ಮಂಗಳೂರು, ಆ.4- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಸರಣಿ ಕೊಲೆಗಳು ನಡೆದ ಹಿನ್ನೆಲೆಯಲ್ಲಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ಕುಮಾರ್ ಅವರು ಇಂದು ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು.
ಉದ್ವಿಗ್ನ ಸ್ಥಿತಿಯಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆ ಸಹಜ ಸ್ಥಿತಿಗೆ ಮರಳುತ್ತಿದ್ದು, ಪರಿಸ್ಥಿತಿ ಅವಲೋಕಿ ಸಲು ಇಂದು ಎಡಿಜಿಪಿ ಅವರು ಸಭೆ ನಡೆಸಿದರು. ಇತ್ತೀಚೆಗೆ ನಡೆದ ಘಟನೆಗಳ ಬಗ್ಗೆ ಅವಲೋಕನ ಮಾಡಲಾಯಿತು. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿರುವುದರಿಂದ ಮುಂದೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸ ಲಾಯಿತು.
ಸಭೆಗೂ ಮುನ್ನ ಅಲೋಕ್ಕುಮಾರ್ ಅವರು ಸೂರತ್ಕಲ್ ಮತ್ತು ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಹಾಗೂ ಅಲ್ಲಿನ ಪೊಲೀಸರೊಂದಿಗೆ ಸಂವಹನ ನಡೆಸಿದರು.
ಸಭೆಯಲ್ಲಿ ಮಂಗಳೂರು ಪೊಲೀಸ್ ಆಯುಕ್ತರಾದ ಶಶಿಕುಮಾರ್, ಪಶ್ಚಿಮ ವಲಯ ಐಜಿಪಿ ದೇವ ಜ್ಯೋತಿರೇ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಡಿಸಿಪಿ ಅಂಶುಕುಮಾರ್, ಉಡುಪಿ ಜಿಲ್ಲಾ ಎಸ್ಪಿ ವಿಷ್ಣುವರ್ಧನ್ ಮತ್ತು ಮಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳ ಇನ್ಸ್ಪೆಕ್ಟರ್ಗಳು ಪಾಲ್ಗೊಂಡಿದ್ದರು.