ಕೃಷಿ ವಿವಿಗಳ ವ್ಯವಸ್ಥಾಪನಾ ಮಂಡಳಿಯ ನಾಮನಿರ್ದೇಶಿತ ಸದಸ್ಯರ ಪದಾವಧಿ ವಿಸ್ತರಿಸಲು ಮನವಿ

Social Share

ಬೆಂಗಳೂರು,ಜನೆವರಿ,27: ಕರ್ನಾಟಕ ರಾಜ್ಯದಲ್ಲಿರುವ ಕೃಷಿ ವಿಶ್ವವಿದ್ಯಾಲಯಗಳ ವ್ಯವಸ್ಥಾಪನಾ ಮಂಡಳಿಯ ನಾಮನಿರ್ದೇಶಿತ ಸದಸ್ಯರ ಪದಾವಧಿಯನ್ನು ವಿಸ್ತರಿಸುವಂತೆ ಎಲ್ಲಾ ವಿವಿಯ ಸದಸ್ಯರು ಕೃಷಿ ಸಚಿವ ಬಿ.ಸಿ.ಪಾಟೀಲರಿಗೆ ಮನವಿ ಸಲ್ಲಿಸಿದರು. ವಿಶ್ವವಿದ್ಯಾಲಯಗಳ ನಾಮನಿರ್ದೇಶಿತ ಸದಸ್ಯರ ಪದಾವಧಿಯು ಪ್ರಸ್ತುತ 3 ವರ್ಷಗಳಿದ್ದು, ಇದನ್ನು 3 ವರ್ಷಗಳಿಂದ 4 ವರ್ಷಗಳಿಗೆ ಹೆಚ್ಚಿಸಬೇಕೆಂದು ಪತ್ರ ಮುಖೇನ ಸಚಿವರಿಗೆ ವಿಕಾಸಸೌಧದ ಕಚೇರಿಯಲ್ಲಿ ಮನವಿ ಸಲ್ಲಿಸಿದರು.
ತಮಿಳುನಾಡು ಕೃಷಿ ವಿಶ್ವವಿದ್ಯಾಲಯ, ಕೊಯಂಬತ್ತೂರಿನಲ್ಲಿ ಕುಲಪತಿಗಳು ಹಾಗೂ ವ್ಯವಸ್ಥಾಪನಾ ಮಂಡಳಿಯ ನಾಮನಿರ್ದೇಶಿತ ಸದಸ್ಯರ ಪದಾವಧಿ ನಾಲ್ಕು ವರ್ಷಗಳಿಗಿದೆ. ಆದರೆ ರಾಜ್ಯದಲ್ಲಿ ನೂತನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ಅಧಿನಿಯಮ 2009 ಹಾರುಗೆ ಬಂದ ನಂತರ ಕುಲಪತಿಗಳ ಪದಾವಧಿಯನ್ನು ವಿಶ್ವವಿದ್ಯಾಲಯದ ಆಡಳಿತ ಹಾಗೂ ಅಭಿವೃದ್ಧಿಯ ಹಿತದೃಷ್ಟಿಯಿಂದ 3 ವರ್ಷಗಳಿಂದ 4 ವರ್ಷಗಳಿಗೆ ಹೆಚ್ಚಿಸಲಾಗಿದೆ.
ಆದರೆ ವ್ಯವಸ್ಥಾಪನಾ ಮಂಡಳಿಯ ನಾಮನಿರ್ದೇಶಿತ ಸದಸ್ಯರ ಪದಾವಧಿಯನ್ನು 3 ವರ್ಷಗಳಿಗೆ ಸೀಮಿತಗೊಳಿಸಿ ಯಾವುದೇ ಪ್ರಾಧಿಕಾರಕ್ಕೆ ಮುಂದಿನ ಅವಧಿಗೆ ಮರುನಿಯೋಜನೆಗೂ ಅವಕಾಶವಿರವುದಿಲ್ಲ. ಕುಲಪತಿಗಳು ಮತ್ತು ವ್ಯವಸ್ಥಾಪನಾ ಮಂಡಳಿಯ ನಾಮನಿರ್ದೇಶಿತ ಸದಸ್ಯರ ಪದಾವಧಿಯು ಏಕರೂಪವಾದಲ್ಲಿ ವಿಶ್ವವಿದ್ಯಾಲಯದ ಆಡಳಿತಾತ್ಮಕ ಮತ್ತು ಇತರೆ ಅಭಿವೃದ್ಧಿ ಕಾರ್ಯದಲ್ಲಿ ಸಮನ್ವಯತೆಯನ್ನು ಸಾಧಿಸಲು ಅನುಕೂಲವಾಗುತ್ತದೆ.
ಆದ್ದರಿಂದ ಕರ್ನಾಟಕ ರಾಜ್ಯದಲ್ಲಿರುವ ಕೃಷಿ ವಿಶ್ವವಿದ್ಯಾಲಯಗಳ ವ್ಯವಸ್ಥಾಪನಾ ಮಂಡಳಿಯ ನಾಮನಿರ್ದೇಶಿತ ಸದಸ್ಯರ ಪದಾವಧಿಯನ್ನು ವಿಸ್ತರಿಸುವಂತೆ ಸದಸ್ಯರು ಮನವಿ ಸಲ್ಲಿಸಿದ್ದು, ಇದನ್ನು ಪರಿಶೀಲಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಸಚಿವರು ಸದಸ್ಯರಿಗೆ ಹೇಳಿದರು. ಈ ಸಂದರ್ಭದಲ್ಲಿ ಸದಸ್ಯರಾದ ದಯಾನಂದ್, ಸುರೇಶ್, ತ್ರಿವಕ್ರಮ್ ಜೋಶಿ ಸೇರಿದಂತೆ ಮತ್ತಿತ್ತರಿದ್ದರು.

Articles You Might Like

Share This Article