ಬೆಂಗಳೂರು, ಪಾಟ್ನಾ ಅಲ್‍ಕೈದಾ ಉಗ್ರರ ಟಾರ್ಗೆಟ್..!

Spread the love

ಬೆಂಗಳೂರು/ಪಾಟ್ನಾ, ಸೆ.21- ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಸೆರೆ ಹಿಡಿದಿರುವ ಅಲ್ ಕೈದಾ ಭಯೋತ್ಪಾದಕರ ವಿಚಾರಣೆಯಿಂದ ಕೆಲವು ಆತಂಕಕಾರಿ ಮಾಹಿತಿ ಲಭ್ಯವಾಗಿದೆ.   ಬೆಂಗಳೂರು ಮತ್ತು ಬಿಹಾರದ ರಾಜಧಾನಿ ಪಾಟ್ನಾ ಈ ಉಗ್ರಗಾಮಿಗಳ ಉದ್ದೇಶಿತ ವಿಧ್ವಂಸಕ ಕೃತ್ಯಗಳ ಹಾಟ್ ಟಾರ್ಗೆಟ್ ಆಗಿತ್ತು ಎಂಬ ಸ್ಫೋಟಕ ಮಾಹಿತಿ ಲಭಿಸಿದೆ.

ದೆಹಲಿ, ಮುಂಬೈ, ಕೊಚ್ಚಿ, ಶ್ರೀನಗರ ನಗರಗಳಿಗಿಂತಲೂ ಬೆಂಗಳೂರು ಮತ್ತು ಪಾಟ್ನಾ ಜಿಲ್ಲೆಗಳಲ್ಲಿ ವಿಧ್ವಂಸಕ ದಾಳಿಗಳಿಗೆ ಅಲ್ ಕೈದಾ ಉಗ್ರರು ಸಜ್ಜಾಗಿದ್ದರು ಎಂಬ ಮಾಹಿತಿ ಲಭಿಸಿರುವುದಾಗಿ ಎನ್‍ಐಎ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಗಳೂತು ಮತ್ತು ಪಾಟ್ನಾದ ಜನನಿಬಿಡ ಪ್ರದೇಶಗಳ ಮೇಲೆ ಸಮಯ ಸಾಧಿಸಿ ಆತ್ಮಾಹುತಿ ದಾಳಿ ಸೇರಿದಂತೆ ವಿಧ್ವಂಸಕ ಕೃತ್ಯಗಳನ್ನು ಎಸಗಲು ಈ ಉಗ್ರರು ಯೋಜನೆ ರೂಪಿಸಿದ್ದರು ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಭಯೋತ್ಪಾದಕರು ಸಕ್ರಿಯವಾಗಿದ್ದಾರೆಂಬ ಮಾಹಿತಿ ಬೆನ್ನಲ್ಲೇ ಕುಖ್ಯಾತ ಉಗ್ರಗಾಮಿ ಸಂಘಟನೆ ಅಲ್-ಕೈದಾ ಉಗ್ರರ ವಕ್ರದೃಷ್ಟಿ ರಾಜ್ಯದ ಮೇಲಿದೆ ಎಂಬ ಆತಂಕಕಾರಿ ಸಂಗತಿ ಮೊನ್ನೆಯಷ್ಟೇ ಬಯಲಾಗಿತ್ತು.

ವಿಶ್ವದ ಅತ್ಯಂತ ಕ್ರೂರ ಉಗ್ರಗಾಮಿ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ (ಐಸಿಸ್)ದ ಭಯೋತ್ಪಾದಕರು ಈಗಾಗಲೇ ರಾಜ್ಯದಲ್ಲಿ ಸಕ್ರಿಯವಾಗಿದ್ದಾರೆ ಎಂಬ ಸ್ಟಷ್ಟ ಮಾಹಿತಿ ನಡುವೆಯೇ ಅಲ್-ಕೈದಾ ಸಂಘಟನೆಯ ಬೇರುಗಳು ಕರ್ನಾಟಕದಲ್ಲಿ ಆಳವಾಗಿ ಬೇರೂರಲು ಸಜ್ಜಾಗಿದೆ ಎಂಬ ಆಘಾತಕಾರಿ ವರದಿಯೂ ಲಭಿಸಿದೆ.

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಅಲ್-ಕೈದಾ ಉಗ್ರರೂ ಸಹ ಸಕ್ರಿಯವಾಗುತ್ತಿದ್ದು, ಭಯೋತ್ಪಾದನೆ ಚಟುವಟಿಕೆಗಳಲ್ಲಿ ತೊಡಗಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.  ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಪಶ್ಚಿಮ ಬಂಗಾಳ, ರಾಜಸ್ತಾನ, ಉತ್ತರ ಪ್ರದೇಶ, ಬಿಹಾರ, ಜಮ್ಮು-ಕಾಶ್ಮೀರ ಸೇರಿದಂತೆ ದೇಶದ ವಿವಿಧೆಡೆ ಅಲ್‍ಕೈದಾ ಮತ್ತು ಐಸಿಸ್ ಉಗ್ರಗಾಮಿಗಳು ಸಕ್ರಿಯವಾಗಿದ್ದಾರೆ ಎಂದು ಮೊನ್ನೆಯಷ್ಟೇ ಕೇಂದ್ರ ಸರ್ಕಾರ ಸಂಸತ್ ಅಧಿವೇಶನದಲ್ಲಿ ಮಾಹಿತಿ ನೀಡಿತ್ತು.

ಈ ರಾಜ್ಯಗಳಲ್ಲಿ ಇರುವ ನೌಕಾ ನೆಲೆಗಳು, ಸೇನಾ ಕೇಂದ್ರಗಳು, ಜನನಿಬಿಡ ಸ್ಥಳಗಳು ಭಯೋತ್ಪಾದಕರ ಗುರಿಯಾಗಿತ್ತು.  ದಕ್ಷಿಣ ಭಾರತದ 17 ಸ್ಥಳಗಳಲ್ಲಿ ಇತ್ತೀಚೆಗೆ ದಾಳಿಗಳನ್ನು ನಡೆಸಿದ್ದ ಎನ್‍ಐಎ 122 ಐಸಿಸ್ ಉಗ್ರಗಾಮಿಗಳನ್ನು ಬಂಧಿಸಿತ್ತು.

ಕೇರಳದಲ್ಲಿ ಮೂವರು ಆಲ್-ಕೈದಾ ಉಗ್ರಗಾಮಿಗಳನ್ನು ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಬಂಧಿಸಿ ಅಪಾರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದು, ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲೂ ಈ ಘಟನೆಯ ಆತಂಕವಾದಿಗಳು ಸಕ್ರಿಯವಾಗಿರುವ ಸಾಧ್ಯತೆ ದಟ್ಟವಾಗಿದೆ ಎಂದು ದೆಹಲಿಯ ಎನ್‍ಐಎ ಉನ್ನತಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಭಯೋತ್ಪಾದನೆ ಚಟುವಟಿಕೆಗಳಿಗಾಗಿ ಹಣ ಕ್ರೋಢೀಕರಣ, ಶಸ್ತ್ರಾಸ್ತ್ರಗಳ ಸಂಗ್ರಹ, ಸ್ಥಳೀಯ ಯುವಕರನ್ನು ಸಂಘಟನೆಯತ್ತ ಸೆಳೆಯುವಿಕೆ, ದಾಳಿಗಾಗಿ ಸ್ಥಳಗಳ ಬಗ್ಗೆ ನಿಗಾವಹಿಸುವಿಕೆ, ಭದ್ರತೆಗೆ ಸಂಬಂಧಪಟ್ಟಗಳ ಮಾಹಿತಿ ಕಲೆ ಹಾಕುವಿಕೆ ಮೊದಲಾದ ಚಟುವಟಿಕೆಗಳಲ್ಲಿ ಅಲ್-ಕೈದಾ ಉಗ್ರರು ಸಕ್ರಿಯವಾಗಿದ್ದು, ಇದಕ್ಕಾಗಿ ಸ್ಥಳೀಯ ಯುವಕರು ಮತ್ತು ಸಮಾಜಘಾತುಕ ಶಕ್ತಿಗಳ ಸಹಕಾರ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರು ಸೇರಿದಂತೆ ಕೆಲವು ನಗರಗಳ ಯುವಕರು ಐಸಿಸ್ ಉಗ್ರಗಾಮಿ ಸಂಘಟನೆ ಸೇರಿ ಸಿರಿಯಾ ಮತ್ತು ಇರಾಕ್‍ಗೆ ತೆರಳಿಸುವ ಮಾಹಿತಿ ಇದೆ. ಮೊನ್ನೆಯಷ್ಟೇ ಸೇನಾ ಕಾರ್ಯಾಚರಣೆಯಲ್ಲಿ ಬೆಂಗಳೂರು ಮೂಲದ ಐಸಿಸ್ ಉಗ್ರ ಹತನಾಗಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಐಸಿಸ್ ಜತೆ ಅಲ್‍ಕೈದಾ ಉಗ್ರರೂ ರಾಜ್ಯದಲ್ಲಿ ಸಕ್ರಿಯವಾಗಿದ್ದು, ಸಮಯ ಸಾಧಿಸಿ ದಾಳಿಗಳನ್ನು ನಡೆಸುವ ಸಾಧ್ಯತೆ ಇರುವುದರಿಂದ ತೀವ್ರ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ ಎಂದು ಅವರು ಮಾಹಿತಿ ಒದಗಿಸಿದ್ದಾರೆ.

Facebook Comments