ಭೀಕರ ರಸ್ತೆ ಅಪಘಾತದಲ್ಲಿ 6 ಮಂದಿ ಸಾವು

ಲಕ್ನೋ, ನ.28- ಉತ್ತರಪ್ರದೇಶದಲ್ಲಿ ಇಂದು ಸಂಭವಿಸಿದ ಎರಡು ಭೀಕರ ರಸ್ತೆ ಅಪಘಾತಗಳಲ್ಲಿ 6 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ. ಸರ್ಕಾರಿ ಸಾರಿಗೆ ಸಂಸ್ಥೆ ಬಸ್‍ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿರುವ ಘಟನೆ ಇಂದು ಮುಂಜಾನೆ ನೋಯ್ಡಾ ಸಮೀಪದ ಯಮುನಾ ಎಕ್ಸ್‍ಪ್ರೆಸ್ ಹೆದ್ದಾರಿಯಲ್ಲಿ ಸಂಭವಿಸಿದೆ.

ಅತಿ ವೇಗವಾಗಿ ಸಂಚರಿಸುತ್ತಿದ್ದ ಕಾರು ಉತ್ತರ ಪ್ರದೇಶ ಸರ್ಕಾರಿ ಬಸ್‍ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ ಮತ್ತೊಬ್ಬ ತೀವ್ರವಾಗಿ ಗಾಯಗೊಂಡಿದ್ದು , ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬೆಟಾ-2 ಪೊಲೀಸರು ತಿಳಿಸಿದ್ದಾರೆ.

ಅದೇ ರೀತಿ ಅಮೇಥಿಯ ಮುಸಾಫಿರ್ ಖಾನಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಿನಿ ಟ್ರಕ್‍ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರನ್ನು ಟ್ರಕ್ ಚಾಲಕ ಅಕ್ವಿಲ್ ಅಹಮದ್ (35) ಹಾಗೂ ಕ್ಲೀನರ್ ಅಮನ್ ಯಾದವ್ (22) ಎಂದು ಗುರುತಿಸಲಾಗಿದೆ.

ಮೃತಪಟ್ಟವರಿಬ್ಬರು ಖಾನ್‍ಪುರ್ ನಿವಾಸಿಗಳಾಗಿದ್ದು , ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲು ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಎಸ್‍ಪಿ ಮನೋಜ್ ಕುಮಾರ್ ಯಾದವ್ ತಿಳಿಸಿದ್ದಾರೆ.