ಪ್ರತಿಭಟನೆ ವೇಳೆ ಸಂಘರ್ಷ, ಪೊಲೀಸರಿಂದ ಲಾಠಿ ಚಾರ್ಜ್

Social Share

ಬೆಂಗಳೂರು,ಜ.31- ರಾಯಚೂರಿನಲ್ಲಿ ಗಣರಾಜ್ಯೋತ್ಸವದಂದು ಅಂಬೇಡ್ಕರ್ ಭಾವಚಿತ್ರ ತೆಗೆಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ ಜ್ಞಾನಭಾರತಿ ಆವರಣದಲ್ಲಿಂದು ಪ್ರತಿಭಟನೆ ನಡೆಸುತ್ತಿದ್ದ ಸ್ನಾತಕೋತ್ತರ ವಿಭಾಗದ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳು ಹಾಗೂ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ ವೇಳೆ ಸಂಘರ್ಷ ಉಂಟಾಗುವ ಸಾಧ್ಯತೆ ಅರಿತ ಪೊಲೀಸರು ಗುಂಪನ್ನು ಚದುರಿಸಲು ಲಘು ಲಾಠಿಪ್ರಹಾರ ಮಾಡಿದ್ದಾರೆ.
ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಪೊಲೀಸರ ವರ್ತನೆಯಿಂದ ವಿಚಲಿತರಾಗಿ ಅವರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಗಣರಾಜ್ಯೋತ್ಸವದಂದು ರಾಯಚೂರಿನಲ್ಲಿ ಧ್ವಜಾರೋಹಣದ ವೇಳೆ ಅಂಬೇಡ್ಕರ್ ಭಾವಚಿತ್ರ ತೆಗೆಸಿ ಅವಮಾನ ಮಾಡಿದ್ದಾರೆ.
ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸ್ನಾತಕೋತ್ತರ ವಿಭಾಗದ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳು ಇಂದು ಬೆಳಗ್ಗೆ ಜ್ಞಾನಭಾರತಿ ಆಡಳಿತ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದರು.
ಇದೇ ಸಂದರ್ಭದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನಭಾರತಿ)ದಲ್ಲಿ ವಿವಿಧ ಶೈಕ್ಷಣಿಕ ಸಮಸ್ಯೆಗಳಿವೆ. ಪ್ರಮುಖವಾಗಿ ಪರೀಕ್ಷೆ ಮೌಲ್ಯಮಾಪನ ಮತ್ತು ಫಲಿತಾಂಶ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಅಲ್ಲದೆ, ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಇದುವರೆಗೂ ಸರಿಯಾದ ಮಾಹಿತಿ ನೀಡಿಲ್ಲ. ಈ ಸಂಬಂಧ ಸಹಾಯವಾಣಿ ತೆರೆಯಬೇಕೆಂದು ವಿದ್ಯಾರ್ಥಿ ಪರಿಷತ್ ಒತ್ತಾಯಿಸಿದೆ.
ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ರಸ್ತುತ ಸೌಲಭ್ಯಗಳು ಸಾಕಾಗುವುದಿಲ್ಲ ಹಾಗೂ ಜ್ಞಾನಭಾರತಿ ಆವರಣದಲ್ಲಿರುವ ಬಿ.ಆರ್.ಅಂಬೇಡ್ಕರ್ ಕೇಂದ್ರೀಯ ಗ್ರಂಥಾಲಯ ಬಳಕೆಯ ಸಮಯವನ್ನು ವಿಸ್ತರಣೆ ಮಾಡಬೇಕು. ವಿಶ್ವವಿದ್ಯಾಲಯದ ವಿದ್ಯಾಭ್ಯಾಸಕ್ಕೆ ಪೂರಕವಾಗಿ ವಾತಾವರಣ ನಿರ್ಮಾಣ ಮಾಡುವಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಎಬಿಪಿವಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಆ ಸಂದರ್ಭದಲ್ಲಿ ಎರಡು ಗುಂಪುಗಳ ಮಧ್ಯೆ ಸಂಘರ್ಷ ಉಂಟಾಗಬಹುದೆಂದು ಅರಿತು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದಾಗ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ವಿದ್ಯಾರ್ಥಿನಿಯೊಬ್ಬರ ತಲೆಗೆ ಗಂಭೀರ ಪೆಟ್ಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಎಸಿಪಿ ಕೋದಂಡರಾಮ ಸೇರಿದಂತೆ ಹಲವು ಪೊಲೀಸರಿಗೂ ಗಾಯಗಳಾಗಿವೆ.
ಬಿಗುವಿನ ವಾತಾವರಣ: ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಜ್ಞಾನಭಾರತಿ ಆವರಣದ ಸುತ್ತ ಪೊಲೀಸರನ್ನು ನಿಯೋಜಿಸಲಾಗಿದೆ.

Articles You Might Like

Share This Article