ನವದೆಹಲಿ, ಜ.27- ಕೇಂದ್ರ ಸರ್ಕಾರ ಏರ್ ಇಂಡಿಯಾವನ್ನು ಟಾಟಾಗ್ರೂಪ್‍ಗೆ ಇಂದು ಹಸ್ತಾಂತರಿಸಲಿದೆ. ಸುಮಾರು 69 ವರ್ಷಗಳ ಹಿಂದೆ ಭಾರತ ಸರ್ಕಾರ ವಿಮಾನಯಾನವನ್ನು ಟಾಟಾಗ್ರೂಪ್ ಸಮೂಹದಿಂದ ತನ್ನ ಅಧೀನಕ್ಕೆ ತೆಗೆದುಕೊಂಡಿತ್ತು. ಇದೀಗ ಮತ್ತೆ ಏರ್ ಇಂಡಿಯಾವನ್ನು ಟಾಟಾ ಸಮೂಹಕ್ಕೆ ಹಸ್ತಾಂತರಿಸಲಾಗುತ್ತಿದೆ.
ಕಳೆದ ವರ್ಷ ಅ.8ರಂದು ನಡೆದ ಹರಾಜು ಪ್ರಕ್ರಿಯೆಯಲ್ಲಿ ಏರ್ ಇಂಡಿಯಾ ಟೇಲ್ಸ್ ಪ್ರೈ.ಲಿ.ಗೆ 18 ಸಾವಿರ ಕೋಟಿ ರೂ.ಗೆ ಕೇಂದ್ರ ಸರ್ಕಾರ ಮಾರಾಟ ಮಾಡಿತ್ತು. ಇದು ಟಾಟಾಗ್ರೂಪ್‍ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಹಸ್ತಾಂತರ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ವಿಮಾನಯಾನವನ್ನು ಟಾಟಾ ಸಮೂಹಕ್ಕೆ ಇಂದು ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ಏರ್‍ಲೈನ್ಸ್ ಪೈಲೆಟ್ ಯೂನಿಯನ್‍ಗಳಾದ ಇಂಡಿಯನ್ ಪೈಲೆಟ್ಸ್ ಗಿಲ್ಡ್ (ಐಪಿಜಿ) ಮತ್ತು ಇಂಡಿಯನ್ ಕಮರ್ಷಿಯಲ್ ಪೈಲೆಟ್ ಅಸೋಸಿಯೇಷನ್ ಏರ್ ಇಂಡಿಯಾ (ಐಸಿಪಿಎ) ವ್ಯವಸ್ಥಾಪಕ ನಿರ್ದೇಶಕರಾದ ವಿಕ್ರಂ ದೇವ್‍ದತ್ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ.
ಪೈಲೆಟ್‍ಗಳ ಬಾಕಿ ಮೊತ್ತವನ್ನು ತಕ್ಷಣವೇ ಪಾವತಿಸಬೇಕೆಂದು ಒತ್ತಾಯಿಸಿವೆ. ವಿಮಾನ ಹಾರಾಟಕ್ಕೂ ಮುನ್ನ ವಿಮಾನ ನಿಲ್ದಾಣದಲ್ಲಿ ಪೈಲೆಟ್‍ಗಳ ಬಾಡಿಮಾಸ್ ಇಂಡೆಕ್ಸ್ ಅಳೆಯುವ ಕಂಪೆನಿಯು ಆದೇಶವನ್ನು ಇತರ ಎರಡೂ ಒಕ್ಕೂಟಗಳು ವಿರೋಧಿಸಿವೆ.
ಏರ್ ಇಂಡಿಯಾ ಎಂಪ್ಲಾಯ್ಸ್ ಯೂನಿಯನ್ ಮತ್ತು ಆಲ್ ಇಂಡಿಯಾ ಕ್ಯಾಬಿನ್ ಕ್ರೂ ಅಸೋಸಿಯೇಷನ್ ಈ ಆದೇಶವನ್ನು ವಿರೋಧಿಸಿ ಪತ್ರ ಬರೆದಿವೆ. ಇದು ಅಮಾನವೀಯ ಹಾಗೂ ನಾಗರಿಕ ವಿಮಾನಯಾನ ನಿರ್ದೇಶನಾಲಯದ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಹೇಳಿದೆ.
ಕಳೆದ ಸಾಲಿನ ಅ.7ರಂದು ಏರ್ ಇಂಡಿಯಾದ ಮಾರಾಟ ಘೋಷಣೆಯ ಮೂರು ದಿನಗಳ ನಂತರ ಟಾಟಾ ಸಮೂಹಕ್ಕೆ ಎಲ್‍ಒಐ ಜಾರಿ ಮಾಡಲಾಗಿದ್ದು, ಅದರಲ್ಲಿ ಸರ್ಕಾರವು ತನ್ನ ನೂರು ಪ್ರತಿಶತ ಪಾಲನ್ನು ಮಾರಾಟ ಮಾಡಿರುವುದನ್ನು ದೃಢಪಡಿಸಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅ.25ರಂದು ಷೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಿತ್ತು.
ಒಪ್ಪಂದದಡಿಯಲ್ಲಿ ಟಾಟಾ ಸಮೂಹಕ್ಕೆ ಏರ್ ಇಂಡಿಯಾ ಎಕ್ಸ್‍ಪ್ರೆಸ್ ಮತ್ತು ಗ್ರೌಂಡ್ ಹ್ಯಾಂಡಿಂಗ್ ಹಾರ್ಮ್ ಏರ್ ಇಂಡಿಯಾ ಎಸ್‍ಎಟಿಎಸ್‍ನಲ್ಲಿ ಶೇ.50ರಷ್ಟು ಪಾಲನ್ನು ನೀಡಲಾಗುವುದು. 2003-04ರ ನಂತರ ಕೇಂದ್ರ ಸರ್ಕಾರ ಮಾಡುತ್ತಿರುವ ಮೊದಲ ಖಾಸಗೀಕರಣ ಇದಾಗಿದೆ. ಏರ್ ಇಂಡಿಯಾ ಟಾಟಾ ಸಮೂಹದ ಮೂರನೆ ಏರ್‍ಲೈನ್ ಬ್ರಾಂಡ್ ಆಗಿದ್ದು, ಈಗಾಗಲೇ ಕಂಪೆನಿಯು ಏರ್ ಏಷ್ಯಾ ಇಂಡಿಯಾ ಮತ್ತು ವಿಸ್ತಾರದಲ್ಲಿ ಪಾಲನ್ನು ಹೊಂದಿದೆ.
