ಗಾಂಧಿ ಕುಟುಂಬ ಪ್ರಭಾವದೆದುರು ಈಜುವುದೇ ಖರ್ಗೆ ಮುಂದಿರುವ ಬೃಹತ್ ಸವಾಲು

Social Share

#ಉಮೇಶ್ ಕೋಲಿಗೆರೆ
ಎಐಸಿಸಿ ಅಧ್ಯಕ್ಷರಾಗಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭೂತಪೂರ್ವ ಗೆಲುವು ಸಾಧಿಸುತ್ತಿದ್ದಂತೆ ಹಲವು ರಾಜಕೀಯ ಲೆಕ್ಕಚಾರಗಳು ಶುರುವಾಗಿವೆ. ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆಗಳಾಗಲಿವೆಯೇ ಅಥವಾ ಯಥಾಸ್ಥಿತಿ ಮುಂದುವರೆಯಲಿದೆಯೇ ಎಂಬ ಪ್ರಶ್ನೆಗಳು ಕಾಡಲಾರಂಭಿಸಿವೆ.

ಎಐಸಿಸಿಗೆ ಖರ್ಗೆ ಆಯ್ಕೆಯಿಂದ ಕರ್ನಾಟಕ ರಾಜಕಾರಣದಲ್ಲಿ ಮುಖ್ಯಮಂತ್ರಿ ರೇಸ್‍ನಲ್ಲಿ ಮತ್ತೊಬ್ಬ ಪ್ರತಿಸ್ರ್ಪಧಿ ಬದಿಗೆ ಸರಿದಂತಾಗಿದ್ದು, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಡಿ.ಕೆ.ಶಿವಕುಮಾರ್ ಅವರ ಹಾದಿ ಸುಗಮಗೊಂಡಂತಾಗಿದೆ.

ನಕಲಿ ಶಿಕ್ಷಕರ ನೇಮಕಾತಿ CID ಪೊಲೀಸರ ದಾಳಿ: ಕೆಲವರು ವಶಕ್ಕೆ

2009ರಲ್ಲಿ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದ ಖರ್ಗೆ ಅವರು 2013 ಮುಖ್ಯಮಂತ್ರಿಯಾಗುವ ಉಮೇದಿನಲ್ಲಿದ್ದರು. ಆದರೆ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಮಣೆ ಹಾಕಿತ್ತು. ಅನಂತರ ರಾಜ್ಯ ರಾಜಕಾರಣದಿಂದ ವಿಮುಖರಾದ ಖರ್ಗೆ ರಾಷ್ಟ್ರ ರಾಜಕಾರಣದಲ್ಲಿ ಕೇಂದ್ರ ಸಚಿವ, ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನ ನಿಭಾಯಿಸಿದ್ದಾರೆ.

ಈಗ ಸಂಕಷ್ಟ ಸಮಯದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಹೊಸ ಜವಾಬ್ದಾರಿ ಅವರನ್ನು ರಾಜ್ಯ ರಾಜಕಾರಣದತ್ತ ಮರಳುವ ಅವಕಾಶಗಳಿಂದ ದೂರ ಮಾಡಿದೆ ಎನ್ನಲಾಗಿದೆ.

ಬಣ ರಾಜಕೀಯಕ್ಕೆ ಕುಮ್ಮಕ್ಕು:
ಆದರೂ ಬಣ ರಾಜಕೀಯಕ್ಕೆ ಕುಮ್ಮಕ್ಕು ಸಿಗಲಿದೆ ಎಂಬ ವದ್ಧಂತಿಗಳಿವೆ. ರಾಷ್ಟ್ರೀಯ ಅಧ್ಯಕ್ಷರಾಗಿರುವುದರಿಂದ ಖರ್ಗೆ ಅವರಿಗೆ ಮಹತ್ವದ ಜವಾಬ್ದಾರಿಗಳು ಮತ್ತು ಆಧಿಕಾರಗಳಿವೆ. ಕೆಪಿಸಿಸಿಯ ಬಹುತೇಕ ನಿರ್ಣಯಗಳಲ್ಲಿ ಅವರ ಪ್ರಭಾವ ಕಾಣಿಸಲಿದೆ. ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಖರ್ಗೆ ಪ್ರತ್ಯೇಕ್ಷವಾಗಿ ಕಾಣಿಸಿಕೊಳ್ಳದೇ ಇದ್ದರೂ ಅವರ ಪ್ರಭಾವ ಭಾರೀ ಪರಿಣಾಮ ಉಂಟು ಮಾಡಲಿದೆ ಎಂಬ ಮಾತುಗಳಿವೆ.

ರಾಷ್ಟ್ರ ರಾಜಕಾರಣದಲ್ಲಿ ಖರ್ಗೆ ಅವರು ಗಾಂಧಿ ಕುಟುಂಬದ ಪ್ರಭಾವದ ಎದುರೇ ಈಜಬೇಕಿದೆ. ಕಾಂಗ್ರೆಸ್ ಪಕ್ಷಕ್ಕೆ ಗಾಂಧಿ ಕುಟುಂಬದ ಹೊರತಾದ ವ್ಯಕ್ತಿ ಅಧ್ಯಕ್ಷರಾಗಲು ಸಾಧ್ಯವೇ ಎಂದು ಬಿಜೆಪಿ ಸೇರಿ ಅನೇಕ ಪ್ರತಿಪಕ್ಷಗಳು ಲೇವಡಿ ಮಾಡುತ್ತಿದ್ದವು. ಈ ವ್ಯಂಗ್ಯಕ್ಕೆ ಪ್ರತ್ಯುತ್ತರಿಸಲು ಗಾಂಧಿ ಕುಟುಂಬ 24 ವರ್ಷಗಳ ಬಳಿಕ ಪಕ್ಷದ ಮೇಲಿನ ತನ್ನ ಹಿಡಿತವನ್ನು ಬಿಟ್ಟುಕೊಟ್ಟಿದೆ.

ಮೇಲ್ನೋಟಕ್ಕೆ ಸೋನಿಯಾ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನದಿಂದ ಬಿಡುಗಡೆ ಹೊಂದಿದ್ದಾರೆ. ತಮ್ಮ ಕುಟುಂಬದ ಯಾರು ಚುನಾವಣೆಯಲ್ಲಿ ಸ್ರ್ಪಧಿಸದೆ ತಟಸ್ಥವಾಗಿ ಉಳಿಯುವ ನಿರ್ಧಾರ ಮಾಡಿದ್ದಾರೆ. ಈ ನಡುವೆ ರಾಹುಲ್‍ಗಾಂಧಿ ಭಾರತ ಜೋಡೋ ಯಾತ್ರೆ ನಡೆಯುತ್ತಿದೆ. ಯಾತ್ರೆಯ ಪ್ರಮುಖ ಉದ್ದೇಶವೇ ರಾಹುಲ್‍ಗಾಂಧಿಯನ್ನು ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವುದಾಗಿದೆ. ಯಾರೇ ಅಧ್ಯಕ್ಷರಾದರೂ ಪ್ರಭಾವಿ ನಾಯಕತ್ವ ಮಾತ್ರ ಗಾಂಧಿ ಕುಟುಂಬದಲ್ಲೇ ಮುಂದುವರೆಯಲಿದೆ.

ಇನ್ನೂ ಮುಂದೆ ಪಕ್ಷದ ಎಲ್ಲ ಚಟುವಟಿಕೆಗಳನ್ನೂ ಪ್ರತಿಯೊಬ್ಬ ನಾಯಕರು ಎಐಸಿಸಿ ಅಧ್ಯಕ್ಷರ ಬಳಿಯೇ ವರದಿ ಮಾಡಿಕೊಳ್ಳಬೇಕು, ಪಕ್ಷದಲ್ಲಿ ನನ್ನ ಪಾತ್ರ ಏನು ಎಂದು ಕೂಡ ನೂತನ ಅಧ್ಯಕ್ಷರು ನಿರ್ಧರಿಸುತ್ತಾರೆ ಎಂದು ನಿನ್ನೆ ರಾಹುಲ್‍ಗಾಂಧಿ ಹೇಳಿದ್ದಾರೆ. ಇದು ಮೇಲ್ನೋಟಕ್ಕೆ ಖರ್ಗೆ ಸ್ವತಂತ್ರ ಕಾರ್ಯಭಾರ ನಡೆಸಲಿದ್ದಾರೆ ಎಂದು ಬಿಂಬಿಸುವ ಪ್ರಯತ್ನವಾಗಿದೆ.

ಆದರೆ ಎಐಸಿಸಿ ನಾಲ್ಕೈದು ಮಂದಿ ಪ್ರಧಾನ ಕಾರ್ಯದರ್ಶಿಗಳು ಎಐಸಿಸಿ ಕಚೇರಿಯ ಕಾರ್ಯಚಟುವಟಿಕೆಗಳನ್ನು ಮರೆತು ಭಾರತ ಜೋಡೋ ಯಾತ್ರೆಯಲ್ಲಿ ರಾಹುಲ್‍ಗಾಂಧಿಗಾಗಿ ದುಡಿಯುತ್ತಿದ್ದಾರೆ. ಇದರಿಂದ ಅಧ್ಯಕ್ಷ ಸ್ಥಾನ ನೆಪ ಮಾತ್ರವೇ ಎಂಬ ಪ್ರಶ್ನೆ ಕಾಡಲಾರಂಭಿಸಿದೆ.

ಪ.ಜಾ ಹಾಗೂ ಪ.ಪಂಗಡದವರಿಗೆ ಮೀಸಲಾತಿ ಹೆಚ್ಚಿಸಿ ಸುಗ್ರೀವಾಜ್ಞೆ ಜಾರಿ

ಇತ್ಯರ್ಥವಾಗದ ನಾಯಕರ ಸಮಸ್ಯೆಗಳು:
ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವದ ಮುಂದೆ ಕಾಂಗ್ರೆಸ್ ನಾಯಕತ್ವ ಸ್ಪರ್ಧೆ ನೀಡುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟ ಸಾಧ್ಯವಾದಂತಿದೆ. ಯಾತ್ರೆಯಲ್ಲಿ ರಾಹುಲ್‍ಗಾಂಧಿ ಜನ ಸಾಮಾನ್ಯರ ಕಷ್ಟ-ಸುಖಗಳನ್ನು ಆಲಿಸುತ್ತಾ ಮುನ್ನೆಡೆಯುತ್ತಿದ್ದಾರೆ. ಅಸಮಾಧಾನಕ್ಕೆ ಗುರಿಯಾದ ನಾಯಕರನ್ನು ಜೊತೆಯಲ್ಲಿ ಕರೆದುಕೊಂಡು ಹೆಜ್ಜೆ ಹಾಕುವ ಮೂಲಕ ಎಲ್ಲವೂ ಸರಿ ಹೋಯಿತು ಎಂದು ಬಿಂಬಿಸುವ ಯತ್ನ ನಡೆಸುತ್ತಿದ್ದಾರೆ.

ರಾಜ್ಯದ ಮಟ್ಟಿಗೆ ಹೇಳುವುದಾದರೆ ಪಕ್ಷದಿಂದ ಹೆಜ್ಜೆ ಹೊರಗಿಟ್ಟಿರುವ ಕೆ.ಎಚ್.ಮುನಿಯಪ್ಪ, ಎಂ.ಆರ್.ಸೀತಾರಾಂ ಸೇರಿದಂತೆ ಅನೇಕ ನಾಯಕರ ಸಮಸ್ಯೆಗಳು ಇತ್ಯರ್ಥವಾಗಲೇ ಇಲ್ಲ. ಅದಕ್ಕೆ ಪೂರಕವಾದ ವೇದಿಕೆಯೂ ಸೃಷ್ಟಿಯಾಗಲಿಲ್ಲ, ಚರ್ಚೆಗಳು ನಡೆಯಲೂ ಇಲ್ಲ. ಸ್ಥಳೀಯ ಭಿನ್ನಮತಗಳನ್ನು ಮತ್ತೆ ಸ್ಥಳೀಯ ನಾಯಕರಿಗೆ ಬಿಟ್ಟು ರಾಹುಲ್ ಮುನ್ನೆಡೆದಿದ್ದಾರೆ. ಯಾತ್ರೆಯಿಂದ ಪಕ್ಷ ಒಗ್ಗಟ್ಟಾಗಲಿದೆ ಎಂಬ ನಿರೀಕ್ಷೆಗಳು ಹುಸಿಯಾಗಿವೆ.

ರಬ್ಬರ್ ಸ್ಟ್ಯಾಂಪ್ ಆಗ್ತಾರಾ ಖರ್ಗೆ..?
ಸ್ಥಳೀಯ ಸಮಸ್ಯೆಗಳನ್ನು ಬಗೆ ಹರಿಸದೇ, ಭಿನ್ನಮತಗಳನ್ನು ನಿವಾರಿಸದೆ ಯಾತ್ರೆ ಊರೂರುಗಳನ್ನು ದಾಟುತ್ತಿದೆ. ಅವುಗಳನ್ನು ಬಗೆ ಹರಿಸುವ ಜವಾಬ್ದಾರಿ ಇನ್ನೂ ಮುಂದೆ ಖರ್ಗೆ ಅವರ ಹೆಗಲಿಗೆ ವರ್ಗಾವಣೆಯಾಗಲಿದೆ. ಒಂದು ಬಣ ರಾಹುಲ್‍ಗಾಂಧಿ ಮತ್ತು ಗಾಂಧಿ ಕುಟುಂಬದ ಪ್ರಭಾವನ್ನು ಪಕ್ಷದಲ್ಲಿ ಕಾಪಿಟ್ಟುಕೊಳ್ಳಲು ಪ್ರಯತ್ನಿಸುತ್ತಿದೆ.

90 ಮೀಟರ್ ಎತ್ತರದ ಏರಿಯಲ್ ಲ್ಯಾಡರ್ ಮೇಲೆ ಸಿಎಂ

ಖರ್ಗೆ ಪ್ರಭಾವಿಯಾಗದೇ ರಬ್ಬರ್ ಸ್ಟಾಂಪ್ ರೀತಿ ವರ್ತಿಸಬೇಕು ಎಂಬ ನಿರೀಕ್ಷೆಗಳನ್ನು ಗಾಂಧಿ ಕುಟುಂಬದ ಭಟ್ಟಂಗಿಗಳು ಹೊಂದಿದ್ದಾರೆ. ಅಂತಹವರು ಪದೇ ಪದೇ ಗಾಂಧಿ ಕುಟುಂಬದ ಬಳಿ ತಮ್ಮ ಬೆಳೆ ಬೇಯಿಸಿಕೊಳ್ಳಲು ಖರ್ಗೆ ಅವರ ವಿರುದ್ಧ ಮಸಲತ್ತು ನಡೆಸುವ ಸಾಧ್ಯತೆ ಇರುವುದರಿಂದ ನೂತನ ಅಧ್ಯಕ್ಷರು ಮೊದಲು ಗಾಂಧಿ ಕುಟುಂಬದ ಪ್ರಭಾವದ ಎದುರು ಈಜಬೇಕಾಗಿದೆ.

ಮುಂದಿನ ಸಮಸ್ಯೆಗಳೆಲ್ಲವೂ ಕಬ್ಬಿಣದ ಕಡಲೆಗಳೇ ಆಗಿವೆ. ಖರ್ಗೆ ನಾಯಕತ್ವ ಪಕ್ಷಕ್ಕೆ ಹೊಸತನ ತಂದು ಕೊಡಲಿದೆಯೋ ಅಥವಾ ಯಥಾಸ್ಥಿತಿಯನ್ನು ಮುಂದುವರೆಸಲಿದೆಯೋ ಕಾದು ನೋಡಬೇಕಿದೆ.

Articles You Might Like

Share This Article