ನವದೆಹಲಿ,ಜು.12- ಬೆಂಗಳೂರು ನಗರ ಜಿಲ್ಲಾಧಿಕಾರಿ ಜಾಮೀನು ಅರ್ಜಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರು, ಕರ್ನಾಟಕದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಎಡಿಜಿಪಿ ವಿರುದ್ಧ ನಡೆಸುತ್ತಿರುವ ವಿಚಾರಣೆಯನ್ನು 3 ದಿನಗಳ ಕಾಲ ಮುಂದೂಡುವಂತೆ ಸುಪ್ರೀಂಕೋರ್ಟ್ ರಾಜ್ಯ ಹೈಕೋರ್ಟ್‍ಗೆ ಸೂಚನೆ ನೀಡಿದೆ.
ಎಸಿಬಿಯ ಎಡಿಜಿಪಿ ಸೀಮಂತ್‍ಕುಮಾರ್ ಸಿಂಗ್ ವಿರುದ್ಧ ಕರ್ನಾಟಕ ಹೈಕೋರ್ಟ್‍ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಎಚ್.ಪಿ.ಸಂದೇಶ ಅವರು ವ್ಯಕ್ತಪಡಿಸಿದ್ದ ಮೌಖಿಕ ಅಭಿಪ್ರಾಯಗಳು ಹಾಗೂ ಲಿಖಿತ ಆದೇಶಗಳ ಕುರಿತು ಸುಪ್ರಿಂಕೋರ್ಟ್‍ನಲ್ಲಿ ಪ್ರಶ್ನಿಸಲಾಗಿತ್ತು. ನಿನ್ನೆ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಪೀಠ ಇಂದಿನ ಮುಂದುವರೆದ ವಿಚಾರಣೆಯಲ್ಲಿ ಹೈಕೋರ್ಟ್‍ಗೆ ಮನವಿ ರೂಪದ ಸೂಚನೆ ನೀಡಿದೆ.
ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣರೆಡ್ಡಿ, ನ್ಯಾಯಾೀಧಿಶರಾದ ಕೃಷ್ಣ ಮುರಾರಿ ಹಾಗೂ ಹಿಮಾ ಕೊಹ್ಲಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಮೂರು ದಿನ ವಿಚಾರಣೆಯನ್ನು ಮುಂದೂಡಬೇಕೆಂದು ಹೈಕೋರ್ಟ್ ನ್ಯಾಯಮೂರ್ತಿಗೆ ಮನವಿ ಮಾಡಿಕೊಂಡಿದೆ.
ನಾವು ಅರ್ಜಿ ವಿಚಾರಣೆಯನ್ನು ಮೂರು ದಿನ ಮುಂದೂಡುವಂತೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಮನವಿ ಮಾಡುತ್ತೇವೆ. ಮುಂದಿನ ಅರ್ಜಿ ವಿಚಾರಣೆಯನ್ನು ಶುಕ್ರವಾರದ ಕಾರ್ಯಕಲಾಪಗಳ ಪಟ್ಟಿಯಲ್ಲಿ ಸೇರಿಸಿ ವಿಚಾರಣೆ ನಡೆಸುತ್ತೇವೆ ಎಂದು ಆದೇಶ ನೀಡಿತು. ಹೀಗಾಗಿ ಹೈಕೋರ್ಟ್‍ನಲ್ಲಿ ನಾಳೆ ನಡೆಯಬೇಕಿದ್ದ ವಿಚಾರಣೆ ತಾತ್ಕಲಿಕವಾಗಿ ಮುಂದೂಡಿಕೆಯಾಗಿದೆ.
ಜು.11ರಂದು ಹೈಕೋರ್ಟ್ ನೀಡಿರುವ ಆದೇಶವನ್ನು ಪರಿಶೀಲಿಸಲು ಕಾಲಾವಧಿ ಬೇಕು. ಹೀಗಾಗಿ ಇನ್ನು ಮೂರು ದಿನಗಳ ಕಾಲ ಪ್ರಕರಣದ ವಿಚಾರಣೆಗೆ ತಡೆ ನೀಡುವಂತೆ ಎಡಿಜಿಪಿ ಪರ ವಕೀಲರು ಮಾಡಿದ್ದರು. ರಾಜ್ಯ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಅವರು, ಇದರಲ್ಲಿ ಕೆಲವು ಗಂಭೀರ ಆರೋಪಗಳಿವೆ. ತನಿಖಾ ಸಂಸ್ಥೆಯ ಮುಖ್ಯಸ್ಥರ ವಿರುದ್ಧವೇ ಹೈಕೋರ್ಟ್‍ನ ಗೌರವಾನ್ವಿತ ನ್ಯಾಯಮೂರ್ತಿಗಳು ಮೌಖಿಕ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದಾರೆ.
ತಮ್ಮನೇ ವರ್ಗಾವಣೆ ಮಾಡುವ ಬೆದರಿಕೆವೊಡ್ಡಿದ್ದಾರೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಇದು ಗಂಭೀರ ಸ್ವರೂಪದ ಪ್ರಕರಣವಾಗಿರುವುದರಿಂದ ಕೂಲಂಕುಷ ಅಧ್ಯಯನ ನಡೆಸಲು ಮೂರು ದಿನ ಅರ್ಜಿ ವಿಚಾರಣೆಯನ್ನು ಮುಂದೂಡಬೇಕೆಂದು ಮನವಿ ಮಾಡಿದರು.
ಇದಕ್ಕೆ ದನಿಗೂಡಿಸಿದ ಅರ್ಜಿದಾರಪರ ವಕೀಲ ಹಾರ್ನಹಳ್ಳಿ ಅಶೋಕ್ ಅವರು, ಹೈಕೋರ್ಟ್ ನ್ಯಾಯಮೂರ್ತಿಗಳ ಗಂಭೀರ ಅಭಿಪ್ರಾಯಗಳ ಕುರಿತು ಎಸ್‍ಎಲ್‍ಪಿಯನ್ನು ಸಲ್ಲಿಸಲಾಗಿದೆ. ಹೀಗಾಗಿ ನ್ಯಾಯಮೂರ್ತಿಗಳು ಶುಕ್ರವಾರ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುವಂತೆ ತ್ರಿಸದಸ್ಯ ಪೀಠಕ್ಕೆ ಕೋರಿದರು. ಅಂತಿಮವಾಗಿ ನ್ಯಾಯಾಲಯವು ಮೂರು ದಿನ ಅರ್ಜಿ ವಿಚಾರಣೆ ಮುಂದೂಡುವಂತೆ ಹೈಕೋರ್ಟ್ ನ್ಯಾಯಾೀಧಿಶರಿಗೆ ನಿರ್ದೇಶನ ನೀಡಿದರು.
#ಏನಿದು ಪ್ರಕರಣ:
ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಅವರ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿಯ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ಸಂದೇಶ್ ಅವರು, ಎಸಿಬಿಯ ಎಡಿಜಿಪಿ ಸೀಮಂತ್‍ಕುಮಾರ್ ಸಿಂಗ್ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು.
ಎಸಿಬಿ ತನಿಖಾ ಸಂಸ್ಥೆ ಇರುವುದೇ ಭ್ರಷ್ಟರನ್ನು ರಕ್ಷಿಸಲು ನೀವು. ದೊಡ್ಡ ದೊಡ್ಡ ತಿಮಿಲಿಂಗಗಳನ್ನು ಬಿಟ್ಟು ಸಣ್ಣವರ ಮೇಲೆ ಕ್ರಮ ಕೈಗೊಳ್ಳುತ್ತೀರಿ. ಇಲ್ಲಿ ಕೆಲಸ ಮಾಡುತ್ತಿರುವವರೇ ಮಹಾಭ್ರಷ್ಟರು ಎಂದು ಟೀಕಾ ಪ್ರಹಾರ ನಡೆಸಿದ್ದರು.
ಎಸಿಬಿಯ ಮುಖ್ಯಸ್ಥರು ನನನ್ನು ವರ್ಗಾವಣೆ ಮಾಡಿಸುವುದಾಗಿ ನ್ಯಾಯಾೀಶರೊಬ್ಬರ ಮೂಲಕ ಎಚ್ಚರಿಕೆ ನೀಡಿದ್ದಾರೆ.
ನಾನು ಇದಕ್ಕೆಲ್ಲ ಹೆದರುವುದಿಲ್ಲ. ನ್ಯಾಯೀಧಿಶನಾಗಿ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವುದು ನನ್ನಮೂಲ ಉದ್ದೇಶ. ವರ್ಗಾವಣೆಯಾದರೂ ತಲೆಕೆಡಿಸಿಕೊಳ್ಳುವುದಿಲ್ಲ. ನ್ಯಾಯಾೀಧಿಶನಾಗಿ ಆಯ್ಕೆಯಾಗಿ ಬಂದ ಮೇಲೆ ಒಂದೇ ಒಂದು ರೂಪಾಯಿ ಮಾಡಿಕೊಂಡಿಲ್ಲ. ಹಳ್ಳಿಗೆ ಹೋಗಿ ನಾನು ಕೃಷಿ ಮಾಡಿಕೊಂಡಿರುತ್ತೇನೆ ಎಂದು ಭಾವನಾತ್ಮಕವಾಗಿ ಹೇಳಿದ್ದರು.
ದಯವಿಟ್ಟು ರಾಜ್ಯ ಸರ್ಕಾರ ಭ್ರಷ್ಟಾಚಾರವನ್ನು ನಿಯಂತ್ರಿಸುವ ತನಿಖಾ ಸಂಸ್ಥೆಗೆ ಕಳಂಕಿತರನ್ನು ನೇಮಿಸಬಾರದು. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? ಎಂಬಂತೆ ಎಸಿಬಿಯವರು ವರ್ತಿಸುತ್ತಿದ್ದಾರೆ. ಕ್ಯಾನ್ಸರ್‍ನಂತೆ ಹಬ್ಬಿರುವ ಈ ಭ್ರಷ್ಟಾಚಾರವನ್ನು ನಿಯಂತ್ರಿಸಬೇಕಾದರೆ ಕೆಲವು ಸಂದರ್ಭದಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಸಮಾಧಾನ ಹೊರಹಾಕಿದ್ದರು.