2030ರೊಳಗೆ ಎಲ್ಲಾ ಬಸ್‍ಗಳನ್ನು ವಿದ್ಯುತ್ ಚಾಲಿತ ಬಸ್‍ಗಳಾಗಿ ಪರಿವರ್ತಿಸುವ ಗುರಿ

Social Share

ಬೆಂಗಳೂರು,ಸೆ.14- 2030ರೊಳಗೆ ರಾಜ್ಯಾದ್ಯಂತ ಸಾರಿಗೆ ಸಂಸ್ಥೆಯ ಎಲ್ಲ ಬಸ್‍ಗಳನ್ನು ವಿದ್ಯುತ್ ಚಾಲಿತ ಬಸ್‍ಗಳನ್ನಾಗಿ ಪರಿವರ್ತಿಸಿ ಕಾರ್ಯಾಚರಣೆಗಿಳಿಸುವ ಗುರಿ ಹೊಂದಲಾಗಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ಒಂದು ಕಡೆ ಹೆಚ್ಚುತ್ತಿರುವ ಡೀಸೆಲ್ ದರ ಮತ್ತೊಂದು ಕಡೆ ನಿರ್ವಹಣೆ ಸಾಧ್ಯವಾಗದೆ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ಹೀಗಾಗಿ 2030ರೊಳಗೆ ರಾಜ್ಯಾದ್ಯಂತ ಸಾರಿಗೆ ಸಂಸ್ಥೆಯ ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲ ನಿಗಮಗಳ ಬಸ್‍ಗಳನ್ನು ಡೀಸೆಲ್‍ನಿಂದ ವಿದ್ಯುತ್ ಚಾಲಿತ ಬಸ್‍ಗಳನ್ನಾಗಿ ಪರಿವರ್ತಿಸಲು ತೀರ್ಮಾನಿಸಲಾಗಿದೆ. ಇದು ನಮ್ಮ ಸಂಕಲ್ಪ ಎಂದರು.

ಪ್ರಸ್ತುತ ರಾಜ್ಯದಲ್ಲಿ 35 ಸಾವಿರ ಬಸ್‍ಗಳು ಕಾರ್ಯ ನಿರ್ವಹಿಸುತ್ತಿವೆ. ದಿನದಿಂದ ದಿನಕ್ಕೆ ಡೀಸೆಲ್ ದರ ಹೆಚ್ಚಳವಾಗುತ್ತಿದೆ. ಇದರಿಂದ ಇಂಧನ ದರ ಹೆಚ್ಚಳವಾಗುತ್ತಿದೆ. ಸಂಸ್ಥೆಗಳನ್ನು ನಿರ್ವಹಣೆ ಮಾಡುವುದೇ ಸವಾಲಾಗಿದೆ. ಡೀಸೆಲ್‍ನಿಂದ ವಿದ್ಯುತ್ ಚಾಲಿತವನ್ನಾಗಿ ಪರಿವರ್ತಿಸಲು ಮುಖ್ಯಮಂತ್ರಿಗಳು ಎಲ್ಲ ಸಹಕಾರ ಕೊಡುತ್ತಿದ್ದಾರೆ ಎಂದರು.

ಪರಿಸರದ ಮೇಲೆ ಇವುಗಳು ಯಾವುದೇ ರೀತಿಯ ದುಷ್ಪರಿಣಾಮ ಬೀರುವುದಿಲ್ಲ. ಇದಕ್ಕಾಗಿ ಇಲಾಖೆಯು ಅಗತ್ಯ ಸಿದ್ದತೆಗಳನ್ನು ಕೈಗೊಂಡಿದೆ ಎಂದು ಹೇಳಿದರು. ನಾವು ಪ್ರಾಯೋಗಿಕವಾಗಿ ಪ್ರಸ್ತುತ ಸ್ಮಾರ್ಟ್ ಸಿಟಿ ಯೋಜನೆಯಡಿ ಬಿಎಂಟಿಸಿಯಲ್ಲಿ 90 ವಿದ್ಯುತ್ ವಾಹನಗಳನ್ನು ಗುತ್ತಿಗೆ ಆಧಾರದ ಮೇಲೆ 12 ವರ್ಷಗಳ ಅವಧಿಗೆ ಕಾರ್ಯಾಚರಣೆ ನಡೆಸುತ್ತಿದ್ದೇವೆ.

ಈ ವಿದ್ಯುತ್ ಬಸ್ ಪ್ರತಿ ಕಿ.ಮೀ ವೆಚ್ಚವು 64.67 ರೂ. ಆಗಿದೆ. ಇಂಧನ ವೆಚ್ಚದ ಉಳಿತಾಯಕ್ಕಾಗಿ ಇವುಗಳನ್ನು ಖರೀದಿ ಮಾಡಿದ್ದೇವೆ. ಕೇಂದ್ರ ಸರ್ಕಾರವು ಸೇಮ್2 ಯೋಜನೆಯಡಿ 300 ವಿದ್ಯುತ್ ಚಾಲಿತ ಬಸ್‍ಗಳನ್ನು ಖರೀದಿಸಲ ಅನುಮತಿ ನೀಡಿತ್ತು.

ಇದರಲ್ಲಿ ಈಗಾಗಲೇ 75 ಬಸ್‍ಗಳು ಕಾರ್ಯಾಚರಣೆ ನಡೆಸುತ್ತಿವೆ. ಪ್ರತಿ ಕಿ.ಮೀ ವೆಚ್ಚವೂ 61 ರೂ. 90 ಪೈಸೆ ಆಗಿವೆ ಎಂದು ತಿಳಿಸಿದರು. ಉಳಿದಿರುವ 225 ಬಸ್‍ಗಳು ಶೀಘ್ರದಲ್ಲೇ ಲಭ್ಯವಾಗಲಿವೆ. ಸಿಇಎಸ್‍ಎಲ್ ಮುಖಾಂತರ ಕೇಂದ್ರ ಸರ್ಕಾರ ಸೇಮ್2 ಯೋಜನೆಯಲ್ಲಿ 921 ವಿದ್ಯುತ್ ಬಸ್‍ಗಳ ಕಾರ್ಯಾಚರಣೆ ನಡೆಸಲು ಆದೇಶ ಕೊಟ್ಟಿದೆ. ಪ್ರತಿಯೊಂದು ಕಿ.ಮೀಗೆ 54 ರೂ. ವೆಚ್ಚ ತಗಲಿದೆ. ಬಿಎಂಟಿಸಿಯಲ್ಲಿ ಖರೀದಿ ಮಾಡಿರುವ ಬಸ್‍ಗಳ ನಿರ್ವಹಣೆಯನ್ನು ಕಂಪನಿಯವರು ನಿರ್ವಹಿಸುತ್ತಾರೆ ಎಂದರು.

ನಾವು ನಿರ್ವಾಕರನ್ನು ಮಾತ್ರ ನಿಗಮದಿಂದ ನೀಡುತ್ತೇವೆ. ಚಾಲಕರ ಸೇರಿ ಉಳಿದಂತೆ ಎಲ್ಲವನ್ನು ಅವರೇ ನಿರ್ವಹಿಸಬೇಕು. ಇದು 12 ವರ್ಷಗಳ ಅವಧಿಯದ್ದಾಗಿದೆ. ವಿದ್ಯುತ್ ಚಾಲಿತ ಬಸ್‍ಗಳನ್ನು ಓಡಿಸುವುದರಿಂದ ಸಂಸ್ಥೆಗೆ ಲಾಭವಾಗುವುದಾದರೆ ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಗಂಭೀರ ಚಿಂತನೆ ನಡೆಸಿದ್ದೇವೆ ಎಂದರು.

ಅಗತ್ಯಕ್ರಮ: ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯಕ್.ಕೆ.ಬಿ ಅವರ ಪ್ರಶ್ನೆಗೆ ಉತ್ತರಿಸಿ ಸಚಿವ ರಾಮುಲು, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಅಗತ್ಯವಿರುವ ಕಡೆ ಬಸ್‍ಗಳ ನಿಲುಗಡೆ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದರು.

210 ಗ್ರಾಮಗಳ ಪೈಕಿ 176 ಗ್ರಾಮಗಳು ಹಾಗೂ ಭದ್ರಾವತಿ ತಾಲ್ಲೂಕಿನ 69 ಗ್ರಾಮಗಳಿಗೆ ವ್ಯವಸ್ಥೆ ಮಾಡಲಾಗುವುದು. ಇದರಲ್ಲಿ ಗ್ರಾಮಾಂತರ ಕ್ಷೇತ್ರದಲ್ಲಿ 787 ಏಕ ಸುತ್ತುವಳಿ ಹಾಗೂ ಇತರೆ ಮಾರ್ಗಗಳಲ್ಲಿ 1591 ಏಕ ಸುತ್ತುವಳಿ ಕಾರ್ಯ ನಿರ್ವಹಿಸುತ್ತಿವೆ. ಒಂದು ವೇಳೆ ಶಾಸಕರ ಕ್ಷೇತ್ರದಲ್ಲಿ ಬಸ್‍ಗಳ ಕೊರತೆ ಇದ್ದರೆ ಅಗತ್ಯಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ನೆಲಮಂಗಲ ಶಾಸಕ ಶ್ರೀನಿವಾಸ ಮೂರ್ತಿಯವರು ತಮ್ಮ ಕ್ಷೇತ್ರದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದ್ದು, ನಗರಸಭೆ ಹಾಗೂ ಸಾರಿಗೆ ಇಲಾಖೆ ಒಪ್ಪಂದ ಮಾಡಿಕೊಳ್ಳದ ಕಾರಣ ಬಸ್ ನಿಲ್ದಾಣ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂದು ಸಚಿವರ ಗಮನಕ್ಕೆ ತಂದರು.

ಇದಕ್ಕೆ ಉತ್ತರಿಸಿದ ಶ್ರೀರಾಮುಲು, ಇದು 40 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಹೈಟೆಕ್ ಬಸ್ ನಿಲ್ದಾಣವಾಗಿದೆ. ಈಗಾಗಲೇ ತಳಪಾಯದ ಕೆಲಸ ಪೂರ್ಣಗೊಂಡಿದ್ದು, ಮೇಲ್ಛಾವಣಿ ಕೆಲಸ ನಡೆಯುತ್ತಿವೆ. ಅಕ್ರಮದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಮುಖ್ಯ ಇಂಜಿನಿಯರ್‍ಗಳಿಂದ ತನಿಖೆ ನಡೆಸಲು ಸೂಚಿಸಲಾಗಿತ್ತು. ಯಾವುದೇ ಲೋಪ ಕಂಡುಬಂದಿಲ್ಲ ಎಂದು ವರದಿ ನೀಡಿದ್ದಾರೆ ಎಂದು ತಿಳಿಸಿದರು.

Articles You Might Like

Share This Article