ಶಬರಿಮಲೆಗೆ ತೆರಳಿ ವಾಪಸಾಗುತ್ತಿದ್ದ ಭೀಕರ ಅಪಘಾತ, ಮೂವರು ಸಾವು

ನೆಲಮಂಗಲ, ಜ.9- ಶಬರಿಮಲೆಗೆ ತೆರಳಿ ದೇವರ ದರ್ಶನ ಪಡೆದು ವಾಪಸಾಗುತ್ತಿದ್ದ ಭಕ್ತರಿದ್ದ ಕಾರು ರಸ್ತೆ ಬದಿಯ ಡಿವೈಡರ್‍ಗೆ ಗುದ್ದಿ ಉರುಳಿ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯ ಗುಡೇಮಾರನಹಳ್ಳಿ ಮೇಲ್ಸೇತುವೆ ಬಳಿ ಸಂಭವಿಸಿದೆ.

ಮೃತರು ಮಂಗಳೂರು ಮೂಲದ ಕಿಶನ್ (31), ಅಕ್ಷಯ್ (30) ಮತ್ತು ಮೋಹನಪ್ಪ (38) ಎಂದು ತಿಳಿದುಬಂದಿದೆ. ಶಬರಿಮಲೆ ಯಾತ್ರೆ ಕೈಗೊಂಡಿದ್ದ ಇವರು ಕಳೆದ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದರು.

ಇಂದು ಮುಂಜಾನೆ 2 ಗಂಟೆ ಸಂದರ್ಭದಲ್ಲಿ ಮಂಗಳೂರು ಕಡೆಗೆ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ರಾಷ್ಟ್ರೀಯ ಹೆದ್ದಾರಿ-48ರಲ್ಲಿ ರಸ್ತೆ ಮಧ್ಯದ ಡಿವೈಡರ್‍ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.

ವಾಹನದಲ್ಲಿ 9 ಮಂದಿ ಇದ್ದರು ಎಂದು ಹೇಳಲಾಗುತ್ತಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಕೆಲವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.