ಭಾವನ ಮೇಲಿನ ಕೋಪದಿಂದ ಹುಸಿ ಬಾಂಬ್ ಕರೆ ಮಾಡಿದ್ದ ಆಸಾಮಿ ಅರೆಸ್ಟ್
ಬೆಂಗಳೂರು, ಮೇ 20- ತನ್ನ ಅಕ್ಕನಿಗೆ ವಿಚ್ಛೇಧನ ನೀಡಿದ ಭಾವನನ್ನು ಸಿಲುಕಿಸುವ ಹುನ್ನಾರದಿಂದ ಪೊಲೀಸ್ ಕಂಟ್ರೋಲ್ ರೂಮ್ಗೆ ಫೋನ್ ಕರೆ ಮಾಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಡಲಾಗಿದೆ ಎಂದು ಪೊಲೀಸರ ನಿದ್ದೆಗೆಡಿಸಿದ್ದ ಕೋಲ್ಕತ್ತಾದ ವ್ಯಕ್ತಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಗರದ ವಿಲ್ಸನ್ ಗಾರ್ಡನ್ನ ಪಿಜಿಯಲ್ಲಿ ವಾಸವಾಗಿದ್ದ ಸುಭಾಷಿ ಗುಪ್ತಾ (35) ಪೊಲೀಸರ ವಶದಲ್ಲಿರುವ ಆರೋಪಿ. ಪಶ್ಚಿಮ ಬಂಗಾಳದಿಂದ ಉದ್ಯೋಗ ಅರಸಿಕೊಂಡು ಬಂದು ಈ ಹಿಂದೆ ಏರ್ಪೋರ್ಟ್ನ ಕಾರ್ಗೋದ ಕೊರಿಯರ್ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ತದನಂತರದಲ್ಲಿ ಕೆಲಸ ಬಿಟ್ಟಿದ್ದನು.
ಪಿಜಿಯಲ್ಲಿ ತಂಗಿದ್ದ ಈತನಿಗೆ ಬೆಳಗಿನ ಜಾವ 3.30ರಲ್ಲಿ ನಿದ್ದೆ ಬಂದಿರಲಿಲ್ಲ. ಆ ಸಂದರ್ಭದಲ್ಲಿ ತನ್ನ ದುರಾಲೋಚನೆಯಿಂದ ಪೊಲೀಸ್ ಕಂಟ್ರೋಲ್ ರೂಂಗೆ 3.45ರ ಸುಮಾರಿನಲ್ಲಿ ದೂರವಾಣಿ ಕರೆ ಮಾಡಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೀಪಕ್ ಎಂಬಾತ ಬಾಂಬ್ ಇಟ್ಟಿದ್ದಾನೆ ಎಂದು ಹೇಳಿ ಪೋನ್ ಸ್ಥಗಿತಗೊಳಿಸಿದ್ದಾನೆ.
ತಕ್ಷಣ ಪೊಲೀಸ್ ಕಂಟ್ರೋಲ್ ರೂಂನಿಂದ ಸಂಬಂಧಪಟ್ಟ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ, ಪೊಲೀಸರು ಹಾಗೂ ಸಿಐಎಸ್ಎಫ್ ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದಾಗ ಬಾಂಬ್ ಪತ್ತೆಯಾಗಿಲ್ಲ, ಇದು ಹುಸಿಕರೆ ಎಂಬುದನ್ನು ಪೊಲೀಸರು ಖಾತರಿಪಡಿಸಿಕೊಂಡರು.
ತದನಂತರ ಪೊಲೀಸ್ ಕಂಟ್ರೋಲ್ ರೂಂಗೆ ಹುಸಿ ಕರೆ ಮಾಡಿದ ವ್ಯಕ್ತಿಯ ಪತ್ತೆಗಾಗಿ ಎಸಿಪಿ ಬಾಲಕೃಷ್ಣ ನೇತೃತ್ವದಲ್ಲಿ ತನಿಖೆ ಕೈಗೊಂಡು ಆರೋಪಿಯನ್ನು ವಶಕ್ಕೆ ತೆಗೆದುಕೊಂಡರು. ಪೊಲೀಸರು ವಿಚಾರಣೆಗೊಳಪಡಿಸಿದಾಗ, ತನ್ನ ಅಕ್ಕನಿಗೆ ಭಾವ ದೀಪಕ್ ವಿಚ್ಛೇದನ ನೀಡಿದ್ದರಿಂದ ಕೋಪಗೊಂಡು ಆತನಿಗೆ ಬುದ್ದಿ ಕಲಿಸುವ ಉದ್ದೇಶದಿಂದ ದೀಪಕ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಈ ರೀತಿ ಕರೆ ಮಾಡಿದ್ದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ.
ಈ ಬಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.