ಅದಾನಿ ಹಗರಣದ ತನಿಖೆಗೆ ಒತ್ತಾಯಿಸಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ

Social Share

ನವದೆಹಲಿ,ಫೆ.6- ಅದಾನಿ ಸಮೂಹ ಸಂಸ್ಥೆಯ ಹೂಡಿಕೆ ಮತ್ತು ಸಾಲ ಹಗರಣವನ್ನು ಜಂಟಿ ಸದನ ಸಮಿತಿಯ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷಗಳು ಇಂದು ಸಂಸತ್ ಒಳಗೆ ಮತ್ತು ಹೊರಗೆ ಪ್ರತಿಭಟನೆ ನಡೆಸಿವೆ. ಇದೇ ವೇಳೆ ದೇಶಾದ್ಯಂತ ಕಾಂಗ್ರೆಸ್ ಎಸ್‍ಬಿಐ ಬ್ಯಾಂಕ್‍ಗಳು ಹಾಗೂ ಎಲ್‍ಐಸಿ ಶಾಖೆಗಳ ಮುಂದೆ ಪ್ರತಿಭಟನೆ ನಡೆಸಿದೆ.

ಸಂಸತ್‍ನಲ್ಲಿ ಪ್ರತಿಪಕ್ಷಗಳಾಗಿರುವ 16 ಪಕ್ಷಗಳನ್ನೊಳಗೊಂಡ ಸಮನ್ವಯ ಸಮಿತಿ ಇಂದು ಬೆಳಗ್ಗೆ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಸಭೆ ನಡೆಸಿವೆ. ಡಿಎಂಕೆ, ಎನ್‍ಸಿಪಿ, ಬಿಆರ್‍ಎಸ್, ಸಮಾಜವಾದಿ ಪಕ್ಷ, ಜೆಡಿಯು, ಸಿಪಿಐ, ಜೆಎಂಎಂ, ಆರ್‍ಎಲ್‍ಡಿ, ಆರ್‍ಎಸ್‍ಪಿ, ಎಎಪಿ, ಐಯುಎಂಎಲ್, ಆರ್‍ಜೆಡಿ, ಮತ್ತು ಶಿವಸೇನೆಯ ಬಾಳಾಠಾಕ್ರೆ ಬಣದ ಸಂಸದರು ಸಭೆಯಲ್ಲಿ ಭಾಗವಹಿಸಿದ್ದರು. ತೃಣಮೂಲ ಕಾಂಗ್ರೆಸ್ ಸಭೆಯಿಂದ ದೂರ ಉಳಿದಿತ್ತು.

ನಂತರ ಸಂಸತ್ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ ಪ್ರತಿಪಕ್ಷದ ಸಂಸದರು, ಅದಾನಿ ಗುಂಪಿನ ಹಗರಣವನ್ನು ಜಂಟಿ ಸದನ ಸಮಿತಿಯ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದ್ದಾರೆ.

ಬಿಜೆಪಿಗರಿಗೆ ಶಶಿ ತರೂರು ತಿರುಗೇಟು

ಅದಾನಿ ಗುಂಪಿನ ಹಗರಣವನ್ನು ಜಂಟಿ ಸದನ ಸಮಿತಿ ಅಥವಾ ಸುಪ್ರೀಂಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ನಡೆಸಬೇಕು ಎಂದು ಘೋಷಣೆ ಕೂಗಿದ್ದು, ಬ್ಯಾನರ್ ಪ್ರದರ್ಶನ ಮಾಡಿದ್ದಾರೆ. ಕೇಂದ್ರ ಸರ್ಕಾರಿ ಸ್ವಾಮ್ಯದ ವಿಮಾ ಕಂಪೆನಿ ಎಲ್‍ಐಸಿ ಅದಾನಿ ಕಂಪೆನಿಗಳ ಷೇರುಗಳ ಮೇಲೆ 29 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಸಾರ್ವಜನಿಕ ಹಣಕಾಸು ಬ್ಯಾಂಕ್ ಆಗಿರುವ ಎಸ್‍ಬಿಐನಿಂದ ಅದಾನಿ ವ್ಯವಹಾರಗಳಿಗೆ 27 ಸಾವಿರ ಕೋಟಿ ರೂಪಾಯಿ ಸಾಲ ನೀಡಿದೆ.

ಅನುಚಿತ ಮಾರ್ಗದಲ್ಲಿ ಅದಾನಿ ಸಮೂಹ ವಹಿವಾಟು ನಡೆಸುತ್ತಿದೆ ಎಂದು ಅಮೆರಿಕಾ ಮೂಲದ ಸಂಶೋಧನಾ ಸಂಸ್ಥೆ ಹಿಡನ್ ಬರ್ಗ್ ವರದಿ ಮಾಡಿದ ಬಳಿಕ ಅದಾನಿ ಕಂಪೆನಿಯ ಷೇರು ಮೌಲ್ಯ ಕುಸಿಯಲಾರಂಭಿಸಿದೆ. ಇದರಿಂದ ಸರ್ಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆಗಳಿಗೆ ಸುಮಾರು ಒಂದು ಬಿಲಿಯನ್ ಡಾಲರ್ ನಷ್ಟವಾಗಿದೆ ಎಂಬ ಅಂದಾಜುಗಳಿವೆ.

ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗಾದ ನಷ್ಟದ ಕುರಿತು ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡಬೇಕು. ಹಗರಣವನ್ನು ಜಂಟಿ ಸದನ ಸಮಿತಿ ಅಥವಾ ಸುಪ್ರೀಂಕೋರ್ಟ್‍ನ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಪ್ರತಿಪಕ್ಷಗಳು ಕಳೆದ ವಾರ ನಡೆದ ಎರಡು ದಿನಗಳ ಸಂಸತ್ ಕಲಾಪದಲ್ಲಿ ಪಟ್ಟು ಹಿಡಿದಿದ್ದವು. ಆದರೆ ಸರ್ಕಾರ ಚರ್ಚೆಗೂ ಅವಕಾಶ ನೀಡಿಲ್ಲ, ತನಿಖೆಗೂ ಸಮ್ಮತಿಸಿಲ್ಲ. ಹೀಗಾಗಿ ಗುರುವಾರ ಮತ್ತು ಶುಕ್ರವಾರದ ಸಂಸತ್ ಕಲಾಪ ಅಸ್ತವ್ಯಸ್ಥವಾಗಿತ್ತು.

ಕೋಹ್ಲಿ ಕುರಿತು ಭವಿಷ್ಯ ನುಡಿದ ಪಾಕ್ ಮಾಜಿ ನಾಯಕ ಸಲ್ಮಾನ್ ಭಟ್

ಬಜೆಟ್ ಅಧಿವೇಶನದ ಎರಡನೇ ವಾರದ ಕಲಾಪ ಇಂದು ಮರು ಆರಂಭಗೊಂಡಿದ್ದು, ಪ್ರತಿಪಕ್ಷಗಳು ಚರ್ಚೆಗೆ ಪಟ್ಟು ಹಿಡಿದಿವೆ. ಈ ನಡುವೆ ಹಗರಣವನ್ನು ಸಾರ್ವಜನಿಕರ ನಡುವೆ ತೆಗೆದುಕೊಂಡು ಹೋಗಲು ಪ್ರತಿಪಕ್ಷಗಳು ನಿರ್ಧರಿಸಿವೆ. ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿವೆ.

ಮುಂದುವರೆದು ದೇಶದ ಎಲ್ಲೆಡೆ ಎಸ್‍ಬಿಐ ಮತ್ತು ಎಲ್‍ಐಸಿ ಶಾಖೆಗಳ ಮುಂದೆಯೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Adani row, Congress, countrywide, protest,

Articles You Might Like

Share This Article