ಸರ್ವಪಕ್ಷ ಸಭೆಯತ್ತ ಎಲ್ಲರ ಚಿತ್ತ

ಬೆಂಗಳೂರು, ಏ.14- ದೇಶದಲ್ಲೇ ಅತಿ ಹೆಚ್ಚು ಸೋಂಕು ಹಬ್ಬುತ್ತಿರುವ ರಾಜ್ಯಗಳ ಪೈಕಿ ಒಂದಾಗಿರುವ ಕರುನಾಡಿನಲ್ಲಿ ಕಠಿಣ ನಿಯಮಗಳನ್ನು ಜಾರಿ ಮಾಡುವ ಕುರಿತಾಗಿ ಭಾನುವಾರ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳಲಿದೆ. ಹೀಗಾಗಿ ಭಾನುವಾರ ನಡೆಯಲಿರುವ ಸರ್ವಪಕ್ಷಗಳ ಸಭೆಯತ್ತ ಕರ್ನಾಟಕದ ಆರೂವರೆ ಕೋಟಿ ಕನ್ನಡಿಗರು ಚಾತಕ ಪಕ್ಷಿಯಂತೆ ಕಾತರದಿಂದ ಎದುರು ನೋಡುತ್ತಿದ್ದಾರೆ.

ಅಂದು ಸಂಜೆ 4 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಗೆ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಸರ್ವಪಕ್ಷಗಳ ನಾಯಕರನ್ನು ಆಹ್ವಾನಿಸಲಾಗಿದೆ. ನಿನ್ನೆಯಷ್ಟೆ ಮಹಾರಾಷ್ಟ್ರ ಸರ್ಕಾರ 15 ದಿನಗಳ ಕಾಲ ಜನತಾ ಕಫ್ರ್ಯೂ ವಿಧಿಸಿ ಘೋಷಣೆ ಮಾಡಿದೆ. ರಾಜ್ಯದಲ್ಲಿ ಲಾಕ್‍ಡೌನ್ ಜಾರಿ ಮಾಡುವ ಕುರಿತಂತೆ ಕೆಲವು ವದಂತಿಗಳು ಹಬ್ಬಿದ್ದವು. ಆದರೆ, ಇದಕ್ಕೆ ಸ್ವತಃ ಸಿಎಂ ಯಡಿಯೂರಪ್ಪನವರೇ ತೆರೆ ಎಳೆದಿದ್ದಾರೆ.

ರಾಜ್ಯದಲ್ಲಿ ಸದ್ಯಕ್ಕೆ ಲಾಕ್‍ಡೌನ್ ಜಾರಿ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಿಎಂ ಹಾಗೂ ಸಚಿವರಾದ ಬಸವರಾಜ ಬೊಮ್ಮಾಯಿ, ಡಾ.ಕೆ.ಸುಧಾಕರ್, ಶ್ರೀರಾಮುಲು ಸ್ಪಷ್ಟನೆ ನೀಡಿರುವುದರಿಂದ ಈಗ ಸರ್ಕಾರದ ನಡೆ ಕುತೂಹಲಕ್ಕೆ ಕಾರಣವಾಗಿದೆ. ಲಾಕ್‍ಡೌನ್ ಜಾರಿ ಮಾಡದೆ ನಾವು ಕೋವಿಡ್ ನಿಯಂತ್ರಣ ಮಾಡುತ್ತೇವೆ ಎಂದು ಸರ್ಕಾರ ಹೇಳಿದೆ. ಕೆಲವು ಕಠಿಣ ನಿಯಮಗಳನ್ನು ಜಾರಿ ಮಾಡಲಾಗುವುದು ಎಂದು ಸರ್ಕಾರ ಸುಳಿವು ಕೊಟ್ಟಿದೆ.

ಕಠಿಣ ನಿಯಮ ಜಾರಿ: ಮೂಲಗಳ ಪ್ರಕಾರ, ಭಾನುವಾರ ನಡೆಯಲಿರುವ ಸರ್ವಪಕ್ಷಗಳ ಸಭೆಯಲ್ಲಿ ಸರ್ಕಾರ ಲಾಕ್‍ಡೌನ್ ಹೊರತುಪಡಿಸಿ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಲಿದೆ ಎಂದು ಗೊತ್ತಾಗಿದೆ. ಸದ್ಯ ಎಂಟು ಜಿಲ್ಲೆಗಳಲ್ಲಿ ರಾತ್ರಿ 10 ಗಂಟೆಯಲ್ಲಿ ಮುಂಜಾನೆ 5 ಗಂಟೆವರೆಗೆ ಕೊರೊನಾ ಕಫ್ರ್ಯೂ ವಿಧಿಸಲಾಗಿದೆ. ಈ ಸಮಯವನ್ನು ಪರಿಷ್ಕರಣೆ ಮಾಡಲಿದ್ದು, ರಾತ್ರಿ 8 ಗಂಟೆಯಿಂದ ಮುಂಜಾನೆ 6 ಗಂಟೆವರೆಗೂ ವಿಸ್ತರಣೆಯಾಗಲಿದೆ ಎಂದು ಗೊತ್ತಾಗಿದೆ.

ಇದರ ಜತೆಗೆ ಇನ್ನೂ ಕೆಲವು ಜಿಲ್ಲೆಗಳಿಗೆ ಕೊರೊನಾ ಕಫ್ರ್ಯೂವನ್ನು ವಿಸ್ತರಣೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಕೋಲಾರ, ಶಿವಮೊಗ್ಗ, ದಾವಣಗೆರೆ, ಬೆಳಗಾವಿ, ಧಾರವಾಡ ಸೇರಿದಂತೆ ಮತ್ತಿತರ ಕಡೆ ಕಫ್ರ್ಯೂ ಜಾರಿಯಾಗುವ ಲಕ್ಷಣಗಳು ಗೋಚರಿಸಿವೆ. ಸಾಧ್ಯವಾದರೆ ಕಫ್ರ್ಯೂವನ್ನು ತಾಲ್ಲೂಕು ಮಟ್ಟದಲ್ಲೂ ವಿಸ್ತರಣೆ ಮಾಡಬೇಕೆಂದು ತಜ್ಞರ ಸಲಹಾ ಸಮಿತಿ ಸರ್ಕಾರಕ್ಕೆ ಸಲಹೆ ಮಾಡಿದೆ.

# ಕೋವಿಡ್ ಕೇರ್ ಸೆಂಟರ್‍ಗಳ ಹೆಚ್ಚಳ:
ಬೆಂಗಳೂರು ಸೇರಿದಂತೆ ಕೊರೊನಾ ಸೋಂಕು ಪ್ರಮಾಣ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಕೋವಿಡ್ ಕೇರ್ ಸೆಂಟರ್‍ಗಳನ್ನು ಹೆಚ್ಚಳ ಮಾಡುವ ಸಂಭವವಿದೆ. ಈಗಾಗಲೇ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಎದುರಾಗಿರುವುದರಿಂದ ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಸೇರಿದಂತೆ ಮತ್ತಿತರ ವಿದ್ಯಾರ್ಥಿ ನಿಲಯಗಳನ್ನು ಕೋವಿಡ್ ಕೇಂದ್ರಗಳನ್ನಾಗಿ ಪರಿವರ್ತಿಸಲು ಸರ್ಕಾರ ಸೂಚನೆ ಕೊಡಲಿದೆ.

ಸದ್ಯ ಶಾಲಾ-ಕಾಲೇಜುಗಳು ಬಂದ್ ಆಗಿದ್ದು, ಇನ್ನೂ ಎರಡು ತಿಂಗಳು ಆರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ಕೋವಿಡ್-19 ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಸಮಸ್ಯೆ ಉಂಟಾದರೆ ವಿದ್ಯಾರ್ಥಿ ನಿಲಯಗಳನ್ನೇ ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ಈಗಾಗಲೇ ಮೌಖಿಕ ಸೂಚನೆ ಕೊಡಲಾಗಿದೆ. ಅಂತರ್ ರಾಜ್ಯ ನಿರ್ಬಂಧ: ನೆರೆಯ ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ಮತ್ತಿತರ ಕಡೆ ಸೋಂಕು ಪ್ರಕರಣ ಹೆಚ್ಚಾಗು ತ್ತಿರುವುದರಿಂದ ಇನ್ನು ಮುಂದೆ ಪ್ರಯಾಣಿಕರಿಗೆ ಅಂತಾ ರಾಜ್ಯ ನಿರ್ಬಂಧ ವಿಧಿಸುವ ಸಾಧ್ಯತೆ ಇದೆ.

ಕರ್ನಾಟಕಕ್ಕೆ ಬರಬೇಕಾದರೆ ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ಹಾಗೂ ಕೋವಿಡ್ ಟೆಸ್ಟ್‍ಗೆ ಒಳಗಾಗಲೇಬೇಕೆಂಬ ನಿಯಮವನ್ನು ಸರ್ಕಾರ ಜಾರಿ ಮಾಡಲಿದೆ. ಗಡಿಗಳನ್ನು ಹೊಂದಿರುವ ಜಿಲ್ಲೆಗಳಾದ ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಳಗಾವಿ, ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಬಳ್ಳಾರಿ ಮತ್ತಿತರ ಕಡೆ ಚೆಕ್‍ಪೋಸ್ಟ್‍ಗಳನ್ನು ಬಿಗಿಗೊಳಿಸಲು ಜಿಲ್ಲಾಧಿಕಾರಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಿಗೂ ಸರ್ಕಾರ ಈಗಾಗಲೇ ಸೂಚನೆ ಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ.