ಅಕೇಶಿಯಾ ವಿರುದ್ಧ ಮಲೆನಾಡಿಗರ ಆಕ್ರೋಶ

ಶಿವಮೊಗ್ಗ, ಜ.7- ಭದ್ರಾವತಿಯ ಎಂಪಿಎಂ ಕಾರ್ಖಾನೆಯ ಪುನರಾರಂಭದ ನೆಪದಲ್ಲಿ ಮಲೆನಾಡಿಗೆ ಮಾರಕವಾದ ಅಕೇಶಿಯ ಬೆಳೆಸುವುದನ್ನು ಕೈಬಿಡಲು ಆಹ್ರಹಿಸಿ ಇಂದು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು. ತುಂಗಾ ಸೇತುವೆಯಿಂದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯವರೆಗೆ ಪ್ತತಿಭಟನಾ ಮೆರವಣಿಗೆ ನಡೆಸಿದ ಬಳಿಕ ಮುಖ್ಯ ಅರಣ್ಯಾಧಿಕಾರಿ ಕಚೇರಿ ಆವರಣ ಪ್ರವೇಶಿಸಿ ಅಲ್ಲಿ ಧರಣಿ ನಡೆಸಲು ಮುಂದಾದರು. ಆದರೆ ಪೊಲೀಸರು ಗೇಟ್ ಬಂದ್ ಮಾಡಿ ಇವರ ಒಳಪ್ರವೇಶಕ್ಕೆ ಅವಕಾಶ ನೀಡಲಿಲ್ಲ.

ಅಧಿಕಾರಿಗಳ ಈ ವರ್ತನೆಯನ್ನು ವಿರೋಧಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಗೇಟ್ ಮುಂಭಾಗದಲ್ಲಿಯೇ ಧರಣಿ ಮತ್ತು ಪ್ರತಿಭಟನಾ ಸಭೆ ನಡೆಸಿದರು. ಪರಿಸರ ಸಂರಕ್ಷಣೆ ಹೋರಾಟದಲ್ಲಿ ಪಾಲ್ಗೊಂಡ ಪ್ರೊ.ಬಿ.ಎಂ. ಕುಮಾರ ಸ್ವಾಮಿ, ಪ್ರೊ. ರಾಜೇಂದ್ರ ಚೆನ್ನಿ, ಕೆ.ಪಿ.ಶ್ರೀಪಾಲ್, ರೈತ ಮುಖಂಡ ಕೆ.ಟಿ. ಗಂಗಾಧರ್, ಡಿಎಸ್‍ಎಸ್‍ನ ಎಸ್. ಗುರುಮೂರ್ತಿ, ಶ್ರೀಪತಿ, ನವ್ಯಶ್ರೀ ನಾಗೇಶ್ ಸೇರಿದಂತೆ ಹಲವರು ಸಭೆಯನ್ನುದ್ದೇಶಿಸಿ ಮಾತನಾಡಿ, ಸರ್ಕಾರ ಕೂಡಲೇ ಗುತ್ತಿಗೆ ಮುಂದುವರೆಸುವುದನ್ನು ಕೈಬಿಟ್ಟು ಇಲ್ಲಿ ಸಹಜ ಕಾಡು ಬೆಳೆಸಬೇಕೆಂದು ಒತ್ತಾಯಿಸಿದರು.

ಸುಮಾರು 40 ವರ್ಷಗಳ ಹಿಂದೆ ಮೈಸೂರು ಪೇಪರ್ ಮಿಲ್ಸ್ (ಎಂಪಿಎಂ) ಕಾಗದ ಕಾರ್ಖಾನೆ ಯನ್ನು ಸರ್ಕಾರ ಆರಂಭಿಸಿದಾಗ ಅದಕ್ಕೆ ಕಚ್ಚಾ ವಸ್ತು ಸರಬರಾಜಿಗಾಗಿ ಮಲೆನಾಡಿನ ದಟ್ಟ ಕಾಡಿನ 32,000 ಹೆಕ್ಟೇರ್(ಅಂದಾಜು 80 ಸಾವಿರ ಎಕರೆ) ಅರಣ್ಯ ಭೂಮಿಯನ್ನು 40 ವರ್ಷದ ಲೀಸ್(ಗುತ್ತಿಗೆ) ಆಧಾರದ ಮೇಲೆ ನೀಡಲಾಗಿತ್ತು. ಲೀಸ್ ಅವಧಿ ಮುಗಿದ ಮೇಲೆ ಒಂದು ವೇಳೆ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಿಕೊಟ್ಟರೂ ಈ ಭೂಮಿಯನ್ನು ಅರಣ್ಯ ಇಲಾಖೆಗೆ ಮರಳಿ ಕೊಡಬೇಕು ಎಂದು ಲೀಸ್‍ನಲ್ಲಿ ಸರ್ಕಾರವೇ ಕಸರತ್ತು ಹಾಕಿತ್ತು.

ಆ ಭೂಮಿಯಲ್ಲಿ ಬೆಳೆದುನಿಂತಿದ್ದ ಸಹಜ ಕಾಡನ್ನು ನಾಶ ಮಾಡಿದ ಕಂಪನಿ, ಅಲ್ಲಿ ಮಲೆನಾಡಿನ ಅಂತರ್ಜಲ ಮತ್ತು ಒಟ್ಟಾರೆ ಪರಿಸರಕ್ಕೆ ಮಾರಕವಾದ ಅಕೇಶಿಯಾ ಹಾಗೂ ನೀಲಗಿರಿ ಬೆಳೆದಿದೆ. ಸಾವಿರಾರು ಎಕರೆ ಪ್ರದೇಶದ ಕಾಡಿನ ಜಾಗದಲ್ಲಿ ಈ ವಿದೇಶಿ ತಳಿ ಮರಗಳನ್ನು ಬೆಳೆದ ಕಾರಣ ಮಲೆನಾಡಿನ ಪರಿಸರ, ವನ್ಯಜೀವಿ, ಜನಜೀವನ, ಹವಾಮಾನ ಮತ್ತು ನದಿ ಕಣಿವೆಯ ಜೊತೆ ಅಂತರ್ಜಲ ಮಟ್ಟದ ಮೇಲೆಯೂ ಸಾಕಷ್ಟು ಪರಿಣಾಮಗಳಾಗಿವೆ. ಈ ನಡುವೆ ನಷ್ಟದ ಸುಳಿಗೆ ಸಿಲುಕಿ ಎಂಪಿಎಂ ಕಂಪನಿ ಮುಚ್ಚಿಹೋಗಿ ವರ್ಷಗಳೇ ಉರುಳಿವೆ.

ಈಗ, ಭೂಮಿಯ ಲೀಸ್ ಅವಧಿ ಮುದಿಗಿದೆ. ಆದರೆ ಸರ್ಕಾರ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆಗೆ ಮರಳಿ ಪಡೆಯುವ ಬದಲು, ಮತ್ತೆ ಲೀಸ್ ನವೀಕರಣದ ಮೂಲಕ ಆ ಭೂಮಿಯನ್ನು ಮುಚ್ಚಿಹೋಗಿರುವ ಕಂಪನಿಗೆ ಪರಭಾರೆ ಮಾಡಿದೆ!

ಕಾಡಿನ ನಡುವಿನ, ನಮ್ಮ ಮನೆ, ಹೊಲ, ಗದ್ದೆಗಳಿಗೆ ಹೋಗಲೂ ಅವಕಾಶವಾಗದಂತೆ ಖಾಸಗೀ ಕಂಪನಿಗಳ ಬಲಿಷ್ಠ ಬೇಲಿಗಳು ಸುತ್ತುವರಿಯಲಿವೆ. ಅವರ ಅನುಮತಿ ಇಲ್ಲದೆ ನಮ್ಮ ಮನೆಗೆ ನಾವೇ ಹೋಗುವುದು ಕೂಡ ದುಸ್ತರವಾಗಲಿದೆ! ಹಾಗಾಗಿ ವಿರೋಧ. ನಮ್ಮ ಬದುಕಿನ ಮೇಲೆ ಮತ್ತೊಬ್ಬರ ಬೀಗ ಬೀಳುವುದಕ್ಕಾಗಿ ವಿರೋಧ, ನಮ್ಮ ಕಾಡಿನ ಮೇಲೆ, ಕಾಡಿನ ಜೀವಿಗಳ ಮೇಲೆ, ನಮ್ಮ ಹೊಳೆ-ಹಳ್ಳ-ನದಿ-ಕಣಿವೆಗಳ ಮೇಲೆ ದೊಣ್ಣೆ ನಾಯಕನ ಅಪ್ಪಣೆಯ ತೂಗುಗತ್ತಿ ಬೇಡ ಎಂದು ವಿರೋಧ!