು. ಚೆನ್ನೈನಿಂದಲೂ ಈ ಪುಸ್ತಕದ ವಿನ್ಯಾಸವನ್ನು ಯಾರು ಮಾಡಿದರು ಎಂದು ಕೇಳಿದರು. ಅಷ್ಟರಮಟ್ಟಿಗೆ ಈ ಪುಸ್ತಕವು ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದರು.

ಈ ಪುಸ್ತಕವನ್ನು ಬರೆದದ್ದೇ ಒಂದು ಮಿರಾಕಲ್, ನಾನು ಬರೆಯಲು ಆರಂಭಿಸಿ ದಾಗ ಯಾರೋ ಹಿಂದೆ ನಿಂತು ಬರೆಸಿದ ಅನುಭವವಾಯಿತು. ಗುರು ರಾಘವೇಂದ್ರರೇ ಬರೆಸಿರಬೇಕು. ಈ ಪುಸ್ತಕವನ್ನು ಹೇಗೆ ಬರೆದೆ ಎಂಬುದೇ ಅಚ್ಚರಿಯಾಗಿದೆ. ಪುಸ್ತಕ ಪ್ರಕಟಿಸಿದ ಅಭಿಮಾನಿ ಪ್ರಕಾಶನವನ್ನು ಓದುಗರು ಮೆಚ್ಚುಗೆಯಿಂದ ಅಭಿನಂದಿಸಿದ್ದಾರೆ ಎಂದರು.

ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷರಾದ ಡಾ.ಎಚ್.ಎನ್.ಕೃಷ್ಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ದಿನೇಶ್ ಹಾಗೂ ಅಭಿಮಾನಿ ಸಮೂಹ ಸಂಸ್ಥೆಯ ಸಂಸ್ಥಾಪಕರಾದ ಟಿ.ವೆಂಕಟೇಶ್ ಅವರ ಅಭಿಮಾನದ ಒತ್ತಾಯಕ್ಕೆ ಮಣಿದು ಈ ಪುಸ್ತಕ ಬರೆಯಬೇಕಾಯಿತು.

ಈ ಪುಸ್ತಕ ಪ್ರಕಟಣೆಯಿಂದ ಅಭಿಮಾನಿ ಪ್ರಕಾಶನದ ಗೌರವ ಹೆಚ್ಚಾಗಿದೆ. ಇದು ನನಗೆ ಸಮಾಧಾನ ತಂದಿದೆ ಎಂದು ಹೇಳಿದರು. ಉತ್ತಮ ಪುಸ್ತಕಗಳನ್ನು ಹೊರತರುವಷ್ಟು ಶಕ್ತಿ, ಬೇಕಾದಷ್ಟು ಯಂತ್ರೋಪಕರಣಗಳು ಅಭಿಮಾನಿ ಸಮೂಹದಲ್ಲಿದ್ದು, ಇನ್ನಷ್ಟು ಉತ್ತಮ ಕೃತಿಗಳು ಹೊರಬರುವಂತಾಗಲಿ ಎಂದು ಹಾರೈಸಿದರು.

ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷರಾದ ಡಾ.ಎಚ್.ಎನ್.ಕೃಷ್ಣ ಅವರು ಮಾತನಾಡಿ, ನಾನು ಹಿಂದೂ ರಾಮಯ್ಯ ಪುಸ್ತಕ ಪ್ರಕಟಣೆಯಿಂದ ಅಭಿಮಾನಿ ಸಮೂಹ ಸಂಸ್ಥೆಗೆ ಗೌರವ ಬಂದಿದೆ. ಇಂತಹ ಪುಸ್ತಕಗಳ ಪ್ರಕಟಣೆಯನ್ನು ಮುಂದುವರೆಸಿ ಎಂಬ ಸಲಹೆ ಮಾಡಿದರು.

ಅಭಿಮಾನಿ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾದ ಟಿ.ವೆಂಕಟೇಶ್ ಅವರು ಮಾತನಾಡಿ, ರಾಮಯ್ಯ ಅವರ ಪುಸ್ತಕ ಪ್ರಕಟಣೆಯಿಂದ ನಮ್ಮ ಸಂಸ್ಥೆಗೆ ದೊಡ್ಡ ಹೆಸರು ಬಂದಿದ್ದು, ಇಂತಹ ಪ್ರಕಟಣೆ ಮುಂದು ವರೆಸಲಾಗುವುದು. ರಾಮಯ್ಯ ಅವರ ಪುಸ್ತಕ ಪ್ರಕಟಿಸಿದ್ದು, ನಮ್ಮ ಸಂಸ್ಥೆಯ ಪುಣ್ಯ. ನಾವು ಭಾಗ್ಯವಂತರು ಎಂದು ಹೇಳಿದರು.

ರಾಮಯ್ಯ ಅವರು ಗೋಕಾಕ್ ಚಳುವಳಿಯಿಂದಲೂ ಪರಿಚಿತರು. ಅವರು ವಿಧಾನಪರಿಷತ್ ಸದಸ್ಯರಾಗಿದ್ದಾಗ ಅಭಿಮಾನಿ ಸಂಸ್ಥೆಯಿಂದ ಸನ್ಮಾನಿಸಲಾಗಿತ್ತು. ನಮ್ಮ ಸಂಸ್ಥೆ ಯಿಂದ ಈ ಕೃತಿ ಪ್ರಕಟಣೆ ಮಾಡಿಸಿದ್ದು ಭಗ ವಂತನ ಕೃಪೆ ಇರಬೇಕು ಎಂದು ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ದಿನೇಶ್ ಅವರು ಮಾತನಾಡಿ, ಅಭಿಮಾನಿ ಪ್ರಕಾಶನದ ಹೆಮ್ಮೆಯ ಪ್ರಕಟಣೆ ನಾನು ಹಿಂದೂ ರಾಮಯ್ಯ ಕೃತಿ. ಮುದ್ರಣ ಮತ್ತು ಪತ್ರಿಕಾ ಲೋಕದಲ್ಲಿ ಈ ಕೃತಿಯ ಗುಣಮಟ್ಟದ ಬಗ್ಗೆ ಚರ್ಚೆಯಾಗುತ್ತಿದೆ. ಕೃತಿಯ ವಿನ್ಯಾಸ ಮತ್ತು ವಿಷಯ ಎರಡೂ ದೃಷ್ಟಿಯಿಂದಲೂ ಮೌಲಿಕವಾದ ಕೃತಿ.

ಆಂಗ್ಲ ಪತ್ರಕರ್ತರಾಗಿದ್ದರೂ ಕನ್ನಡದಲ್ಲೇ ರಾಮಯ್ಯ ಅವರು ಕೃತಿಯನ್ನು ಬರೆದುಕೊಟ್ಟರು. ಕಿರಣ್ ಅವರು ಆಕರ್ಷಕವಾಗಿ ವಿನ್ಯಾಸ ಮಾಡಿಕೊಟ್ಟಿದ್ದಾರೆ ಎಂದ ಅವರು, ಅಭಿಮಾನಿ ಸಂಸ್ಥೆಯು ದಕ್ಷಿಣ ಭಾರತದಲ್ಲಿ ಅತ್ಯಂತ ಪ್ರತಿಷ್ಠಿತ ಮುದ್ರಣ ಸಂಸ್ಥೆಯಾಗಿದೆ ಎಂದು ಶ್ಲಾಘಿಸಿದರು.

ನಿರೂಪಕಿ ಶ್ರೀಮತಿ ಸಂಧ್ಯಾ ಅವರು ಮಾತನಾಡಿ, ರಾಮಯ್ಯ ಅವರ ಪುಸ್ತಕ ಲೋಕಾರ್ಪಣೆಗೊಂಡ ಕಾರ್ಯಕ್ರಮ ನಿರೂಪಣೆ ಮಾಡಿದ್ದು ನನ್ನ ಪಾಲಿನ ಗೌರವದ ಕ್ಷಣ. ವೃತ್ತಿ ಜೀವನದ ಉತ್ತಮ ಕಾರ್ಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪತ್ರಕರ್ತ ಪಿ.ಕೆ.ಚನ್ನಕೃಷ್ಣ ಅವರು ಮಾತನಾಡಿ, ಪುಸ್ತಕದ ವಿನ್ಯಾಸವನ್ನು ಹೆಸರಾಂತ ಕಲಾವಿದ ಕಿರಣ್ ಮಾಡಾಳ್ ಅತ್ಯುತ್ತಮವಾಗಿ ಮಾಡಿಕೊಟ್ಟಿದ್ದಾರೆ. ಅಭಿಮಾನಿ ಪ್ರಕಾಶನದಲ್ಲಿ ಇಂತಹ ಮೌಲಿಕ ಕೃತಿಗಳ ಪ್ರಕಟಣೆ ಹೆಚ್ಚು ಹೆಚ್ಚಾಗಿ ನಡೆಯಬೇಕು. ಈ ಕೃತಿ ಅಭಿಮಾನಿ ಸಂಸ್ಥೆಯ ಕೀರ್ತಿಗೆ ಕಳಸಪ್ರಾಯವಾದ ಕೃತಿ ಎಂದು ಹೇಳಿದರು. ಈ ಕೃತಿಯ ಮೂಲಕ ರಾಮಯ್ಯ ಅವರು ಮುಂದಿನ ಮೂರು ಶತಮಾನಗಳವರೆಗೂ ಬದುಕಿರುತ್ತಾರೆ. ಹಲವು ಪ್ರಶಸ್ತಿಗಳು ಪುಸ್ತಕ ಮತ್ತು ಅಭಿಮಾನಿ ಸಂಸ್ಥೆಗೆ ಬರುವಂತಾಗಲಿ ಎಂದರು.

ಕೃತಿಯ ವಿನ್ಯಾಸಗಾರ ಕಿರಣ್ ಮಾಡಾಳು ಮಾತನಾಡಿ, ಪತ್ರಕರ್ತರಾಗಿ ಮಾನವೀಯ ಮೌಲ್ಯಗಳು, ಪ್ರಾಮಾಣಿಕತೆ ಹಾಗೂ ವಸ್ತುನಿಷ್ಠ ವರದಿಗಳನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ರಾಮಯ್ಯ ಅವರ ಕೃತಿ ಓದಿದ ಮೇಲೆ ಮನದಟ್ಟಾಯಿತು ಎಂದು ಹೇಳಿದರು.

ರಾಮಯ್ಯ ಅವರ ಕೃತಿ ಹೊರಬರಲು ಕಾರಣಕರ್ತರಾದ ಎಚ್.ಎನ್.ಕೃಷ್ಣ, ಎಚ್.ಪಿ.ದಿನೇಶ್, ಪಿ.ಕೆ.ಚನ್ನಕೃಷ್ಣ, ಕಿರಣ್ಮಾಡಾಳ್ ಅಭಿಮಾನಿ ಸಂಸ್ಥೆಯ ಪ್ರಭು,ಸಂತೋಷ್,ಸುರೇಶ್ ರಾವ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಲ್ಲೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರತಿಮಾ, ಟಿ.ನಾಗರಾಜ್, ವಿ.ಪುರುಷೋತ್ತಮ್, ಕೆ.ಟಿ.ಚಂದ್ರು ಮುಂತಾದವರು ಉಪಸ್ಥಿತರಿದ್ದರು.

# ಅಭಿಮಾನಿಗೆ ಕೀರ್ತಿ ಕಳಶ
ಈ ಪುಸ್ತಕ ಪ್ರಕಟಣೆ ಮಾಡಿರುವುದು ನಮ್ಮ ಸಂಸ್ಥೆಗೊಂದು ಗರಿ ಮೂಡಿದಂತಾಯಿತು. ಮುಂದೆ ಏನು ಮಾಡಬೇಕೆಂಬ ದಾರಿ ತೋರಿತು. ರಾಮಯ್ಯ ಅವರು ಪತ್ರಿಕೋದ್ಯಮದ ಭೀಷ್ಮ ಪಿತಾಮಹರಿದ್ದಂತೆ. ಅವರ ಈ ಕೃತಿ ಪತ್ರಕರ್ತರಿಗೆ ಕೈಪಿಡಿ ರೀತಿಯಲ್ಲಿ ಮಾರ್ಗದರ್ಶನವಾಗುತ್ತದೆ. ಇನ್ನು ಮುಂದೆ ನಾವು ಇಂತಹ ಅಚ್ಚುಕಟ್ಟಾದ ಪುಸ್ತಕಗಳನ್ನು ಹೊರತರಬಹುದು ಎಂಬ ವಿಶ್ವಾಸ ಮೂಡಿಸಿದೆ.
-ವಿ.ಶ್ರೀನಿವಾಸ್
ಅಭಿಮಾನಿ ಸಮೂಹ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರು

Articles You Might Like

Share This Article