ಬೆಂಗಳೂರು,ಸೆ.16- ನಗರೋತ್ಥಾನ ಯೋಜನೆಯಡಿ ಬಿಡುಗಡೆಯಾದ ಕ್ರಿಯಾ ಯೋಜನೆಗೆ ಸಚಿವರೊಬ್ಬರ ಆಪ್ತ ಕಾರ್ಯದರ್ಶಿ ತಡೆ ಹಿಡಿದಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಶಾಸಕ ಭೀಮಾನಾಯಕ್ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಪ್ರಸಂಗ ಜರುಗಿತು. ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್ ಅವರ ಉತ್ತರಕ್ಕೆ ತೃಪ್ತರಾಗದ ಅವರು, ಸಚಿವರ ಆಪ್ತ ಕಾರ್ಯದರ್ಶಿ ಕ್ರಿಯಾಯೋಜನೆ ಪತ್ರಕ್ಕೆ ತಡೆಹಿಡಿದಿದ್ದಾರೆ ಎಂದರೆ ಶಾಸಕರ ಹಕ್ಕಿಗೆ ಬೆಲೆ ಇಲ್ಲವೇ. ಇದು ಸರಿಪಡಿಸಬೇಕೆಂದು ಒತ್ತಾಸಿ ಸದನದ ಬಾವಿಗಿಳುದು ಪ್ರತಿಪಟಿಸಿದರು.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣ ಪಂಚಾಯ್ತಿಗೆ ನಗರೋತ್ಥಾನ ಯೋಜನೆಯಡಿ 8 ಕೋಟಿ ಕ್ರಿಯಾ ಯೋಜನೆಯನ್ನು ಕಳುಹಿಸಲಾಗಿತ್ತು. ಆದರೆ, ಈ ಕ್ರಿಯಾ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ತಡೆ ಹಿಡಿದಿದ್ದಾರೆ. ಇದು ಶಾಸಕರ ಹಕ್ಕನ್ನು ಮೊಟಕುಗೊಳಿಸಿದಂತೆ. ರಾಜ್ಯದ 224 ಕ್ಷೇತ್ರಗಳಿಗೂ ಈ ರೀತಿ ಮಾಡಿದ್ದೀರಾ. ನಮಗೆ ನ್ಯಾಯ ಕೊಡಿ ಎಂದು ಸಭಾಧ್ಯಕ್ಷರ ಬಳಿ ಮನವಿ ಮಾಡಿದರು.
ಆಗ ಸಚಿವ ಎಂಟಬಿ ನಾಗರಾಜ್ ಅವರು ಹಗರಿಬೊಮ್ಮನಹಳ್ಳಿಯ ಪಟ್ಟಣ ಪಂಚಾಯ್ತಿಯ ಎಲ್ಲಾ ವಾರ್ಡ್‍ಗಳಿಗೆ ನ್ಯಾಯಬದ್ಧವಾಗಿ ಅನುದಾನ ಹಂಚಿಕೆ ಮಾಡದೆ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಇದನ್ನು ತಡೆ ಹಿಡಿಯಲಾಗಿದೆ ಎಂದು ಸಮರ್ಥಿಸಿಕೊಂಡರು.
ಎಲ್ಲಾ ವಾರ್ಡ್‍ಗಳಿಗೂ ನಿಯಮ ಬದ್ಧವಾಗಿ ಅನುದಾನ ಹಂಚಿಯಾಗಬೇಕು. ಒಂದೊಂದು ವಾರ್ಡ್‍ಗಳಿಗೆ ಒಂದೊಂದು ರೀತಿ ಮಾಡಲು ಬರುವುದಿಲ್ಲ. ಒಂದು ವೇಳೆ ಇದರಲ್ಲಿ ಲೋಪದೋಷಗಳಿದ್ದರೆ ನನ್ನ ಗಮನಕ್ಕೆ ತನ್ನಿ ಎಂದು ಮನವಿ ಮಾಡಿದರು. ಇದಕ್ಕೆ ಸಿಡಿಮಿಡಿಗೊಂಡ ಭೀಮನಾಯಕ್, ಇದು ಶಾಸಕರ ಹಕ್ಕು ಚ್ಯುತಿ ಪ್ರಶ್ನೆ. ಎಲ್ಲಾ ಕ್ಷೇತ್ರಗಳಿಗೂ ಇದೇ ರೀತಿ ಮಾಡಿದ್ದರೆ ನಾನು ಮಾತನಾಡುತ್ತಿರಲಿಲ್ಲ. ಇಂದು ನನಗಾಗಿರಬಹುದು. ನಾಳೆ ಇಡೀ ಸದನಕ್ಕೂ ಅನ್ವಯಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿ ಧರಣಿಗೆ ಮುಂದಾದರು.
ಇದಕ್ಕೆ ಸಿಡಿಮಿಡಿಗೊಂಡ ಸಭಾಧ್ಯಕ್ಷರು ನಿಮ್ಮ ನಿಮ್ಮಲ್ಲಿ ಕುಳಿತು ಪರಿಹರಿಸಿಕೊಳ್ಳಬಹುದು. ಅದಕ್ಕೂ ಕೂಡ ಸದನದಲ್ಲಿ ಬಾವಿಗಿಳಿದು ಪ್ರತಿಭಟನೆ ನಡೆಸಬೇಕಾದ ಅಗತ್ಯವಿದೆಯೇ ? ಸಂಬಂಧಪಟ್ಟ ಸಚಿವರು ಉತ್ತರ ಕೊಟ್ಟರೂ ಈ ರೀತಿ ಮಾಡುವುದು ಸರಿಯ್ಲ ಎಂದು ಆಕ್ಷೇಪಿಸಿದರು. ಆಗ ಸದಸ್ಯರಾದ ದೇಶಪಾಂಡೆ, ಜಮೀರ್ ಅಹಮ್ಮದ್, ವೆಂಕಟರಮಣಪ್ಪ ಮತ್ತಿತರರು ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು.
ಸ್ಥಳಕ್ಕೆ ಭೇಟಿ ಕೊಡುವೆ: ಶಾಸಕ ಶರಣುಸಲಗಾರ್ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಎಂಟಿಬಿ ನಾಗರಾಜ್, ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಛತ್ರಪತಿ ಶಿವಾಜಿ ಮಹಾರಾಜ್ ಅವರ ಉದ್ಯೋನವದ ಕಾಮಗಾರಿ ಸ್ಥಳಕ್ಕೆ ಖುದ್ದು ನಾನೇ ಭೇಟಿ ನೀಡಿ ಪರಿಶಿಲೀಸುತ್ತೇನೆ ಎಂದು ಭರವಸೆ ನೀಡಿದರು. ಇಲ್ಲಿನ ಯರ್ರಂಡಿ ಸರ್ವೆ ನಂ.36ರಲ್ಲಿ 8 ಎಕರೆ ಜಮೀನ ಗುರುತಿಸಿ ಛತ್ರಪತಿ ಶಿವಾಜಿ ಮಹಾರಾಜ್ ಅವರ ಉದ್ಯಾನವನ ನಿರ್ಮಿಸಲು 10 ಕೋಟಿ ಅನುದಾನವನ್ನು ಮಂಜೂರು ಮಾಡಿದ್ದೇವೆ.
ಶಾಸಕರ ಮನವಿಯಂತೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ನಾನೇ ಪರಿಶೀಲಿಸುತ್ತೇನೆ. ರಾಷ್ಟ್ರೀಯ ಹೆದ್ದಾರಿಗೆ ಇದು ಹೊಂದಿಕೊಂಡಿದ್ದು, ರಸ್ತೆ ಅಗತ್ಯವಿದೆ ಎಂದು ಕೇಳಿ ಬಂದಿದೆ. ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.