ಅಕ್ಷಯ ತೃತೀಯ ಮಹತ್ವವೇನು..? ಈ ದಿನ ಮಾಡುವ ಕೆಲಸ ನಿಜಕ್ಕೂ ಲಾಭದಾಯಕವಾಗಿರುತ್ತಾ..?

Spread the love

ಬೆಂಗಳೂರು,ಮೇ3- ಅಕ್ಷಯ ಎಂಬ ಪದದ ಅರ್ಥ ಅಮರ ಅಥವಾ ಎಂದಿಗೂ ಕೊನೆಗೊಳ್ಳದು. ಈ ಹಬ್ಬದ ಮಹತ್ವ ಏನೆಂದರೆ ಈ ದಿನದಂದು ಅದೃಷ್ಟದ ಗೆರೆ ಬದಲಾಗುತ್ತದೆ ಎಂಬುದು ಹಿಂದೂಗಳ ನಂಬಿಕೆಯಾಗಿದೆ.ಹೀಗಾಗಿ ಈ ದಿನ ಬರೀ ಚಿನ್ನಾಭರಣ ಖರೀದಿ ಅಷ್ಟೇ ಅಲ್ಲದೆ ಲೋಕ ಕಲ್ಯಾಣರ್ಥವಾಗಿ ಮಾಡುವ ಪೂಜೆ ಹವನಗಳನ್ನು ಕೈಗೊಳ್ಳುತ್ತಾರೆ. ಈ ಶುಭ ದಿನದಂದು ಯಾವುದೇ ಕೆಲಸವನ್ನು ಕಾರ್ಯರಂಭ ಮಾಡಿದರೆ ಒಳಿತಾಗುವುದರ ಜೊತಗೆ ಶ್ರೇಯಸ್ಸು ವೃದ್ದಿಯಾಗುತ್ತದೆ ಎಂದು ಜನರು ನಂಬುತ್ತಾರೆ.

ಇಂದು ದೇಶಾದ್ಯಂತ ಅಕ್ಷಯ ತೃತೀಯ ಆಚರಿಸಲಾಗುತ್ತಿದೆ. ಈ ದಿನದಂದು ಏನೇ ಕೊಂಡರೂ ಅದು ಇಮ್ಮಡಿಯಾಗುತ್ತದೆ ಎಂಬುದು ಜನರ ನಂಬಿಕೆ. ಮುಖ್ಯವಾಗಿ ಮಹಿಳೆಯರು ಈ ದಿನ ಚಿನ್ನಾಭರಣಗಳ ಖರೀದಿಗೆ ಹೆಚ್ಚು ಒಲವು ತೋರುತ್ತಾರೆ.

ಹೀಗಾಗಿ ವರ್ಷವಿಡೀ ಸಂಪತ್ತಿನಿಂದ ಆಶೀರ್ವದಿಸಬೇಕೆಂದು ದೇವರಲ್ಲಿ ಉಪವಾಸ, ವಿಶೇಷ ಪುಜಾದಿ ಕ್ರಿಯೆಗಳನ್ನು ಮಾಡಿ ಚಿನ್ನವನ್ನು ಖರೀದಿಸುತ್ತಾರೆ. ಪ್ರತಿ ವರ್ಷ ಪ್ರಪಂಚದಾದ್ಯಂತದ ಹಿಂದೂ ಮತ್ತು ಜೈನ ಸಮುದಾಯದವರಿಂದ ಬಹಳ ಉತ್ಸಾಹದಿಂದ ಈ ಹಬ್ಬ ಆಚರಿಸಲಾಗುತ್ತದೆ.

ಭಗವಂತ ವಿಷ್ಣು ಮತ್ತು ಇತರ ಹಿಂದೂ ದೇವರುಗಳನ್ನು ಅಕ್ಷಯ ತೃತೀಯದಲ್ಲಿ ವಿಶೇಷವಾಗಿ ಪೂಜಿಸಲಾಗುತ್ತದೆ. ಈ ಸಂದರ್ಭದಲ್ಲಿ ಉಪವಾಸ ಮಾಡುವ ಕೈಗೊಂಡು ವಿಶೇಷವಾಗಿ ಸೂರ್ಯದೇವನಿಗೂ ಪೂಜೆ ಸಲ್ಲಿಸುತ್ತಾರೆ.

ಅಲ್ಲದೆ ಹಣದ ದೇವರು ಎಂದೇ ಕರೆಯುವ ಕುಬೇರ ಹಾಗೂ ದೇವಿ ಲಕ್ಷ್ಮಿ (ಸಂಪತ್ತು ಮತ್ತು ಅದೃಷ್ಟ)ಗೆ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಕುಬೇರನ ಭಕ್ತಿಯಿಂದ ಸಂತುಷ್ಟಳಾದ ಆಕೆ ಅಕ್ಷಯ ತೃತೀಯದಂದು ಆತನ ಮೇಲೆ ಹಣ ಮತ್ತು ಸಂಪತ್ತನ್ನು ಸುರಿಸುವಳು ಎಂಬುದು ಜನರ ನಂಬಿಕೆಯಾಗಿದೆ.

ಅಕ್ಷಯ ತೃತೀಯವನ್ನು ದೇಶದ ವಿವಿಧ ಭಾಗಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಛತ್ತೀಸ್‍ಗಢ ರಾಜ್ಯದಲ್ಲಿ ಈ ಸಂದರ್ಭವನ್ನು ಅಕ್ತಿ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ. ಗುಜರಾತ್ ಮತ್ತು ರಾಜಸ್ಥಾನದ ಪಶ್ಚಿಮ ರಾಜ್ಯಗಳಲ್ಲಿ ಹಬ್ಬವನ್ನು ಅಖಾ ತೀಜ್ ಎಂದು ಕರೆಯಲಾಗುತ್ತದೆ.

ಭಾರತದಲ್ಲಿ ಜನರು ಚಿನ್ನ, ಬೆಲೆಬಾಳುವ ಆಭರಣಗಳನ್ನು ಖರೀದಿಸುತ್ತಾರೆ ಮತ್ತು ಅದೇ ನಂಬಿಕೆಗಾಗಿ ಅಕ್ಷಯ ತೃತೀಯದಲ್ಲಿ ಹಣದ ಹೂಡಿಕೆಗಳನ್ನು ಮಾಡುತ್ತಾರೆ. ಹೊಸ ವ್ಯಾಪಾರ ಉದ್ಯಮಗಳು, ಪಾಲುದಾರಿಕೆಗಳು ಮತ್ತು ಉದ್ಯೋಗಗಳ ಆರಂಭವನ್ನು ಸಹ ಬಹಳ ಅದೃಷ್ಟವೆಂದು ಪರಿಗಣಿಸಲಾಗುತ್ತದೆ.

ಸಾಮಾನ್ಯವಾಗಿ, ಅಕ್ಷಯ ತೃತೀಯ ಮತ್ತು ಪರಶುರಾಮ ಜಯಂತಿಯ (ಭಗವಾನ್ ವಿಷ್ಣುವಿನ 6ನೇ ಅವತಾರ) ಜನ್ಮದಿನದ ವಾರ್ಷಿಕೋತ್ಸವವು ಒಂದೇ ದಿನದಲ್ಲಿ ಬರುತ್ತದೆ. ಈ ವರ್ಷವೂ ಇಂದು ಅಕ್ಷಯ ತೃತೀಯದೊಂದಿಗೆ ಪರಶುರಾಮ ಜಯಂತಿಯೂ ನಡೆಯುತ್ತದೆ.

Facebook Comments

Sri Raghav

Admin