ಕೃಷಿ ವಿದ್ಯಾರ್ಥಿಗಳು ಉದ್ಯೋಗ ಸೃಷ್ಟಿಸುವವರಾಗಬೇಕು: ಬಿ.ಸಿ.ಪಾಟೀಲ್

ಬೆಂಗಳೂರು,ಸೆ.21:ವಿದ್ಯಾರ್ಥಿಗಳು ಉದ್ಯೋಗ ಕೇಳುವವರಾಗದೇ ಉದ್ಯೋಗ ಸೃಷ್ಟಿಸುವವರು ವಿದ್ಯಾರ್ಥಿಗಳಾಗಬೇಕು.ಇಂತಹ ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾಲಯಗಳಿಂದ ಹೊರ ಬರುತ್ತಿರುವುದು ಹೆಮ್ಮೆಯ ವಿಷಯ ಎಂದು ಕೃಷಿ ಸಚಿವರೂ ಅಗಿರುವ ಬೆಂಗಳೂರು ಜಿಕೆವಿಕೆ ಸಹಕಲಾಧಿಪತಿ ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ಜಿಕೆವಿಕೆ 55ನೇ ಘಟಿಕೋತ್ಸವ ಸಮಾರಂಭದಲ್ಲಿ ಕುಲಾಧಿಪತಿ ಹಾಗೂ ರಾಜಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರೊಂದಿಗೆ ಭಾಗವಹಿಸಿ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಬೋಧಿಸಿ, ಬಂಗಾರದ‌ ಪದಕ ಹಾಗೂ ಪ್ರಮಾಣಪತ್ರ ಡಾಕ್ಟರೇಟ್ ಗೌರವ ನೀಡಿ ಗೌರವಿಸಿ ಬಳಿಕ ವೇದಿಕೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ರಾಜ್ಯದಲ್ಲಿ ಕೃಷಿ ಹಾಗೂ ರೈತರ ಅಭಿವೃದ್ಧಿಗೆ ಇಲಾಖೆ ಹಾಗೂ ಸರ್ಕಾರ ಬದ್ಧವಾಗಿದ್ದು,  770 ಕೋಟಿ ರೂ.ಬಂಡವಾಳ ಹೂಡಿಕೆಯಲ್ಲಿ ಕೃಷಿತಂತ್ರಜ್ಞಾನಕ್ಕೆ‌ ಮಹತ್ತರ ಹೆಜ್ಜೆ ಇಟ್ಟು ಇದೇ ಗುರುವಾರ ಕೃಷಿ ಇಲಾಖೆ ಕರ್ನಾಟಕ ಸರ್ಕಾರ ಹೆಸ್ಕಾನ್ ಕಂಪೆನಿ ಜೊತೆ 85%:15%/ರಂತೆ ಒಡಂಬಡಿಕೆ ಮಾಡಿಕೊಳ್ಳುತ್ತಿರುವುದಾಗಿ ಬಿ.ಸಿ.ಪಾಟೀಲ್ ಮಾಹಿತಿ ನೀಡಿದರು.

ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳು ಸಾಕಷ್ಟು ವಿಷಯಗಳಲ್ಲಿ ಸಾಧನೆ‌ ಮಾಡುತ್ತಿರುವುದನ್ನು ನೋಡಿದರೆ ಕೃಷಿಯತ್ತ ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಿರುವುದು ಕಂಡುಬರುತ್ತದೆ.ವಿದ್ಯಾರ್ಥಿಗಳು ಇಷ್ಟಕ್ಕೆ ತಮ್ಮ ಸಾಧನೆ ಮುಗಿಯಿತೆಂದು ಭಾವಿಸದೇ ಕೃಷಿ ಅಭಿವೃದ್ಧಿಯಲ್ಲಿ ತಮ್ಮ ವಿದ್ಯೆ ತಂತ್ರಜ್ಞಾನವನ್ನು ಬಳಸಿ ಪ್ರಗತಿಪರರಾಗಬೇಕು.ಕೃಷಿ ಉದ್ಯಮ‌ ನವೋದ್ಯಮ ಪ್ರಾರಂಭಿಸಬೇಕಿದೆ‌ ಎಂದು ಕೃಷಿ ಸಚಿವರು ಆಶಯ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ದೇಶದಬೆನ್ನೆಲೆಬು ರೈತ ಎನ್ನುವುದನ್ನು ಮನಗಂಡು ರೈತರ ಆದಾಯ ದ್ವಿಗಿಣ ಮಾಡಲು ದೃಢ ಸಂಕಲ್ಪದ ಹೆಜ್ಜೆ ಇಟ್ಟು ಆಹಾರ ಉತ್ಪಾದಕ ಸಂಸ್ಥೆಗಳಿಗಾಗಿ ಹೆಚ್ಚು ಆದ್ಯತೆ ನೀಡಿದ್ದಾರೆ.ರೈತರ ಆದಾಯ ಹೆಚ್ಚಳಕ್ಕೆ ತಂತ್ರಜ್ಞಾನ ಬಳಸಿಕೊಳ್ಳಬೇಕು.

ವಿದ್ಯೆ ಹಾಗೂ ಪ್ರತಿಭೆ ಯಾರ ಸ್ವತ್ತೂ ಅಲ್ಲ.ಪ್ರತಿಭೆಯಿದ್ದರೆ ಯಾವುದೇ ಕಾಲೇಜಾಗಲೀ ವಿಶ್ವವಿದ್ಯಾಲಯವಾಗಲೀ ಬೆಳಕಿಗೆ ಬಂದೇ ಬರುತ್ತದೆ.ಕೃಷಿಕರ ಆದಾಯ ದ್ವಿಗುಣಗೊಳಿಸಲು ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೊಳಿಸಿವೆ ಎಂದು ತಿಳಿಸಿದರು.

ಕೃಷಿ ಭೂಮಿ ತಾಯಿಯನ್ನು ನಂಬಿದರೆ ಎಂದಿಗೂ ಕೈಬಿಡುವುದಿಲ್ಲ.ಉದ್ಯೋಗವನ್ನು ಅರಸಿ ಬೇರೆಡೆಗೆ ಹೋಗುವುದಕ್ಕಿಂತ ಇರುವ ವಿದ್ಯೆ ತಂತ್ರಜ್ಞಾನವನ್ನು ಬಳಸಿ ಕೃಷಿಯಲ್ಲಿಯೇ ಸಾಧನೆ ಮಾಡಬಹುದೆನ್ನುವುದನ್ನು ತೋರಿಸಿಕೊಡುತ್ತಿದ್ದಾರೆ.
ಹೆಚ್ಚೆಚ್ಚು ಐಎಎಸ್ ಐಪಿಎಸ್‌ಗಳಲ್ಲಿ ಕೃಷಿ ವಿದ್ಯಾರ್ಥಿಗಳೇ ಮುಂದೆ ಬರುತ್ತಿರುವುದು ಸಂತಸದ ವಿಷಯ ಎಂದು ಸಚಿವರು ಹೇಳಿದರು.

ಆನ್ಲೈನ್ ಮೂಲಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಐಸಿಆರ್ ಕಾರ್ಯದರ್ಶಿಗಳಾದ ಡಾ.ತ್ರಿಲೋಚನಾ ಮೊಹಪಾತ್ರ ಪಾಲ್ಗೊಂಡರು.

ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ರಾಜೇಂದ್ರ ಪ್ರಸಾದ್ ಸ್ವಾಗತಿಸಿ ವಿಶ್ವವಿದ್ಯಾಲಯದ ಸಾಧನೆ ಹಾಗೂ ನಡೆದು ಬಂದ ಹಾದಿಯನ್ನು ವಿವರಿಸಿದರು.
ಆಡಳಿತ ಮಂಡಳಿ, ಶೈಕ್ಷಣಿಕ ಮಂಡಳಿ ಸದಸ್ಯರು ಸೇರಿದಂತೆ ಮತ್ತಿತ್ತರರ ಉಪಸ್ಥಿತರಿದ್ದರು.

Sri Raghav

Admin