ಬೆಂಗಳೂರು,ಸೆ.19-ರಾಜ್ಯದ 30 ಹೊಸ ತಾಲ್ಲೂಕುಗಳಲ್ಲಿ ತಾಲ್ಲೂಕು ಆಡಳಿತ ಸೌಧ ನಿರ್ಮಾಣ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಗಿದೆ. ಅಗತ್ಯವಿರುವ ಕಡೆ ಆದ್ಯತೆ ಮೇರೆಗೆ ನಿರ್ಮಾಣ ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ವಿಧಾನಸಭೆಯಲ್ಲಿಂದು ತಿಳಿಸಿದರು.
ಶಾಸಕ ನಾಗನಗೌಡ ಕಂದಕೂರು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಒಟ್ಟು 239 ತಾಲ್ಲೂಕುಗಳಿವೆ. ಇವುಗಳಲ್ಲಿ 30 ತಾಲ್ಲೂಕುಗಳಲ್ಲಿ ಮುಖ್ಯಮಂತ್ರಿ ಜೊತೆ ಚರ್ಚಿಸಲಾಗಿದೆ. ಅವರು ಒಪ್ಪಿಗೆ ಸೂಚಿಸಿದ ಮೇಲೆ ಎಲ್ಲೆಲ್ಲಿ ಅಗತ್ಯವಿದೆಯೋ ಅಂತಹ ಕಡೆ ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದರು.
ಈ ಹಿಂದೆ 172 ತಾಲ್ಲೂಕುಗಳಿದ್ದವು. ನಂತರ 50, ಬಳಿಕ 12 ಸೇರಿದಂತೆ ಒಟ್ಟು ಪ್ರಸ್ತುತ 230 ತಾಲ್ಲೂಕುಗಳಿವೆ. ರಾಜ್ಯದಲ್ಲಿ ಎರಡು ವರ್ಷ ಕೋವಿಡ್ ಕಾರಣ ಆರ್ಥಿಕ ಚಟುವಟಿಕೆಗಳು ಕುಸಿದುಬಿದ್ದಿವೆ. ಹೀಗಾಗಿ ಹೊಸ ಯೋಜನೆಗಳಿಗೆ ಆರ್ಥಿಕ ಇಲಾಖೆ ನಿರ್ಬಂಧ ಹಾಕಿದೆ. ಆದರೂ ಹಿಂದುಳಿದ ತಾಲ್ಲೂಕುಗಳಲ್ಲಿ ತಾಲ್ಲೂಕು ಆಡಳಿತ ಸೌಧ ಅಗತ್ಯವಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಇದನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಬಹುದು ಎಂದರು.
ಇದನ್ನೂ ಓದಿ : ಆಟೋ ಚಾಲಕನಿಗೆ ಹೊಡೀತು 25 ಕೋಟಿ ರೂ. ಬಂಪರ್ ಲಾಟರಿ..!
ಒಂದು ವೇಳೆ ಯಾವುದಾದರೂ ತಾಲ್ಲೂಕುಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಿದ್ದರೆ ಅಂತಹ ಕಡೆ ಲೋಕೋಪಯೋಗಿ, ತೋಟಗಾರಿಕೆ ಸೇರಿದಂತೆ ಯಾವುದೇ ಇಲಾಖೆಯ ಕಟ್ಟಡಗಳಿದ್ದರೆ ಅದನ್ನು ಬಳಸಿಕೊಳ್ಳಲು ಸೂಚಿಸಲಾಗಿದೆ ಎಂದರು.
ದಾವಣೆಗೆರೆ ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡ ತೆಗೆದುಕೊಂಡು ಕಾರ್ಯ ನಿರ್ವಹಿಸುತ್ತಿದ್ದೇವೆ. ಇದೇ ರೀತಿ ಎಲ್ಲೆಲ್ಲಿ ಇಂತಹ ತೊಂದರೆ ಇದೆಯೋ ಅಂತಹ ಕಡೆ ಬಳಸಿಕೊಳ್ಳಬಹುದು ಎಂದು ಸಲಹೆ ಮಾಡಿದರು.
ಗುರುಮಿಟ್ಕಕಲ್ ವಿಧಾನಸಬಾ ಕ್ಷೇತ್ರಕ್ಕೆ ಆಡಳಿತಾತ್ಮಕ ವೆಚ್ಚ ಭರಿಸಲು ಕಂದಾಯ ಇಲಾಖೆಯಿಂದ 41.50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಈ ರೀತಿ ಹಿಂದುಳಿದ ತಾಲ್ಲೂಕುಗಳನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸುವ ಉದ್ದೇಶ ನಮ್ಮದಾಗಿದೆ ಎಂದು ಹೇಳಿದರು.