ಕಾಂಗ್ರೆಸ್ ಸೇರಲು ಮುಂದಾದ ಕಲಾ ಸಾಮ್ರಾಟ್ ಎಸ್.ನಾರಾಯಣ್

Social Share

ಬೆಂಗಳೂರು, ಜ.30- ನಟ, ನಿರ್ದೇಶಕ, ನಿರ್ಮಾಪಕ ಎಸ್.ನಾರಾಯಣ್ ಅವರು ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಎಸ್.ನಾರಾಯಣ್ ಭೇಟಿ ಮಾಡಿ ಚರ್ಚೆ ನಡೆಸಿದ್ದು, ಪಕ್ಷ ಸೇರುವ ಇಚ್ಚೆ ವ್ಯಕ್ತ ಪಡಿಸಿದ್ದಾರೆ.
ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಎಸ್.ನಾರಾಯಣ್ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಚೈತ್ರದ ಪ್ರೇಮಾಂಜಲಿ ನಿರ್ದೇಶನದ ಮೂಲಕ ಸ್ವತಂತ್ರ ವೃತ್ತಿ ಜೀವನ ಆರಂಭಿಸಿದ ಅವರು ವರನಟ ಡಾ.ರಾಜ್‍ಕುಮಾರ್ ಅವರ ಶಬ್ಧವೇದಿ, ಡಾ.ವಿಷ್ಣುವರ್ಧನ್ ಅವರ ವೀರಪ್ಪ ನಾಯಕ ಸೇರಿದಂತೆ ಅಮೋಘ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಡಾ.ರಾಜ್ ಕುಮಾರ್ ಅವರ ಮೂವರು ಮಕ್ಕಳ ಚಿತ್ರಗಳನ್ನು ನಿರ್ದೇಶನ ಮಾಡಿದ್ದು, ಅಂಬರೀಶ್ ಅವರ ವೀರ ಪರಂಪರೆ, ರವಿಚಂದ್ರನ್ ಅವರ ರವಿಮಾಮ ಸೇರಿದಂತೆ 49 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. 5ಡಿ ಎಂಬ 50ನೇ ಚಿತ್ರ ನಿರ್ದೇಶನದಲ್ಲಿ ತೊಡಗಿದ್ದಾರೆ. ಹಲವಾರು ಚಿತ್ರಗಳಲ್ಲಿ ನಾಯಕ ನಟರಾಗಿ, ಸಾಹಿತ್ಯ ರಚನೆಕಾರರಾಗಿ ಯಶಸ್ವಿಯಾಗಿದ್ದಾರೆ.
ಸಾಂಸ್ಕøತಿಕ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿರುವ ನಾರಾಯಣ್ ಈಗ ರಾಜಕೀಯದತ್ತ ಒಲವು ತೋರಿಸಿದ್ದಾರೆ. ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನಾರಾಯಣ್ ಪಕ್ಷ ಸೇರುತ್ತಿರುವುದನ್ನು ಖಚಿತ ಪಡಿಸಿದ್ದಾರೆ. ಪಕ್ಷದ ಸಿದ್ಧಾಂತ ಒಪ್ಪಿ ಅವರು ಸೇರ್ಪಡೆಯಾಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಶೀಘ್ರವೇ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ನಾರಾಯಣ್ ಅಧಿಕೃತವಾಗಿ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Articles You Might Like

Share This Article