ಹೊಸಕೋಟೆ, ಅ.3-ನಿಂತಿದ್ದ ಲಾರಿಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಆಂಧ್ರಪ್ರದೇಶ ಮೂಲದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಿನ ಜಾವ ಮೈಲಾಪುರ ಗೇಟ್ ಬಳಿ ನಡೆದಿದೆ. ಚಿತ್ತೂರು ಮೂಲದ ಬಾಲಮುರುಗನ್ (45), ಮತ್ತು ಸೆಲ್ವಿ (36) ಮೃತಪಟ್ಟ ದಂಪತಿ. ಇವರ ನಾಲ್ಕು ವರ್ಷದ ಮಗುವಿನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆ ರಾತ್ರಿ 9.30ರ ಸುಮಾರಿನಲ್ಲಿ ಆಂಧ್ರಪ್ರದೇಶದ ಬಲಿಜಖಂಡ್ರಿಗದಿಂದ ಬೆಂಗಳೂರಿಗೆ ಹೊರಟ ಕೆಎಸ್‍ಆರ್‍ಟಿಸಿ ಬಸ್ ಬೆಳಗಿನ ಜಾವ 1.45ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿಯ ಮೈಲಾಪುರ ಗೇಟ್ ಬಳಿ ಬರುತ್ತಿದ್ದಾಗ ರಸ್ತೆ ಬದಿ ಕಲ್ಲು ತುಂಬಿದ್ದ ಲಾರಿ ಕೆಟ್ಟುನಿಂತಿರುವುದು ಗಮನಕ್ಕೆ ಬಾರದೆ ಹಿಂಬದಿಯಿಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಅಪಘಾತ ಸಂಭವಿಸುತ್ತಿದ್ದಂತೆ ಚಾಲಕ ಸ್ಥಳದಲ್ಲೇ ಬಸ್ ಬಿಟ್ಟು ಪರಾರಿಯಾಗಿದ್ದಾನೆ. ಸುದ್ದಿ ತಿಳಿದು ಬೆಂಗಳೂರು ಗ್ರಾಮಾಂತರ ಠಾಣೆ ಎಸ್‍ಪಿ ಮಲ್ಲಿಕಾರ್ಜುನ ಬಾಲದಂಡಿ ಮತ್ತು ಹೊಸಕೋಟೆ ಠಾಣೆ ಇನ್ಸ್‍ಪೆಕ್ಟರ್ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಬಸ್‍ನಲ್ಲಿದ್ದ ಮೂವರು ಮಕ್ಕಳು ಸೇರಿದಂತೆ 20 ಮಂದಿಗೆ ಗಂಭೀರ ಗಾಯಗಳಾಗಿದ್ದು, ಪೊಲೀಸ್ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಎಲ್ಲರನ್ನೂ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.