ಬೆಂಗಳೂರು, ಜ.11-ರಾಜ್ಯದಲ್ಲಿ ಅತಿ ವಿಶಾಲ ಹರಿವುಳ್ಳ ಅತ್ಯಂತ ಶುದ್ಧ ನದಿಯಾದ ಅಘನಾಶಿನಿಯನ್ನು ಉಳಿಸಲೇಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನದಿಗೆ ಧಕ್ಕೆಯಾಗುವ ರೀತಿಯಲ್ಲಿ ನಡೆಯುತ್ತಿರುವ ಚಿಪ್ಪಿಕಲ್ಲು ಗಣಿಗಾರಿಕೆಯನ್ನು ಸಂಪೂರ್ಣ ನಿಲ್ಲಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ನದಿ ಉಳಿವಿಗಾಗಿ ನಡೆಯುವ ಹೋರಾಟದಲ್ಲಿ ನಾನೂ ಅಘನಾಶಿನಿಯ ದನಿಯಾಗುತ್ತೇನೆ. ಉತ್ತರ ಕನ್ನಡದ ಜೀವಸೆಲೆ ಅಘನಾಶಿನಿ ಆಪತ್ತಿನಲ್ಲಿದೆ. ಆ ನದಿ ಉಳಿಸಿಕೊಳ್ಳುವ ಬಗ್ಗೆ ಒಟ್ಟಾಗಿ ಹೋರಾಡಬೇಕಿದೆ. ಈ ಪ್ರಯತ್ನಕ್ಕೆ ನನ್ನ ಮತ್ತು ಜೆಡಿಎಸ್‍ನ ಬೆಂಬಲ ಇದೆ. ನದಿಗಳನ್ನು ಉಳಿಸಿಕೊಳ್ಳುವ ಜತೆಗೆ, ಆ ನದಿಗಳ ನೀರನ್ನು ಬದುಕಿಗೆ ಬಳಸಿಕೊಳ್ಳುವ ಶುಭಸಂಕಲ್ಪದೊಂದಿಗೆ ನಾವು ಜನತಾ ಜಲಧಾರೆ ಕಾರ್ಯಕ್ರಮ ರೂಪಿಸಿದ್ದೇವೆ ಎಂದಿದ್ದಾರೆ.
ಸ್ಥಳೀಯರ ಜೀವನಾಧಾರವಾಗಿದ್ದ ಚಿಪ್ಪಿಕಲ್ಲಿನ ಅಂಕೆ ಇಲ್ಲದ ಗಣಿಗಾರಿಕೆ ಅಘನಾಶಿನಿಯ ಅಸ್ತಿತ್ವಕ್ಕೆ ಧಕ್ಕೆ ತಂದಿದೆ. ಇಂಥ ನದಿಯನ್ನು ಕಳೆದುಕೊಂಡರೆ ಅದೊಂದು ರಾಷ್ಟ್ರೀಯ ದುರಂತವೆ ಹೌದು. ಸರಕಾರ ಕೂಡಲೆ ಅಘನಾಶಿನಿ ರಕ್ಷಣೆಗೆ ಅತ್ಯುನ್ನತ ಕಾರ್ಯಪಡೆ ರಚಿಸಿ ನದಿ ಉಳಿವಿಗೆ ವಿಜ್ಞಾನಿಗಳು ನೀಡಿರುವ ವರದ್ನಿ ಪರಿಗಣಿಸಿ ಕ್ರಮ ವಹಿಸಬೇಕು ಒತ್ತಾಯಿಸಿದ್ದಾರೆ.
ರಾಜ್ಯದ ಅತ್ಯಂತ ಸೂಕ್ಷ್ಮನದಿ, ಅಪರೂಪದ ಜೀವವೈವಿಧ್ಯತೆ ಒಡಲು ಅಘನಾಶಿನಿ ಉಳಿವಿಗಾಗಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದಿದ್ದಾರೆ.
