ಬೆಂಗಳೂರು,ಆ.1-ಗೃಹ ಸಚಿವರು ಸೇರಿದಂತೆ ಸರ್ಕಾರದ ಹಲವಾರು ಮಂದಿ ಸಚಿವರು ಹಾಗೂ ಗಣ್ಯ ವ್ಯಕ್ತಿಗಳು ವಾಸಿಸುವ ಜೆ.ಸಿ.ನಗರ ಪೊಲೀಸ್ ಠಾಣೆಯಲ್ಲಿ ಇನ್‍ಸ್ಪೆಕ್ಟರ್ ಹುದ್ದೆ ಖಾಲಿ ಇತ್ತು ಎಂಬ ಅಂಶ ವಿಚಿತ್ರವಾದರೂ ಇದು ಸತ್ಯ.
ಇತ್ತೀಚೆಗೆ ಎಬಿವಿಪಿಯ ಕಾರ್ಯಕರ್ತರು ಪಿಎಫ್‍ಐ ಸೇರಿದಂತೆ ಮೂಲಭೂತವಾದಿ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಗೃಹಸಚಿವ ಅರಗ ಜ್ಞಾನೇಂದ್ರ ಅವರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಸಚಿವರ ಮನೆಯ ಗೇಟ್ ದಾಟಿ ಕಾರ್ಯಕರ್ತರು ಒಳಗೆ ಹೋಗಿದ್ದರು. ಇದು ಭದ್ರತಾ ವೈಫಲ್ಯ ಎಂಬ ಟೀಕೆಗೆ ಗುರಿಯಾಗಿದ್ದು, ಸಚಿವರ ಮನೆಗೆ ರಕ್ಷಣೆ ನೀಡಲಾಗದಿದ್ದ ಮೇಲೆ ರಾಜ್ಯದ ಜನರಿಗೆ ಹೇಗೆ ನೀಡಲು ಸಾಧ್ಯ ಎಂಬ ಚರ್ಚೆಗಳು ನಡೆದಿದ್ದವು.
ಭದ್ರತಾ ಲೋಪದ ಕುರಿತು ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಯವರಿಗೆ ವರದಿ ನೀಡಿದ್ದಾರೆ.
ಗೃಹ ಸಚಿವರ ನಿವಾಸದ ಬಳಿ ಸಿಎಆರ್‍ನ ಐವರು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ ವೇಳೆ ಸಿಎಆರ್ ಕಾನ್‍ಸ್ಟೆಬಲ್ ಜೆ.ಸಿ.ನಗರ ಠಾಣೆಗೆ ಮಾಹಿತಿ ನೀಡಿದ್ದಾರೆ.
ಕಳೆದ 10 ದಿನಗಳ ಹಿಂದೆ ಈ ಠಾಣೆಯ ಇನ್‍ಸ್ಪೆಕ್ಟರ್ ವರ್ಗಾವಣೆಯಾಗಿದ್ದು, ಬೇರೆಯವರನ್ನು ನಿಯೋಜನೆ ಮಾಡದೆ ಹುದ್ದೆ ಖಾಲಿಯಿದೆ. ಸಬ್‍ಇನ್‍ಸ್ಪೆಕ್ಟರ್ ಪ್ರಭಾರ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಎಬಿವಿಪಿ ಪ್ರತಿಭಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ಇರಲಿಲ್ಲ. ಘಟನೆ ನಡೆದಾಗ ಪೊಲೀಸ್ ಠಾಣೆಯಲ್ಲಿ ಸಾಕಷ್ಟು ಸಿಬ್ಬಂದಿಗಳು ಇರಲಿಲ್ಲ. ಜವಾಬ್ದಾರಿ ಹೊತ್ತಿದ್ದ ಸಬ್‍ಇನ್‍ಸ್ಪೆಕ್ಟರ್ ಸ್ಥಳಕ್ಕೆ ಬರಲು ತಡವಾಗಿತ್ತು. ಅಷ್ಟರೊಳಗೆ ಕಾರ್ಯಕರ್ತರು ರಂಪಾಟ ಮಾಡಿದರು ಎಂದು ತಿಳಿಸಲಾಗಿದೆ.
ಮೇಲ್ನೋಟಕ್ಕೆ ಭದ್ರತಾ ವೈಫಲ್ಯ ಹಾಗೂ ಪ್ರತಿಭಟನೆ ಮಾಹಿತಿ ಕಲೆ ಹಾಕಲು ಪೊಲೀಸರು ವಿಳಂಬ ಮಾಡಿದರು ಎಂಬ ಆರೋಪಗಳು ಕೇಳಿ ಬಂದಿದ್ದವು. ಗೃಹ ಸಚಿವರ ಮನೆ ಎದುರು ನಡೆದ ಹೈಡ್ರಾಮದ ಬಳಿಕ ಎಚ್ಚೆತ್ತುಕೊಂಡ ಸರ್ಕಾರ ನಿನ್ನೆ ಜೆ.ಸಿ.ನಗರ ಪೊಲೀಸ್ ಠಾಣೆಗೆ ಇನ್‍ಸ್ಪೆಕ್ಟರ್ ಅವರನ್ನು ನಿಯೋಜನೆ ಮಾಡಿದೆ.