ಸಲಿಂಗಕಾಮ ಸಕ್ರಮದ ವಿರುದ್ಧ ಪ್ರತಿಭಟನೆಗೆ ಸಜ್ಜಾದ ಮುಸ್ಲಿಂ ಧರ್ಮಗುರುಗಳು

Samae-Sex

ನವದೆಹಲಿ, ಸೆ.7- ಸಲಿಂಗಕಾಮ ವನ್ನು ಸಕ್ರಮಗೊಳಿಸಿ. ಅದು ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆ ಸಂಭ್ರಮಾಚರಣೆ ನಡೆಯುತ್ತಿರುವ ನಡುವೆಯೇ, ಮುಸ್ಲಿಂ ಧರ್ಮಗುರುಗಳು ಇದರ ವಿರುದ್ಧ ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಸಲಿಂಗಕಾಮವು ಧರ್ಮ, ಪ್ರಕೃತಿ ಮತ್ತು ಮಾನವತೆಗೆ ವಿರುದ್ಧವಾದುದು ಎಂದು ಬಣ್ಣಿಸಿರುವ ಮುಸ್ಲಿಂ ಸಮುದಾಯದ ವಿವಿಧ ಪಂಥಗಳ ಧಾರ್ಮಿಕ ಮುಖಂಡರು ರಾಷ್ಟ್ರ ಮಟ್ಟದಲ್ಲಿ ಕಾನೂನು ಮತ್ತು ಪ್ರತಿಭಟನಾ ಹೋರಾಟಕ್ಕೆ ಮುಂದಾಗಿದ್ದಾರೆ.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಇಎಂಪಿಎಲ್‍ಬಿ) ಈ ಬಗ್ಗೆ ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲು ಸನ್ನದ್ಧವಾಗಿದೆ. ಈ ತೀರ್ಪು ಲೈಂಗಿಕ ಅಪರಾಧಗಳು ಮತ್ತು ಲೈಂಗಿಕ ರೋಗಗಳ ಹೆಚ್ಚಳಕ್ಕೆ ಕಾರಣವಾಗಲಿದೆ. ಸಲಿಂಗಕಾಮ ಅಪರಾಧ ಎಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಈಗ ಅದನ್ನು ಕಾನೂನು ಬದ್ಧಗೊಳಿಸಿರುವುದು ಸರಿಯಲ್ಲ. ಸರ್ವೋನ್ನತ ನ್ಯಾಯಾಲಯವು ತನ್ನ ಹಿಂದಿನ ತೀರ್ಪಿಗೆ ಬದ್ಧವಾಗಿರಬೇಕಿತ್ತು ಎಂದು ಜಮಾಅತ್ ಉಲೆಮಾ ಹಿಂದ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಮಹಮ್ಮದ್ ಮದನಿ ಹೇಳಿದ್ದಾರೆ. ದೆಹಲಿ ಹೈಕೋರ್ಟ್ ಸಲಿಂಗಕಾಮ ಅಪರಾಧವಲ್ಲ ಎಂದು ನೀಡಿದ್ದ ತೀರ್ಪನ್ನು 2013ರಲ್ಲಿ ವಜಾಗೊಳಿಸಿದ್ದ ಸುಪ್ರೀಂಕೋರ್ಟ್ ಸಲಿಂಗಕಾಮ ಅಪರಾಧ. ಅಸ್ವಾಭಾವಿಕ ಲೈಂಗಿಕ ಸಂಬಂಧವನ್ನು ಒಪ್ಪಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದ್ದನ್ನು ಅವರು ಉಲ್ಲೇಖಿಸಿದ್ದಾರೆ.

ಸಲಿಂಗಕಾಮ ಪ್ರಕೃತಿ ನಿಯಮಕ್ಕೆ ವಿರುದ್ಧ. ಇದು ನೈತಿಕ ಅಧಃಪತನ ಸಾಮಾಜಿಕ ಅವ್ಯವಸ್ಥೆ ಹಾಗೂ ಲೈಂಗಿಕ ಅಪರಾಧಗಳ ಹೆಚ್ಚಳಕ್ಕೆ ಎಡೆ ಮಾಡಿಕೊಡುತ್ತದೆ. ಈ ಲಜ್ಜೆಗೇಡಿ ಕೃತ್ಯವು ಕುಟುಂಬದ ವ್ಯವಸ್ಥೆಯನ್ನು ಹಾಳು ಮಾಡಲಿದ್ದು, ಮನುಕುಲದ ಪ್ರಗತಿಗೆ ಮಾರಕ ಎಂದು ಅವರು ಹೇಳಿದ್ದಾರೆ.
ಸಲಿಂಗಕಾಮ ಮೂಲಭೂತ ಹಕ್ಕು ಎಂದು ಪ್ರತಿಪಾದಿಸುವವರಿಗಾಗಿ ಇಡೀ ಸಮಾಜವನ್ನು ಲೈಂಗಿಕ ಅರಾಜಕತೆಗೆ ತಳ್ಳಲು ಸಾಧ್ಯವಿಲ್ಲ. ಎಲ್ಲ ಧರ್ಮಗಳ ಪವಿತ್ರಗ್ರಂಥಗಳೂ ಕೂಡ ಸಲಿಂಗ ಕಾಮವನ್ನು ಅಸಹಜ ಲೈಂಗಿಕತೆ ಎಂದು ಬಣ್ಣಿಸಿವೆ. ಈ ತೀರ್ಪಿನ ವಿರುದ್ಧ ಎಲ್ಲ ಧರ್ಮಗಳ ಗುರುಗಳು ಹೋರಾಟಕ್ಕೆ ಮುಂದಾಗಬೇಕೆಂದು ಮದನಿ ಹೇಳಿದ್ದಾರೆ. ಎಇಎಂಪಿಎಲ್‍ಬಿ ಸದಸ್ಯ ಕಮಲ್ ಫರೂಕಿ ಅವರೂ ಸಹ ಈ ತೀರ್ಪಿನ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಲಿಂಗಕಾಮ ಅಪರಾಧವಲ್ಲ ಎಂದು ಪರಿಗಣಿಸಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಇದು ಇಡೀ ಸಮಾಜವನ್ನು ಹಾಳು ಮಾಡುತ್ತದೆ. ದೇಶದ ಸಂಸ್ಕøತಿಯನ್ನು ಸಹ ಇದು ಹದಗೆಡಿಸುತ್ತದೆ. ಈ ಬಗ್ಗೆ ದೇಶದ ನಾಗರಿಕರು ಎಚ್ಚೆತ್ತುಕೊಳ್ಳಬೇಕು. ಕಾನುನು ಹೋರಾಟ ನಡೆಸಬೇಕಾದ ಅಗತ್ಯವಿದೆ ಎಂದು ಹೇಳಿದರು. ಸಲಿಂಗಕಾಮ ಕೇವಲ ಕಾನೂನುಬಾಹಿರ ಮಾತ್ರವಲ್ಲ ಅದೊಂದು ಮಹಾಪಾಪದ ಕೆಲಸ ಎಂದು ಶಿಯಾ ಪಂಧದ ಚಿಂತಕ ಮತ್ತು ಸಾಮಾಜಿಕ ಮುಖಂಡ ಮೌಲಾನಾ ಕಲ್ವೆ ರಶೀದ್ ಹೇಳಿದ್ದಾರೆ.

Sri Raghav

Admin