ತಿರುವನಂತಪುರಂ, ಜು.22- ಕೇರಳದ ವಯನಾಡ್ ಜಿಲ್ಲೆಯ ಮನಂತವಾಡಿಯಲ್ಲಿನ ಎರಡು ಹಂದಿ ಫಾರಂಗಳಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದ್ದು, ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.
ಫಾರ್ಮ್ ಒಂದರಲ್ಲಿ ಹಂದಿಗಳು ಸಾಮೂಹಿಕವಾಗಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಭೋಪಾಲ್‍ನಲ್ಲಿರುವ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್‍ನ ಪರೀಕ್ಷೆಯಲ್ಲಿ ಎರಡು ಫಾರ್ಮ್‍ಗಳಲ್ಲಿ ಸೋಂಕು ಪತ್ತೆಯಾಗಿದೆ ಎಂದು ಪಶುಸಂಗೋಪನಾ ಇಲಾಖೆ ಅಕಾರಿ ತಿಳಿಸಿದ್ದಾರೆ.
ಅಪಾಯಕಾರಿ ಹಂದಿ ಜ್ವರ ಪತ್ತೆಯಾದ ಹಿನ್ನೆಲೆಯಲ್ಲಿ ಫಾರ್ಮ್‍ನಲ್ಲಿದ್ದ 300 ಹಂದಿಗಳನ್ನು ಕೊಲ್ಲಲು ಆದೇಶಿಸಲಾಗಿದೆ. ರೋಗ ಹರಡದಂತೆ ಪ್ರಾಥಮಿಕ ಹಂತದಲ್ಲೇ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
ಬಿಹಾರ ಹಾಗೂ ಈಶಾನ್ಯ ಭಾಗದ ಕೆಲ ರಾಜ್ಯಗಳಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದ ಬೆನ್ನಲ್ಲೆ ಕೇರಳ ಸರ್ಕಾ ಈ ತಿಂಗಳ ಆರಂಭದಲ್ಲಿ ಜೈವಿಕ ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸಿತ್ತು. ಆಫ್ರಿಕನ್ ಹಂದಿ ಜ್ವರವು ದೇಶೀಯ ಹಂದಿಗಳ ಮೇಲೆ ಪರಿಣಾಮ ಬೀರುವ ಸಾಂಕ್ರಾಮಿಕ ಮತ್ತು ಮಾರಣಾಂತಿಕ ರೋಗವಾಗಿದೆ.