ಕೊರೊನಾ ಪಾಸಿಟಿವ್ ಬಂದ ಪ್ರಯಾಣಿಕ ವಿಮಾನ ನಿಲ್ದಾಣದಿಂದ ಪರಾರಿ..!

Spread the love

ಬೆಂಗಳೂರು, ಡಿ.8- ಇಂದು ಮುಂಜಾನೆ ಜರ್ಮನಿಯಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕನೊಬ್ಬ ಕೊರೊನಾ ಪಾಸಿಟಿವ್ ವರದಿ ಬಂದ ನಂತರ ವಿಮಾನ ನಿಲ್ದಾಣದಿಂದ ಪರಾರಿಯಾಗಿರುವ ಘಟನೆ ನಡೆದಿದೆ.

ಸುಮಾರು235ಕ್ಕೂ ಹೆಚ್ಚು ಪ್ರಯಾಣಿಕರನ್ನು ಜರ್ಮನಿಯಿಂದ ಕರೆ ತಂದ ವಿಮಾನ ಮುಂಜಾನೆ 3 ಗಂಟೆ ಸಂದರ್ಭದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಪ್ರಯಾಣಿಕರನ್ನು ಕಡ್ಡಾಯವಾಗಿ ಆರ್‍ಟಿಪಿಆರ್ ಟೆಸ್ಟ್‍ಗೆ ಒಳಪಡಿಸಲಾಗಿತ್ತು.

ಈ ವೇಳೆ ಇಬ್ಬರಿಗೆ ಕೊರೊನಾ ಪಾಸಿಟಿವ್ ಇರುವುದು ಗೊತ್ತಾದಾಗ ಎಚ್ಚೆತ್ತ ಅಧಿಕಾರಿಗಳು ಅವರನ್ನು ಕ್ವಾರಂಟೈನ್ ಮಾಡಲು ಮುಂದಾದರು. ಆದರೆ ಒಬ್ಬರು ವಿಮಾನ ನಿಲ್ದಾಣದಿಂದ ತೆರಳಿದ್ದು ಗೊತ್ತಾಗಿ ಆರೋಗ್ಯ ಸಿಬ್ಬಂದಿಗಳು ಆತಂಕಗೊಂಡು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

ಎಲ್ಲಾ ಪ್ರಯಾಣಿಕರನ್ನು ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ವಿಮಾನ ನಿಲ್ದಾಣದಲ್ಲೇ ವಿಶೇಷ ವ್ಯವಸ್ಥೆ ಮಾಡಿ ಕೂರಿಸಿ ವರದಿ ಬರುವವರೆಗೂ ಕಾಯಲಾಗುತ್ತದೆ. ಆದರೆ ಅದು ಹೇಗೆ ಕೊರೊನಾ ಪೀಡಿತ ವ್ಯಕ್ತಿ ಎಲ್ಲರ ಕಣ್ತಪ್ಪಿಸಿ ಹೋಗಿದ್ದಾರೆ ಎನ್ನುವುದು ಇನ್ನು ಗೊತ್ತಾಗಿಲ್ಲ.

ಈಗ ಅವರ ಜತೆಯಲ್ಲಿದ್ದ ಒಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು , ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಸಿಬ್ಬಂದಿಗಳ ಎಡವಟ್ಟಿನಿಂದ ಈಗ ಆತಂಕ ಸೃಷ್ಟಿಯಾಗಿದ್ದು, ಪರಾರಿಯಾಗಿರುವ ಪ್ರಯಾಣಿಕನ ವಿಳಾಸವನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ.

ಆತ ಕಾರಿನಲ್ಲಿ ಅಥವಾ ಬಸ್‍ನಲ್ಲಿ ತೆರಳಿದ್ದರೆ, ಆತ ಯಾರ್ಯಾರಿಗೆ ಸೋಂಕು ಹಬ್ಬಿಸುತ್ತಾರೋ ಎನ್ನುವ ಭಯ ಆವರಿಸಿದೆ. ವಿಮಾನ ಯಾನ ಸಂಸ್ಥೆಯ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.

Facebook Comments