ಜನ ಜೀವನ ಬದಲಾಗದೆ ಪರಿಸರ ಮಾಲಿನ್ಯ ತಡೆಯುವುದು ಅಸಾಧ್ಯ

ಬೆಂಗಳೂರು, ಡಿ.1- ಜನರ ಜೀವನದಲ್ಲಿ ಪರಿಸರದ ಬಗ್ಗೆ ಕಾಳಜಿ ಹೆಚ್ಚಾಗಬೇಕು. ಜೀವನ ಶೈಲಿ ಬದಲಾಗಬೇಕು. ಇಲ್ಲದಿದ್ದರೆ ಪರಿಸರ ಮಾಲಿನ್ಯ ತಡೆಯುವುದು ಅಸಾಧ್ಯ ಎಂದು ಹವಾಮಾನ ತಜ್ಞ ವಿ.ಎಸ್.ಪ್ರಕಾಶ್ ಅಭಿಪ್ರಾಯಪಟ್ಟರು. ದಿನದಿಂದ ದಿನಕ್ಕೆ ಪರಿಸರ ಮಾಲಿನ್ಯ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ವಾಯುಮಾಲಿನ್ಯ ಮಿತಿಮೀರುತ್ತಿದೆ. ಇದರಿಂದ ಜನರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತಿದೆ ಎಂದರು.

ಜನಜಾಗೃತಿಯ ಜತೆಗೆ ಜೀವನ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡಾಗ ಮಾತ್ರ ಮಾಲಿನ್ಯ ತಡೆಯಲು ಸಾಧ್ಯವಾಗುತ್ತದೆ. ನಾನಾ ಕಾರಣಗಳಿಂದ ಮಾಲಿನ್ಯ ಉಂಟಾಗುತ್ತದೆ. ಮಾಲಿನ್ಯಕ್ಕೆ ಕಾರಣವಾಗುವ ಅಂಶಗಳನ್ನು ಕಡಿಮೆ ಮಾಡುವುದರಿಂದ ತಡೆಗಟ್ಟಬಹುದಾಗಿದೆ. ಕಟ್ಟಡ ನಿರ್ಮಾಣ, ರಸ್ತೆ ಅಭಿವೃದ್ಧಿ, ವಾಹನ ಸಂಚಾರ, ಕೈಗಾರಿಕೆ ಸೇರಿದಂತೆ ನಾನಾ ಕಾರಣಗಳಿಂದಾಗಿ ವಾಯುಮಾಲಿನ್ಯ ಉಂಟಾಗುತ್ತಿದೆ. ಇದೇ ರೀತಿ ಮುಂದುವರಿದರೆ ಶುದ್ಧ ಗಾಳಿಗೂ ಪರಿತಪಿಸಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದರು.

ವಾತಾವರಣದಲ್ಲಿ ಉಂಟಾಗುವ ಕಾರ್ಬನ್ ಡೈಆಕ್ಸೈಡ್‍ಅನ್ನು ಸಸ್ಯಗಳಂತೆ ಮಣ್ಣು ಕೂಡ ಹೀರಿಕೊಳ್ಳುತ್ತದೆ. ಆದರೆ, ಮಾಲಿನ್ಯ ಹೆಚ್ಚಾಗುತ್ತಿರುವುದರಿಂದ ಕಾರ್ಬನ್ ಡೈಆಕ್ಸೈಡ್ ಹೀರಿಕೊಳ್ಳುವ ಶಕ್ತಿ ಕಡಿಮೆಯಾಗಿದೆ. ಅತಿ ಹೆಚ್ಚಿನ ಪ್ರಮಾಣದಲ್ಲಿ ಸಮುದ್ರವು ಕಾರ್ಬನ್ ಡೈಆಕ್ಸೈಡ್ ಹೀರಿಕೊಳ್ಳುತ್ತದೆ. ಆದರೆ, ಕೆಲವೊಂದು ಸಮುದ್ರಗಳು ಮಿತಿಮೀರಿದ ಮಾಲಿನ್ಯದಿಂದಾಗಿ ಜಲಚರಗಳೇ ವಾಸಿಸದಂತಹ ಪರಿಸ್ಥಿತಿಗೆ ತಲುಪಿದ್ದು, ಅಂತಹವುಗಳನ್ನು ಡೆಡ್ ಸೀ(ಸತ್ತ ಸಮುದ್ರ) ಎಂದು ಕರೆಯಲಾಗುತ್ತದೆ ಎಂದು ಹೇಳಿದರು.

ಸಮರ್ಪಕ ತ್ಯಾಜ್ಯ ನಿರ್ವವಣೆ , ಆಹಾರ ಪದ್ಧತಿ, ಜೀವನ ಕ್ರಮಗಳು ಪರಿಸರಕ್ಕೆ ಪೂರಕವಾಗಿರಬೇಕು. ಆಗ ಮಾತ್ರ ಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ. ಚಳಿ ಹೆಚ್ಚಾದಂತೆಲ್ಲಾ ವಾಯು ಮಾಲಿನ್ಯವು ಹೆಚ್ಚಾಗುತ್ತದೆ. ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ವಾಯುಮಾಲಿನ್ಯ ಹೆಚ್ಚಾಗಿರುವ ಬಗ್ಗೆ ಚರ್ಚೆಯಾಗುತ್ತಿತ್ತು. ಇತ್ತೀಚೆಗೆ ಅಂತಹ ಪರಿಸ್ಥಿತಿ ದಕ್ಷಿಣ ಭಾರತದಲ್ಲಿ ಕಂಡು ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ವಿ.ಎಸ್.ಪ್ರಕಾಶ್ ತಿಳಿಸಿದರು.