ಉದಯವಾಯ್ತು ಉಪ್ಪಿಯ ‘ಉತ್ತಮ ಪ್ರಜಾಕೀಯ ಪಾರ್ಟಿ’

Spread the love

UPP-Upendra

ಬೆಂಗಳೂರು, ಸೆ.18- ಜವಾಬ್ದಾರಿ ಮತ್ತು ಹೊಣೆಗಾರಿಕೆಯಿಂದ ಪಾರದರ್ಶಕ ಆಡಳಿತ ನಡೆಸುವುದೇ ನಮ್ಮ ಉತ್ತಮ ಪ್ರಜಾಕೀಯ ಪಾರ್ಟಿಯ ಉದ್ದೇಶವಾಗಿದೆ ಎಂದು ನಟ ಉಪೇಂದ್ರ ತಿಳಿಸಿದರು. ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬದ ಅಂಗವಾಗಿ ತಮ್ಮ ಮನೆಯಲ್ಲಿಯೇ ಉತ್ತಮ ಪ್ರಜಾಕೀಯ ಪಾರ್ಟಿಯ ಅಧಿಕೃತ ವೆಬ್‍ಸೈಟ್‍ಗೆ ಚಾಲನೆ ನೀಡಿ ಮಾತನಾಡಿದರು. ಗುಂಪುಗಾರಿಕೆ, ಜಾತಿ, ಹಣ, ತೋಳ್ಬಲ ಬಿಟ್ಟು ಜವಾಬ್ದಾರಿಯಿಂದ ಆಡಳಿತ ನಡೆಸುವುದೇ ನಮ್ಮ ಪಕ್ಷದ ಉದ್ದೇಶವಾಗಿದೆ. ನಾವು ಬಿಡುಗಡೆ ಮಾಡುವ ಪ್ರಣಾಳಿಕೆಯಲ್ಲಿ ಯಾವ ರೀತಿ ಆಶ್ವಾಸನೆ ನೀಡಿರುತ್ತೇವೋ ಅದನ್ನು ಈಡೇರಿಸಲಾಗುವುದು ಎಂದು ತಿಳಿಸಿದರು.

ಹಳ್ಳಿ, ಗ್ರಾಮ, ನಗರ ಸೇರಿದಂತೆ ಎಲ್ಲೇ ಆದರೂ ಜನರು ಅಲ್ಲಿನ ಸಮಸ್ಯೆ ಬಗ್ಗೆ ಮೊಬೈಲ್‍ನಲ್ಲಿ ಚಿತ್ರೀಕರಣ ಮಾಡಿ ನಮ್ಮ ಈ ವೆಬ್‍ಸೈಟ್‍ಗೆ ಕಳುಹಿಸಿಕೊಡಬೇಕು. ನಾವು ಆ ವಿಡಿಯೋ ನೋಡಿ ಸಮಸ್ಯೆಗಳ ಬಗ್ಗೆ ನುರಿತ ತಜ್ಞರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು. ನಮ್ಮ ಪಕ್ಷಕ್ಕೆ ಸೇರುವವರು ದೂರದೃಷ್ಟಿ, ಗುರಿ ಹಾಗೂ ಸುಧಾರಣೆ ಮಾಡುವ ಮನಸ್ಸು ಮತ್ತು ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರಬೇಕು. ಜಿಲ್ಲಾ ಯೋಜನಾ ಸಮಿತಿಗಳ ಹಾಗೂ ಕ್ಷೇತ್ರದ ಭವಿಷ್ಯದ ಬೆಳವಣಿಗೆ ಬಗ್ಗೆ ಅರಿವಿರಬೇಕು ಎಂದು ಮಾಹಿತಿ ನೀಡಿದರು.

ಸಂವಹನಶೀಲ ವಾಕ್ಚಾತುರ್ಯ ಮತ್ತು ಭಾಷಾಂತರ ಕೌಶಲ್ಯಗಳನ್ನು ಹೊಂದಿರಬೇಕು. ಭಾರತೀಯ ಸಂವಿಧಾನದ ಬಗ್ಗೆ ಆಳವಾದ ಅರಿವು ಹಾಗೂ ಸಾಮಾನ್ಯ ಮತ್ತು ಸಾಂವಿಧಾನಾತ್ಮಕ ತಿದ್ದುಪಡಿಗಳು ಸೇರಿದಂತೆ ರಾಜ್ಯ ಮತ್ತು ಕೇಂದ್ರದ ವಿವಿಧ ಮಸೂದೆಗಳ ಸಂಪೂರ್ಣ ಜ್ಞಾನ ಹೊಂದಿರಬೇಕು ಎಂದರು.  ಮುಂದಿನ ವರ್ಷದಿಂದ ನನ್ನ ಹುಟ್ಟುಹಬ್ಬವನ್ನು ಪಕ್ಷದ ಹುಟ್ಟುಹಬ್ಬವನ್ನಾಗಿ ಆಚರಿಸಲಾಗುವುದು.

ಈಗಾಗಲೇ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ, ಸಾಮಾಜಿಕ ಸೇವಾ ಕಾರ್ಯಕರ್ತ ಅಣ್ಣಾ ಹಜಾರೆ ಸೇರಿದಂತೆ ಇನ್ನಿತರ ಅಧಿಕಾರಿಗಳು ನಮ್ಮ ಬೆಂಬಲಕ್ಕೆ ನಿಂತಿದ್ದಾರೆ ಎಂದು ತಿಳಿಸಿದರು.  ಆಕಾಂಕ್ಷಿಗಳು www.prajaakeeya.org  ವೆಬ್‍ಸೈಟ್‍ಗೆ ತಮ್ಮ ದಾಖಲೆಗಳನ್ನು ಅಪ್‍ಲೋಡ್ ಮಾಡಬೇಕು ಎಂದು ತಿಳಿಸಿದರು. ಇದೇ ವೇಳೆ ಪತ್ನಿ ಪ್ರಿಯಾಂಕಾ ಸೇರಿದಂತೆ ಮತ್ತಿತರರು ಇದ್ದರು

Facebook Comments

Sri Raghav

Admin