ಶಿವಮೊಗ್ಗ, ಆ.16- ಯುವಕನಿಗೆ ಚಾಕು ಇರಿತ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ಭಾಗಿಯಾಗಿದ್ದು, ಈ ಪೈಕಿ ಮೂವರನ್ನು ಬಂಧಿಸಲಾಗಿದೆ. ಮತ್ತೊಬ್ಬನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ರಾಜ್ಯದ ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನ್ ನಿರ್ದೇಶಕರಾದ ಅಲೋಕ್ ಕುಮಾರ್ ತಿಳಿಸಿದರು.
ಜಿಲ್ಲೆಯಲ್ಲಿ ನಡೆದ ಘಟನೆ ಸಂಬಂಧ ರಾತ್ರಿಯೇ ಅಲೋಕ್ ಕುಮಾರ್ ಅವರು ಸ್ಥಳಕ್ಕೆ ಆಗಮಿಸಿದ್ದಾರೆ. ಇಂದು ಬೆಳಗ್ಗೆ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರ ಸಾವರ್ಕರ್ ಅವರ ಬ್ಯಾನರ್ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿರುವುದು ವಿಷಾದಕರ. ನಡೆದು ಹೋಗುತ್ತಿದ್ದ ಯುವಕನಿಗೆ ಚಾಕು ಇರಿದಿರುವುದು ದುರಾದೃಷ್ಟಕರ. ಯಾರೇ ಆಗಲಿ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದರು.
ಆರೋಪಿಗಳ ಹಿನ್ನೆಲೆ, ಅವರುಗಳು ಯಾವ ಸಂಘಟನೆಗೆ ಸೇರಿದ್ದಾರೆ ಎಂಬುದರ ಬಗ್ಗೆ ತನಿಖೆ ನಂತರ ಗೊತ್ತಾಗಲಿದೆ. ಇವರುಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜೊತೆಗೆ ಅವರುಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ವಿಚಾರವಾಗಿ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಆಗಾಗ ನಡೆಯುತ್ತಿವೆ. ನಗರದಾದ್ಯಂತ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಭದ್ರತೆಗಾಗಿ ಸ್ಥಳೀಯ ಪೊಲೀಸರ ಜೊತೆಗೆ 15 ಕೆಎಸ್‍ಆರ್‍ಪಿ ಹಾಗೂ ಡಿಎಆರ್ ತುಕಡಿಗಳನ್ನು ಕರೆಸಿಕೊಳ್ಳಲಾಗಿದೆ. ಇನ್ನೂ ಆರು ಪ್ಲಟೂನ್ ಕೆಎಸ್‍ಆರ್‍ಪಿ ಬರಲಿದೆ. ಸಿಐಡಿ ಘಟಕ ಹಾಗೂ ಬೇರೆ ಜಿಲ್ಲೆಗಳಿಂದ ಬಂದೋಬಸ್ತ್‍ಗಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಕರೆಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.