ಗದುಗಿನ ತೋಂಟದಾರ್ಯ ಮಠದ ಶ್ರೀ ಡಾ.ಸಿದ್ದಲಿಂಗ ಸ್ವಾಮೀಜಿ ಲಿಂಗೈಕ್ಯ

Spread the love

Gadaga-Tontadarya-Siddaling

ಗದಗ,ಅ.20- ಶಿಕ್ಷಣ ,ಆರೋಗ್ಯ ಸೇರಿದಂತೆ ಕಳೆದ ಐದು ದಶಕಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ ತೋಂಟದಾರ್ಯ ಮಠದ ಶ್ರೀ ಡಾ.ಸಿದ್ದಲಿಂಗ ಸ್ವಾಮೀಜಿಯವರು(76) ಇಂದು ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದಾರೆ.  ಅನಾರೋಗ್ಯದ ಹಿನ್ನೆಲೆಯಲ್ಲಿ ಗದಗದಲ್ಲಿರುವ ಚಿರಾಯು ಆಸ್ಪತ್ರೆಗೆ ತೋಂಟದಾರ್ಯ ಶ್ರೀಗಳನ್ನು ದಾಖಲಿಸಲಾಗಿತ್ತು. ಇಂದು ತೀವ್ರ ಹೃದಯಾಘಾತದಿಂದ ಶ್ರೀಗಳು ಕೊನೆಯುಸಿರೆಳೆದರು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಶ್ರೀಗಳು ನಿಧನವಾಗಿರುವುದನ್ನು ಚಿರಾಯು ಆಸ್ಪತ್ರೆಯ ವೈದ್ಯರಾದ ಗುರುಪ್ರಸಾದ್ ಹಾಗೂ ಹನುಮಂತ ಮಾಳಿ ಖಚಿತಪಡಿಸಿದರು.

ಶ್ರೀಗಳು ಹಲವಾರು ದಶಕಗಳಿಂದ ಅನ್ನದಾಸೋಹ ನಡೆಸಿಕೊಂಡು ಬಡ ಮಕ್ಕಳ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಿದ್ದ ಶ್ರೀಗಳನ್ನು ಈ ಭಾಗದ ಭಕ್ತರು ದೈವಸ್ವರೂಪಿ ಎಂದೇ ನಂಬುತ್ತಿದ್ದರು.  ಎಲ್ಲರಿಗೂ ಶಿಕ್ಷಣ ನೀಡಬೇಕೆಂಬ ಸದುದ್ದೇಶದಿಂದ ಪೀಠಾಧಿಪತಿಗಳಾದ ನಂತರ ಗದಗ, ಹಾವೇರಿ ಸೇರಿದಂತೆ ಸುತ್ತಮುತ್ತಲ ಭಾಗಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದ್ದರು. ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಹಿಡಿದು, ಇಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಉನ್ನತ ಕೋರ್ಸ್‍ಗಳನ್ನು ಪ್ರಾರಂಭಿಸಿದವರು.  ಕಾಯಕ ಯೋಗಿ ಬಸವಣ್ಣನವರ ಅನುಯಾಯಿಯಾಗಿದ್ದ ಜಗದ್ಗುರು ಶ್ರೀ ತೋಂಟದಾರ್ಯ ಡಾ.ಸಿದ್ದಲಿಂಗ ಸ್ವಾಮೀಜಿ ಅವರು ಉತ್ತರ ಕರ್ನಾಟಕದ ಪ್ರಭಾವಿ ಮಠಾಧೀಶರಲ್ಲೊಬ್ಬರು. ಕಳೆದ ವರ್ಷ ಕರ್ನಾಟಕ ಸರ್ಕಾರ ವೀರಶೈವ ಲಿಂಗಾಯಿತ ಸಮುದಾಯವನ್ನು ವಿಭಜಿಸಿ ಪ್ರತ್ಯೇಕ ವೀರಶೈವ ಧರ್ಮ ಸ್ಥಾಪನೆ ಮಾಡಲು ಮುಂದಾದ ವೇಳೆ ಶ್ರೀಗಳು ಇದರ ಪರವಾಗಿ ಹೋರಾಟ ನಡೆಸಿದ್ದರು.

siddalinga-Swamiji-dead

ಲಿಂಗಾಯಿತರಿಗೆ ಪ್ರತ್ಯೇಕವಾದ ಧರ್ಮ ಅಗತ್ಯವಿದೆ. ಯಾರು ಒಪ್ಪುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ನಮಗೆ ಪ್ರತ್ಯೇಕ ಧರ್ಮದ ಅಗತ್ಯವಿದೆ. ಸರ್ಕಾರ ತೆಗೆದುಕೊಳ್ಳುವ ತೀರ್ಮಾನಕ್ಕೆ ನಮ್ಮ ಬೆಂಬಲವಿದೆ ಎಂದು ಶ್ರೀಗಳು ಹೇಳಿದ್ದರು. ಆದರೆ ಅವರ ಜೀವಿತಾವಧಿಯಲ್ಲಿ ಪ್ರತ್ಯೇಕ ಧರ್ಮದ ಕನಸು ನನಸಾಗಿ ಯೇ ಉಳಿದದ್ದು ದುರಂತ.  ಶ್ರೀಗಳು ಸಮಾಜದಲ್ಲಿದ್ದ ಜಾತೀಯತೆ, ಅಸಮಾನತೆ, ಅಸ್ಪೃಶ್ಯತೆ, ಮೇಲು-ಕೀಳು, ಮಹಿಳೆಯರು-ಪುರುಷರು ಎಂಬ ಬೇಧಭಾವಗಳ ವಿರುದ್ಧ ಹೋರಾಟ ನಡೆಸಿದ್ದರು. ಸಮಾಜದಲ್ಲಿ ಸಮಾನತೆ, ಭಾತೃತ್ವ, ಸಾಮಾಜಿಕ ನ್ಯಾಯಕ್ಕಾಗಿ ಶ್ರೀಗಳು ಯಾವಾಗಲು ಮುಂಚೂಣಿಯಲ್ಲಿರುತ್ತಿದ್ದರು.
ದಿವಂಗತ ಅಟಲ್ ಬಿಹಾರಿ ವಾಜಪೇಯವರು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ಕೋಮು ಸೌಹಾರ್ದ ಪ್ರಶಸ್ತಿ ಸೇರಿದಂತೆ ಪ್ರತಿಷ್ಠಿತ ಪ್ರಶಸ್ತಿಗಳು ಶ್ರೀಗಳಿಗೆ ಸಂದಿವೆ. ಇವರು ಪುಸ್ತಕಗಳ ಸ್ವಾಮೀಜಿ ಎಂದು ಸಹ ಗುರುತಿಸಿಕೊಳ್ಳುತ್ತಾರೆ.

ಸ್ವಾಮೀಜಿ ನೇತೃತ್ವದಲ್ಲಿ ಮಠದಲ್ಲಿ ಪ್ರತಿವಾರ ಆಯೋಜಿಸಲಾಗುತ್ತಿರುವ ಶಿವಾನುಭವ ಕಾರ್ಯಕ್ರಮ ಸಾಮಾಜಿಕ, ಆಧ್ಯಾತ್ಮಿಕ, ಧಾರ್ಮಿಕ, ಕೃಷಿ, ಗ್ರಾಮೀಣ, ಮಾನವಶಾಸ್ತ್ರದ ವಿಷಯಗಳ ಕುರಿತಾದ ಚರ್ಚೆಗಳಿಗೆ ಪ್ರಸಿದ್ಧವಾಗಿದೆ.  ಸ್ವಾಮೀಜಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ವಿದ್ವಾಂಸ ಎಂ. ಎಂ. ಕಲಬುರ್ಗಿ ಅವರ ವಿದ್ಯಾರ್ಥಿಯಾಗಿದ್ದರು. ಗುರು ಶಿಷ್ಯರಿಬ್ಬರು ಸಹ ವಿಜಯಪುರ ಜಿಲ್ಲೆಯ ಸಿಂಧಗಿ ಮೂಲದವರೆಂಬುದು ವಿಶೇಷ.

ಭಕ್ತರಿಗೆ ಆಘಾತ: ತಮ್ಮ ಸಾಮಾಜಿಕ ಕಳಕಳಿಯ ನೂರಾರು ಕಾರ್ಯಗಳ ಮೂಲಕ ಸ್ವಾಮೀಜಿ ಅವರು ಜನಾನುರಾಗಿಯಾಗಿದ್ದ ಶ್ರೀಗಳ ಹಠಾತ್ ನಿಧನದಿಂದ ಮಠದಲ್ಲಿ ನೀರವ ಮೌನ ಆವರಿಸಿದೆ. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಭಕ್ತರು ಮಠದ ಆವರಣದತ್ತ ಧಾವಿಸಿ ಕಂಬನಿ ಮಿಡಿದರು.

ಗಣ್ಯರ ಸಂತಾಪ: ಶ್ರೀಗಳ ನಿಧನಕ್ಕೆ ರಾಜ್ಯಪಾಲ ವಿ.ಆರ್.ವಾಲ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ, ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಸೇರಿದಂತೆ ಸಚಿವರು, ಶಾಸಕರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಕಂಬನಿ ಮಿಡಿದಿದ್ದಾರೆ.  ಶ್ರೀಗಳ ಅಂತ್ಯ ಸಂಸ್ಕಾರವು ನಾಳೆ ಸರ್ಕಾರಿ ಗೌರವಾದರಗಳೊಂದಿಗೆ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.

Sri Raghav

Admin