ಕೊಪ್ಪಳ : ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ದುರ್ಮರಣ

Social Share

ಕೊಪ್ಪಳ,ಜು.24- ಸ್ಕಾರ್ಪಿಯೋಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟು ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕುಕನೂರು ತಾಲ್ಲೂಕಿನ ಬಾನಾಪುರದಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದೆ. ಗಾಯಗೊಂಡಿರುವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಬಿನ್ನಾಳ ಗ್ರಾಮದ ದೇವಪ್ಪಕೊಪ್ಪದ (62), ಗಿರಿಜಮ್ಮ(45), ಶಾಂತಮ್ಮ (32), ಪಾರ್ವತಮ್ಮ(32), ಕಸ್ತೂರಮ್ಮ(22) ಮೃತಪಟ್ಟ ದುರ್ದೈವಿಗಳು. ಕೊಪ್ಪಳದಲ್ಲಿ ನಡೆದ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಪಸ್ ಬಿನ್ನಾಳ ಗ್ರಾಮಕ್ಕೆ ಹಿಂದಿರುಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಈ ವಾಹನದಲ್ಲಿ ಒಟ್ಟು 9 ಮಂದಿ ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಪಲ್ಲವಿ(28), ಚಾಲಕ ಹರ್ಷವರ್ಧನ್, ಮಕ್ಕಳಾದ ಪುಟ್ಟರಾಜ್(07), ಭೂಮಿಕ(5) ಅವರು ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಸುದ್ದಿ ತಿಳಿದ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಯೂಗಿರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಕನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Articles You Might Like

Share This Article