ಕರ್ನಾಟಕ ನೋಂದಣಿಯಿರುವ ಕಾರಿನಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 10 ಕೋಟಿ ರೂ.ವಶ..!

10-Crors-Sezed-In-Hyderbad

ಹೈದರಾಬಾದ್, ಅ.20- ಕರ್ನಾಟಕ ರಾಜ್ಯದ ನೋಂದಣಿಯ ಕಾರಿನಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 10 ಕೋಟಿ ರೂ. ಹಣವನ್ನು ಹೈದರಾಬಾದ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ತೆಲಂಗಾಣ ರಾಜ್ಯದ ಆದಿಲಾಬಾದ್ ಜಿಲ್ಲೆಯ ಪಿಪ್ಪರವಾಡಾ ಟೋಲ್ ಪ್ಲಾಜಾದಲ್ಲಿ ಪೊಲೀಸರು ವಾಹನ ಸಮೇತ ಹಣವನ್ನು ವಶಕ್ಕೆ ಪಡೆದಿದ್ದಾರೆ.

ಈ ಹಣವನ್ನು ಡಿಸೆಂಬರ್‍ನಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಮತದಾರರಿಗೆ ಹಂಚಲು ತೆಗೆದುಕೊಂಡು ಹೋಗಲಾಗುತ್ತಿತ್ತು ಎಂಬ ಶಂಕೆಗಳು ವ್ಯಕ್ತವಾಗಿವೆ.  ಪೂರ್ಣ 10 ಕೋಟಿಯೂ 500 ರೂ. ಮುಖಬೆಲೆಯ ನೋಟುಗಳಲ್ಲಿದೆ. ಕರ್ನಾಟಕ ನೋಂದಣಿಯುಳ್ಳ ಕಾರು ಮಹಾರಾಷ್ಟ್ರದ ನಾಗಪುರದಿಂದ ಹೈದರಾಬಾದ್ ನತ್ತ ತೆರಳುತ್ತಿತ್ತು. ಪಿಪ್ಪರವಾಡ ಟೋಲ್ ಪ್ಲಾಜಾದಲ್ಲಿ ಪೊಲೀಸರು ಕಾರು ಮತ್ತು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ಘೋಷಣೆ ಆಗುತ್ತಿದ್ದಂತೆ ರಾಜಕೀಯ ಮುಖಂಡರು ಮತದಾರರಿಗೆ ಹಣ ಹಂಚಲು ಪ್ರಯತ್ನಿಸುತ್ತಿದ್ದಾರೆ.

ಗಡಿಭಾಗಗಳಲ್ಲಿ ಹದ್ದಿನ ಕಾವಲು ಹಾಕಿರುವ ತೆಲಂಗಾಣ ಪೊಲೀಸರು ದಾಖಲೆ ಇಲ್ಲದ ಹಣವನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಕಾರಿನಲ್ಲಿ ಹಣ ಸಾಗಿಸುತ್ತಿದ್ದವರು ಕೋಡ್ ವರ್ಡ್ ಬಳಕೆ ಮಾಡುತ್ತಿದ್ದು ತಿಳಿದು ಬಂದಿದೆ. ಹಣ ಯಾರಿಗೆ ಸೇರಿದ್ದು ಎನ್ನುವುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದೇವೆ ಎಂದು ಆದಿಲಾಬಾದ್ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣು ತಿಳಿಸಿದ್ದಾರೆ.

Sri Raghav

Admin