ಕೃಷಿ ಕ್ಷೇತ್ರದವರ ಸಿಬಿಲ್‌ ಸ್ಕೋರ್ ಹೆಚ್ಚಿಸಲು ಮುಂದಾದ ‘ಅಗ್ರಿ ಫೈ’ !

Social Share

ಬೆಂಗಳೂರು: ಕೃಷಿ ಎಂದರೆ ಇಂದು ಕೇವಲ ಉತ್ತುವುದು, ಬಿತ್ತಿ ಬೆಳೆಯುವುದಲ್ಲ. ಬೆರಗು ಮೂಡಿಸುವಂತಹ ವೈವಿದ್ಯಮಯ ತಂತ್ರಜ್ಞಾನ ಕೃಷಿ ಕ್ಷೇತ್ರದಲ್ಲಿ ದಾಪುಗಾಲು ಇಟ್ಟು ಆಗಿದೆ. ಇದರಲ್ಲಿ ನೇರವಾಗಿ ಕೃಷಿಗೆ ಪೂರಕವಾಗಿದ್ದರೆ, ಇನ್ನೂ ಕೆಲವು ಕೃಷಿ ಕ್ಷೇತ್ರದ ಒಟ್ಟಾರೆ ಬೆಳವಣಿಗೆಗೆ ಬೇಕಾದಂತಹ ಅಗತ್ಯ ತಂತ್ರಜ್ಞಾನಗಳು ಇವೆ.
ಇಲ್ಲೊಂದು ಯುವಕರ ತಂಡ ಕೃಷಿಗೆ ಪೂರಕವಾಗಿ ಆ್ಪ್ ಒಂದನ್ನು ಅಭಿವೃದ್ಧಿಪಡಿಸಿದೆ. ಆ ಮೂಲಕ ಕೃಷಿ ಕ್ಷೇತ್ರದ ಸಮಗ್ರ ಮಾಹಿತಿಯನ್ನು ಡಿಜಟಲೀಕರಣ ಮಾಡುವುದು ಆಮೂಲಕ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೆ ಸುಲಭವಾಗಿ ಸಾಲದ ನೆರವು ಒದಗಿಸುವಂತಹ ಉದ್ದೇಶ ಹೊಂದಿದೆ.
ನಗರ ಪ್ರದೇಶಗಳಲ್ಲಿ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ, ಕ್ರೆಡಿಟ್, ಡೆಬಿಟ್ ಕಾರ್ಡ್ ಹೊಂದಿರುವವರಿಗೆ ಸುಲಭವಾಗಿ ಸಾಲಸೌಲಭ್ಯ ಸಿಗುತ್ತದೆ. ಆದರೆ, ಇದು ಗ್ರಾಮೀಣ ಭಾಗದಲ್ಲ ಕೆಲಸ ಮಾಡುವ ರೈತರಿಗೆ ಅಥವಾ ಇಂತಹ ರೈತರಿಗೆ ತಕ್ಷಣಕ್ಕೆ ಸಾಲದ ನೆರವು ಒದಗಿಸುವಂತಹ ಕೃಷಿ ಟ್ರೇಡರ್ಸ್‌ಗಳಿಗೆ ಎಲ್ಲಿಯೂ ಸುಲಭಕ್ಕೆ ಸಾಲ ಸಿಗುವುದಿಲ್ಲ.
ಇದಕ್ಕೆ ಮುಖ್ಯಕಾರಣ ಎಂದರೆ ಕೃಷಿ ಕ್ಷೇತ್ರದಲ್ಲಿ ಇರುವಂತಹ ರೈತರು ಮತ್ತು ಕೃಷಿ ಟ್ರೇಡರ್ಸ್‌ಗಳು ತಮ್ಮ ದೈನಂದಿನ ವ್ಯವಹಾರವನ್ನು ಡಿಜಿಟಲ್ ರೂಪಕ್ಕೆ ಇಳಿಸುವುದಿಲ್ಲ. ಕೃಷಿ ಕ್ಷೇತ್ರದಲ್ಲಿ ಯಾವುದೇ ಸಿಬಿಲ್ ಸ್ಕೋರ್‌ಗಳ ಮಾತೇ ಇಲ್ಲ. ಹೀಗಾಗಿ ಇವರು ಯಾವುದೇ ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು (NBFC) ಬಳಿ ಸಾಲದ ನೆರವು ಕೇಳಿ ಅರ್ಜಿ ಸಲ್ಲಿಸಿದಾಗ ಮರು ಮಾತಿಲ್ಲದೆ ಅದನ್ನು ತಿರಸ್ಕರಿಸಲಾಗುತ್ತದೆ.
ಕೃಷಿ ಖಾತಾ ಆ್ಯಪ್:
ಕೃಷಿ ತಂತ್ರಜ್ಞಾನ ಕ್ಷೇತ್ರದಲ್ಲಿಯೇ ಕೆಲಸ ಮಾಡುತ್ತಿದ್ದಂತಹ ಅಭಿಲಾಷ್ ತಿರುಪತಿ, ಕೆ.ಆರ್. ರಘುಚಂದ್ರ ಮತ್ತು ಮಿತಿಲೇಶ್ ಕುಮಾರ್ ಎಂಬುವವರು ಅಗ್ರಿನ್ನೋವ್ ಟೆಕ್ನಾಲಜೀಸ್ ಪ್ರೈ.ಲಿ. ಎಂಬ ಕಂಪನಿ ಸ್ಥಾಪಿಸಿ ಆ ಮೂಲಕ ‘ಅಗ್ರಿ ಫೈ’ (Agrifi) ಹೆಸರಿನಲ್ಲಿ ಕೃಷಿ ಕ್ಷೇತ್ರದ ಒಟ್ಟಾರೆ ಬೆಳವಣಿಗೆಗಾಗಿ ಸ್ಟಾರ್ಟಪ್ ಯೋಜನೆಗಳನ್ನು ರೂಪಿಸಿದ್ದಾರೆ.
ಇದರ ಭಾಗವಾಗಿ ಕೃಷಿ ಖಾತಾ (Krishi Khata) ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ನೀವೂ ಸಹ ಕೃಷಿ ಕ್ಷೇತ್ರದಲ್ಲಿ ಟ್ರೇಡರ್ಸ್ ಆಗಿದ್ದು, ನಿಮಗೂ ಸಾಲಸೌಲಭ್ಯ ದೊರಕಬೇಕು ಎಂಬ ಇಚ್ಛೆ ಇದ್ದರೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕೃಷಿ ಖಾತಾ (Krishi Khata) ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. ಅಲ್ಲಿ ಕೇಳಿರುವ ವಿವರಗಳನ್ನು ಭರ್ತಿ ಮಾಡುವ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಅಗ್ರಿಫೈ ಕಡೆಯಿಂದ ನಿಮ್ಮ ದಾಖಲೆಗಳನ್ನು ಪರಿಶೀಲಿಸಿ ಬ್ಯಾಂಕ್ ಅಥವಾ ಖಾಸಗಿ ಹಣಕಾಸು ಸಂಸ್ಥೆಗಳಿಂದ ನಿಮಗೆ ಸಾಲದ ನೆರವು ಒದಗಿಸಿಕೊಡುತ್ತಾರೆ. ಇನ್ನು ನಿಮ್ಮ ಸಿಬಿಲ್ ಸಂಖ್ಯೆ ಕಡಿಮೆ ಇದ್ದರೂ ಸಹ ನಿಮ್ಮ ವಹಿವಾಟು ಪರಿಗಣಿಸಿ ಸಾಲದ ನೆರವು ಒದಗಿಸಲೂ ಪ್ರಯತ್ನಿಸಲಾಗುತ್ತದೆ.
‘ಕೃಷಿಕರು ಅಥವಾ ಕೃಷಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ಟ್ರೇಡರ್ಸ್‌ಗಳು ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ಬಳಿಕ ತಮ್ಮ ದೈನಂದಿನ ವಹಿವಾಟನ್ನು ಅದರಲ್ಲಿ ದಾಖಲಿಸಬೇಕು. ಇದಕ್ಕಾಗಿಯೇ ಆ್ಯಪ್‌ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗೆ ತಮ್ಮ ವಹಿವಾಟು ದಾಖಲಿಸುವುದರಿಂದ ಸಿಬಿಲ್ ಸ್ಕೋರ್ ಹೆಚ್ಚಿಸಲು ಇದೂ ಸಹ ನೆರವಾಗುತ್ತದೆ. ಕೃಷಿ ವ್ಯಾಪಾರಸ್ಥರು ಹೀಗೆ ಕೃಷಿ ಖಾತಾದಲ್ಲಿ ದಾಖಲಿಸಿರುವ ಅಂಕಿ ಅಂಶಗಳನ್ನು ಗಮನಿಸಿ ಅವರಿಗೆ ವಿಶೇಷ ಸ್ಕೋರ್ ಸಿದ್ಧಪಡಿಸಲಾಗುತ್ತದೆ. ಅವರ ವೈಯಕ್ತಿಕ ಸಿಬಿಲ್ ಮತ್ತು ಪ್ರತಿನಿತ್ಯದ ವಹಿವಾಟಿನ ಸ್ಕೋರ್ ಎರಡನ್ನೂ ಪರಿಗಣಿಸಿ ಅಗ್ರಿಫೈ ಸಂಸ್ಥೆಯು ವ್ಯಾಪಾರಸ್ಥರ ಪರವಾಗಿ ಬ್ಯಾಂಕ್ ಅಥವಾ ಖಾಸಗಿ ಹಣಕಾಸು ಸಂಸ್ಥೆಗಳ ಮುಂದೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿ ಸಾಲ ಒದಗಿಸಲು ಸಹಾಯ ಮಾಡುತ್ತಾರೆ. ಆ ಮೂಲಕ ಸುಲಭವಾಗಿ ಸಾಲದ ನೆರವು ಒದಗಿಸಬಹುದು’ ಎನ್ನುತ್ತಾರೆ ಅಗ್ರಿಫೈ ಸ್ಟಾರ್ಟ್‌ಅಪ್‌ನ ಮಾತೃ ಸಂಸ್ಥೆ ಅಗ್ರಿನ್ನೋವ್ ಟೆಕ್ನಾಲಜೀಸ್ ಪ್ರೈ.ಲಿ. ಸಹ ಸ್ಥಾಪಕ ಕೆ.ಆರ್. ರಘುಚಂದ್ರ.

ಕೃಷಿ ಖಾತಾ ಆ್ಪ್‌ನಲ್ಲಿ ಕೇವಲ ವ್ಯವಹಾರದ ಡಿಜಟಲೀಕರಣ ಮಾಡುವುದಷ್ಟೇ ಅಲ್ಲ, ಕೃಷಿಗೆ ಸಂಬಂಧಿಸಿದ ದೈನಂದಿನ ವೈಜ್ಞಾನಿಕ ಮಾಹಿತಿಗಳನ್ನೂ ಸಹ ಇಲ್ಲಿ ಪಡೆಯಬಹುದು.
‘ಕೃಷಿ ಖಾತಾ ಆ್ಯಪ್ ಮೂಲಕ ರೈತರಿಗೆ ಮತ್ತು ಟ್ರೇಡರ್ಸ್‌ಗಳಿಗೆ ಕೇವಲ ಸಾಲದ ನೆರವು ನೀಡುವುದಷ್ಟೇ ಅಲ್ಲದೆ, ರೈತರ ಅಗತ್ಯಕ್ಕೆ ತಕ್ಕಂತೆ ದೈನಂದಿನ ಮತ್ತು ತಾಂತ್ರಿಕ ಮಾಹಿತಿಗಳನ್ನೂ ಒದಗಿಸಲಾಗುವುದು. ಯಾವುದೇ ಜಿಲ್ಲೆ ಅಥವಾ ಹೋಬಳಿಯ ರೈತ ತನ್ನ ಜಮೀನು ಮತ್ತು ತಾನು ಬೆಳೆಯುವ ಬೆಳೆಯ ವಿವರವನ್ನು ದಾಖಲಿಸಿದರೆ ಅಲ್ಲಿ ಮಳೆ ಯಾವಾಗ ಬರುತ್ತದೆ, ಈ ವರ್ಷ ಯಾವ ಬೆಳೆ ಹೇಗೆ ಇಳುವರಿ ಕೊಡಬಹುದು, ಯಾವ ಬೆಳೆಗೆ ಮಾರುಕಟ್ಟೆಯ ದರ ಎಷ್ಟಿರಬಹುದು, ಮುಂದಿನ ಮೂರು ನಾಲ್ಕು ತಿಂಗಳಲ್ಲಿ ಬೇಡಿಕೆ ಸೃಷ್ಟಿಸುವಂತ ಧಾನ್ಯ ಅಥವಾ ತೋಟಗಾರಿಕಾ ಬೆಳೆ ಯಾವವು, ಬೆಳೆಗೆ ತಗುಲಬಹುದಾದ ರೋಗದ ಮಾಹಿತಿ ಮತ್ತು ಅದಕ್ಕೆ ಪರಿಹಾರ ಹೀಗೆ ಹತ್ತು ಹಲವು ಪ್ರಯೋಜನಗಳನ್ನು ರೈತರೂ ಪಡೆದುಕೊಳ್ಳಬಹುದು’ ಅಗ್ರಿಫೈ ಸ್ಥಾಪಕ ಅಭಿಲಾಷ್ ತಿರುಪತಿ ಎಂದು ವಿವರಿಸಿದರು.
ಈ ಜಿಲ್ಲೆಗಳಲ್ಲಿ ಈಗಾಗಲೇ ಸಾಲದ ನೆರವು:
‘ರೈತ ವ್ಯಾಪಾರಸ್ಥರಿಗೆ ಸಾಲದ ನೆರವು ಒದಗಿಸವಂತಹ ಯೋಜನೆಯನ್ನು ಸದ್ಯ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಪ್ರಾರಂಭಿಸಲಾಗಿದೆ. ಈಗಾಗಲೇ ಕೊಪ್ಪಳ, ಬಳ್ಳಾರಿ, ಗದಗ ಮತ್ತು ಹಾವೇರಿ ಜಿಲ್ಲೆಯಲ್ಲಿ ಕೆಲವರು ಇದರ ಉಪಯೋಗ ಪಡೆದಿದ್ದಾರೆ. ಇಡೀ ದೇಶದಲ್ಲಿ ಒಟ್ಟಾರೆ ಐದು ಮಿಲಿಯನ್ ವ್ಯಾಪಾರಸ್ಥರನ್ನು ಈ ವ್ಯವಸ್ಥೆಯಡಿ ತರುವ ಉದ್ದೇಶ ಹೊಂದಲಾಗಿದೆ’ ಎಂದು ಮತ್ತೋರ್ವ ಸಹ ಸ್ಥಾಪಕ ಮಿತಿಲೇಶ್ ಕುಮಾರ್ ಹೇಳಿದರು.
 

Articles You Might Like

Share This Article